ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದಡಿ ಐದು ವರ್ಷ ಸೇವೆ : ಅನ್ಸಾರಿ

 

ಕೊಪ್ಪಳ, ಎ. ೧೫: ಜನರ ಆಶೀರ್ವಾದದಿಂದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದಡಿ ಐದು ವರ್ಷ ಕ್ಷೇತ್ರದ ಅಭಿವೃದ್ದಿ ಮಾಡಿದ್ದೇನೆ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
ಅವರು ಗಂಗಾವತಿ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ತಾಲೂಕಿನ ವನ ಬಳ್ಳಾರಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದರು. ದೇಶದಲ್ಲಿಯೇ ಅತ್ಯಂತ ಜನಪರ ಆಡಳಿತ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರು ತಮ್ಮ ಅಭಿವೃದ್ದಿ ಕಾರ್ಯಗಳ ಕಾಳಜಿ ಮೆಚ್ಚಿ ಕ್ಷೇತ್ರಕ್ಕೆ ಎಂಟು ನೂರು ಕೋಟಿ ರೂ.ಗಳನ್ನು ಮಂಜೂರು ಮಾಡಿ ಅಭಿವೃದ್ದಿಗೆ ಸಹಕರಿಸಿದ್ದಾರೆ. ಈ ಸಲದ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕೆಂದು ಕೋರಿದ ಅವರು, ಅನ್ನ ಭಾಗ್ಯ, ಕ್ಷೀರ ಭಾಗ್ಯ, ಹೆಣ್ಷು ಮಕ್ಕಳಿಗೆ ಪದವಿವರೆಗೆ ಉಚಿತ ಶಿಕ್ಷಣ ನೀಡುವ ಯೋಜನೆಗಳ ಮೂಲಕ ಕಾಂಗ್ರೆಸ್ ಸರಕಾರ ದೇಶದಲ್ಲಿಯೇ ಜನಪರ ಆಡಳಿತ ನೀಡಿದ ಸರಕಾರ ಎಂದು ಹೆಸರಾಗಿದೆ. ಸರ್ವ ಸಮಾಜಕ್ಕೂ ಉಪಯುಕ್ತ ಯೋಜನೆಗಳ ಮೂಲಕ ಬಡವರಿಗೆ, ಶೋಷಿತರಿಗೆ ನೆರವಾಗಿರುವ ಕಾಂಗ್ರೆಸ್, ದೇಶದಲ್ಲಿ ಸರ್ವ ಜಾತಿ ಜನಾಂಗ ಮತ್ತು ಸರ್ವ ಧರ್ಮಗಳ ಏಳ್ಗೆಗೆ ಶ್ರಮಿಸಿದೆ ಹಾಗೂ ನೆರವು ನೀಡಿದೆ. ಅತ್ಯಂತ ಹಿಂದುಳಿದ ಅನೇಕ ಜಾತಿಗಳ ಜನರಿಗೆ ರಾಜಕೀಯ ಅಧಿಕಾರ ನೀಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದ ಅವರು ಸಮಾಜ ಒಡೆಯುವ ಬಿಜೆಪಿ ಬಿಟ್ಟು ದೇಶ ಕಟ್ಟುವ ಕಾಂಗ್ರೆಸ್ ಬೆಂಬಲಿಸಿರಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಸಂಚಾಲಕ ಬಸವರಾಜ ಮಳಿಮಠ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ರುದ್ರೇಶ ಡ್ಯಾಗಿ, ತಾ.ಪಂ ಮಾಜಿ ಸದಸ್ಯ ಹನಮಂತಪ್ಪ ವನಬಳ್ಳಾರಿ, ಹಾಸಗಲ್ ಗ್ರಾ.ಪಂ.ಅಧ್ಯಕ್ಷ ತುಕಾರಾಮ ಬಡಿಗೇರ, ಮುಖಂಡರಾದ ರಮೇಶ ಪಾಟೀಲ್, ಮಲ್ಲೇಶಪ್ಪ ಗುಮಗೇರಿ, ಬಸವಕುಮಾರ, ಎಮ್ಮಿ ಫಕೀರಪ್ಪ, ಅಮರೇಶ ಉಪಲಾಪುರ ಇತರರು ಉಪಸ್ಥಿತರಿದ್ದರು.

Please follow and like us:
error