fbpx

ಸಮಾಜವಾದಿ ಸಿಎಂ ನಿರ್ಗಮನ – ಸನತ್ ಕುಮಾರ್ ಬೆಳಗಲಿ

ರಾಜ್ಯದ ಅಧಿಕಾರ ಸೂತ್ರವನ್ನು ಸರದಿಯಂತೆ ಹಂಚಿಕೊಳ್ಳುತ್ತ ಬಂದ ಮೇಲ್ಜಾತಿ ಮತ್ತು ಮೇಲ್ವರ್ಗಗಳಿವೆ. ಶೇ. 69ರಷ್ಟು ಜನ ಸಮುದಾಯವನ್ನು ಪ್ರತಿನಿಧಿಸುವ ಅವಕಾಶ ವಂಚಿತ ಸಮುದಾಯದ ದಕ್ಷ, ಪ್ರಾಮಾಣಿಕ ರಾಜಕೀಯ ಅಧಿಕಾರದಲ್ಲಿರುವವರನ್ನು ಸಹಿಸಲಿಲ್ಲ.


ಜಾತಿರಹಿತ ಸಮಾಜದ ಬಗ್ಗೆ ನಾವು ಎಷ್ಟೇ ಮಾತನಾಡಿದರೂ ಭಾರತದಂತಹ ದೇಶದಲ್ಲಿ ಅನೇಕ ಬಾರಿ ಜಾತಿಯೇ ಅತ್ಯಂತ ನಿರ್ಣಾಯಕವಾಗಿರುತ್ತದೆ ಎಂಬುದು ಮತ್ತೆ ಸಾಬೀತಾಗಿದೆ. ಕರ್ನಾಟಕದ ಮತದಾರ ತಮಗೆ ಒಳ್ಳೆಯ ಆಡಳಿತ ನೀಡಿದ ಹಿಂದುಳಿದ ಸಮುದಾಯದ ಅತ್ಯಂತ ದಕ್ಷ ಸಮರ್ಥ ಮುಖ್ಯಮಂತ್ರಿಯನ್ನು ತಿರಸ್ಕರಿಸಿ ಭ್ರಷ್ಟರ ನೀತಿಗೆಟ್ಟವರ ಕೂಟವನ್ನು ಆಯ್ಕೆ ಮಾಡಿಕೊಂಡಿದ್ದಾನೆ. 

ಅವಕಾಶ ವಂಚಿತ ಸಮುದಾಯದ ವ್ಯಕ್ತಿ ಎಷ್ಟೇ ಪ್ರಾಮಾಣಿಕನಾಗಿದ್ದರೂ ದಕ್ಷನಾಗಿದ್ದರೂ ಈ ರಾಜ್ಯದ ಮೇಲ್ವರ್ಗಗಳು, ಮೇಲ್ಜಾ ತಿಗಳು ಎಂದೂ ಸಹಿಸಿಲ್ಲ. ಜಾತಿವಾದಿಗಳ ಈ ಸಂಚಿಗೆ ಈ ನಾಡು ಕಂಡ ಅತ್ಯಂತ ದಕ್ಷ ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಿಯಾದರು. ಅನ್ನಭಾಗ್ಯ, ಕ್ಷೀರ ಭಾಗ್ಯದಂತಹ ಅದ್ಭುತ ಕಾರ್ಯಕ್ರಮ ನೀಡಿ ನಾಲ್ಕು ಕೋಟಿ ಜನರ ಹಸಿವನ್ನು ಇಂಗಿಸಿದ್ದ ಸಮಾಜವಾದಿ ಸಿಎಂ ಮತ್ತೆ ಅಧಿಕಾರಕ್ಕೆ ಬರಲಿಲ್ಲ.

 ನಾನು ದೇವರಾಜ ಅರಸು ಅವರನ್ನು ಮತ್ತು ಅವರ ಒಟ್ಟು ಆಡಳಿತವನ್ನು ನೋಡಿದ್ದೇನೆ. ಹನ್ನೆರಡನೇ ಶತಮಾನದ ಬಸವಣ್ಣನವರ ಆನಂತರ ಕನ್ನಡ ನಾಡಿನ ಕತ್ತಲ ಲೋಕಕ್ಕೆ ಸಾಮಾಜಿಕ ನ್ಯಾಯದ ಬೆಳಕನ್ನು ಚೆಲ್ಲಿದ ಅರಸು ಅವರನ್ನು ಕರ್ನಾಟಕ ಎಂದೂ ಮರೆಯುವುದಿಲ್ಲ. ಅವರು ತಂದ ಭೂ ಸುಧಾರಣಾ ಕಾನೂನು ಹಾವನೂರು ಆಯೋಗದ ಜಾರಿಯಂಥ ಕ್ರಮಗಳನ್ನು ನಾಡಿನ ನೊಂದ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ.

 ದೇವರಾಜ ಅರಸು ನಂತರ ಸಮಾಜವಾದಿ ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದರೂ ಈ ರಾಜ್ಯದ ಮೇಲ್ವರ್ಗಗಳು ಅವರನ್ನು ಪೂರ್ಣವಾಗಿ ಅಧಿಕಾರದಲ್ಲಿರಲು ಬಿಡಲಿಲ್ಲ. ನಂತರ ಬಂದ ಹಿಂದುಳಿದ ಸಮುದಾಯದ ವೀರಪ್ಪ ಮೊಯ್ಲಿ, ಧರಂಸಿಂಗ್ ಕೂಡ ಪೂರ್ಣಾವಧಿ ಮುಖ್ಯಮಂತ್ರಿಗಳಾಗಿರಲಿಲ್ಲ.

ದೇವರಾಜ ಅರಸು ನಂತರ ಅವರಂತೆ ಐದು ವರ್ಷ ಕಾಲ ಪೂರ್ಣಾವಧಿ ಅಧಿಕಾರ ನಿರ್ವಹಿಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರದ್ದು. ಸಮಾಜವಾದಿ ಚಳವಳಿಯ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರು ಬಸವಣ್ಣನವರ ಅನ್ನ ದಾಸೋಹ ಪರಿಕಲ್ಪನೆಯ ‘ಅನ್ನಭಾಗ್ಯ’ ಯೋಜನೆ ಜಾರಿಗೆ ತಂದರು. ಇದರಿಂದಾಗಿ ರಾಜ್ಯದಲ್ಲಿ ಮಳೆಯಾಗದೆ ಬರಗಾಲ ಆವರಿಸಿದಾಗಲೂ ಯಾರೂ ಹಸಿವಿನಿಂದ ನರಳಲಿಲ್ಲ, ಯಾರೂ ಗುಳೆ ಹೋಗಲಿಲ್ಲ. ಸಿದ್ದರಾಮಯ್ಯನವರ ಐದು ವರ್ಷಗಳ ಆಡಳಿತದಲ್ಲಿ ಯಾವ ಮಂತ್ರಿಯೂ ಜೈಲಿಗೆ ಹೋಗಲಿಲ್ಲ ಹಾಗೂ ಯಾರ ಮೇಲೂ ಗಂಭೀರ ಆರೋಪವಿರಲಿಲ್ಲ.

ಸಿದ್ದರಾಮಯ್ಯನವರ ಮಾತು ಒರಟಾದರೂ ಹೃದಯ ವಿಶಾಲವಾಗಿತ್ತು. ಇವರ ಆಡಳಿತದಲ್ಲಿ ರಾಜ್ಯದ ದುರ್ಬಲ ಜನ ಸಮುದಾಯಗಳಿಗೆ ಇದು ನಮ್ಮ ಸರಕಾರ ಎಂಬ ಹೆಮ್ಮೆ ಉಂಟಾಗಿತ್ತು. ಆದರೂ ಜನತೆ ಮತ್ತೆ ಇವರಿಗೆ ಬಹುಮತ ನೀಡಲಿಲ್ಲ. ಹಾಗೆ ನೋಡಿದರೆ ದೇವರಾಜು ಅರಸು ಅವರು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಕಾಲಘಟ್ಟವೇ ಬೇರೆಯಾಗಿತ್ತು. ಎಪ್ಪತ್ತರ ದಶಕದಲ್ಲಿ ಸಮಾಜವಾದಿ ಸೋವಿಯತ್ ರಶ್ಯ ಅಸ್ತಿತ್ವದಲ್ಲಿತ್ತು. ಜಗತ್ತಿನ ಎಲ್ಲೆಡೆ ಸಮಾಜವಾದದ ಗಾಳಿ ಬೀಸುತ್ತಿತ್ತು. ಭಾರತದಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದುದರಿಂದ ಅವರ ‘ಗರೀಬಿ ಹಠಾವೊ’ ಕಾರ್ಯಕ್ರಮ ಜನಪ್ರಿಯವಾಗಿತ್ತು. ಅವರು ಕೈಗೊಂಡ ಬ್ಯಾಂಕ್ ರಾಷ್ಟ್ರೀಕರಣ ರಾಜಧನ ರದ್ಧತಿಯಂಥ ಕಾರ್ಯಕ್ರಮಗಳು ಜನ ಮೆಚ್ಚುಗೆ ಪಡೆದಿದ್ದವು.

 ಆ ಕಾಲಘಟ್ಟದಲ್ಲಿ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಅಂಥ ಕಷ್ಟಕರವಾಗಿರಲಿಲ್ಲ. ರಾಜ್ಯದಲ್ಲಿ ಮೇಲ್ವರ್ಗಗಳಿಂದ ಎಷ್ಟೇ ವಿರೋಧ ಬಂದರೂ ಕೇಂದ್ರದ ಇಂದಿರಾಗಾಂಧಿ ಸರ್ಕಾರದ ಬೆಂಬಲ ಅರಸು ಅವರಿಗಿತ್ತು. ಆದರೂ ಪರಂಪರೆಯ ಅಡ್ಡ ಗೋಡೆಗಳನ್ನು ಕೆಡವಿ ಮುನ್ನಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ದೇವರಾಜು ಅರಸು ಕಾಂಗ್ರೆಸ್‌ನಲ್ಲಿದ್ದರೂ ಸೈದ್ಧಾಂತಿಕವಾಗಿ, ಮಾರ್ಕ್ಸ್‌ವಾದಿಯಾಗಿದ್ದರು. ಆ ಕಾಲದಲ್ಲೇ ಅವರು ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗುತ್ತಿದ್ದ ಮಾರ್ಕ್ಸ್ ಲೆನಿನ್ ಸಾಹಿತ್ಯವನ್ನು ತರಿಸಿ ಓದುತ್ತಿದ್ದರು. ಈ ಓದಿನ ಹಿನ್ನೆಲೆ ಸಾಮಾಜಿಕ ಬದಲಾವಣೆ ತರಬೇಕೆಂಬ ಬದ್ಧತೆ ಅವರಿಗಿತ್ತು. ಅವರ ಕಾಲದಲ್ಲೇ ಖರ್ಗೆ, ಬಂಗಾರಪ್ಪ, ಧರರ್ಂಸಿಂಗ್ ನಾಯಕರಾಗಿ ಹೊರ ಹೊಮ್ಮಿದ್ದರು.

ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕಾಲಘಟ್ಟವೇ ಬೇರೆಯಾಗಿತ್ತು. ಈಗ ಸಮಾಜವಾದಿ ಸೋವಿಯತ್ ರಶ್ಯ ಇಲ್ಲ. ಜಗತ್ತಿನಲ್ಲಿ ಸಮಾಜವಾದದ ಗಾಳಿ ಈಗ ಬೀಸುತ್ತಿಲ್ಲ. ವಿಶ್ವದ ರಾಜಕಾರಣ ಈಗ ಎಡದಿಂದ ಬಲದತ್ತ ವಾಲಿದೆ. ಭಾರತದಲ್ಲಿ ಸಂಘಪರಿವಾರದ ಹಿಂದುತ್ವವಾದಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿದ್ದಾರೆ. ದೇಶದಲ್ಲಿ ಹಿಂದುತ್ವದ ಉನ್ಮಾದ ಕೆರಳಿ ನಿಂತಿದೆ. ಇದರ ಜೊತೆಗೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳು ಇಡೀ ಭಾರತವನ್ನೇ ಅಡ್ಡ ದಾರಿಗೆ ತಂದು ನಿಲ್ಲಿಸಿವೆ. ಇಂತಹ ಕಾಲಘಟ್ಟದಲ್ಲಿ ಸಮಾಜವಾದಿ ಚಳವಳಿಯಿಂದ ಬಂದ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ನವ ಉದಾರೀಕರಣದ ಕಾಲ ಘಟ್ಟದಲ್ಲಿ ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಾಹಸಕ್ಕೆ ಅವರು ಮುಂದಾದರು.

ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಎರಡನೇ ವರ್ಷ 2016ರಲ್ಲಿ ಮುಖ್ಯಮಂತ್ರಿಗಳ ಜೊತೆ ಮಾಧ್ಯಮ ಸಂವಾದ ಕಾರ್ಯಕ್ರಮವೊಂದನ್ನು ಮಾಧ್ಯಮ ಅಕಾಡೆಮಿ ಏರ್ಪಡಿಸಿತ್ತು. ಆ ಕಾರ್ಯಕ್ರಮದಲ್ಲಿ ಪ್ರಸ್ತಾವನೆಯ ಮಾತುಗಳನ್ನ್ನಾಡುವ ಅವಕಾಶ ನನಗೆ ದೊರಕಿತ್ತು. ಆಗ ನಾನು ನಿಮ್ಮ ಕಾಂಗ್ರೆಸ್ ಪಕ್ಷವೇ ಒಪ್ಪಿಕೊಂಡ ನವ ಉದಾರೀಕರಣದ ನೀತಿಗೆ ಪ್ರತಿಯಾಗಿಜನ ಪರವಾದ ಕಾರ್ಯಕ್ರಮ ಹೇಗೆ ಜಾರಿಗೆ ತರುತ್ತೀರಿ ಎಂದು ಪ್ರಶ್ನಿಸಿದ್ದೆ.

ನನ್ನ ಪ್ರಸ್ತಾವನೆ ಮಾತುಗಳ ನಂತರ ಮಾತನಾಡಿದ ಸಿದ್ದರಾಮಯ್ಯನವರು, ತಮ್ಮ ಪಕ್ಷ ಯಾವುದೇ ನೀತಿ ಅನುಸರಿಸಲಿ. ಆದರೆ ಅನ್ನಭಾಗ್ಯ, ಕ್ಷೀರ ಭಾಗ್ಯದಂಥ ಯೋಜನೆ ಕೈಬಿಡುವುದಿಲ್ಲ ಎಂದು ಹೇಳಿದ್ದರು. ಈ ಕಾಲದಲ್ಲಿ ಯಾರೂ ಹಸಿವಿನಿಂದ ನರಳಬಾರದು ಎಂಬುದು ನನ್ನ ನಿಲುವು ಎಂದಿದ್ದರು.

 ತಾನೇಕೆ ಅನ್ನಭಾಗ್ಯ ಕಾರ್ಯಕ್ರಮ ಜಾರಿಗೆ ತಂದೆ ಎಂಬುದಕ್ಕೆ ತಾನು ಬಾಲ್ಯದಲ್ಲಿ ಅನುಭವಿಸಿದ ಬಡತನ, ಹಸಿದವರ ನೋವನ್ನು ಬಿಚ್ಚಿಟ್ಟರು. ಅನ್ನಭಾಗ್ಯ ಮಾತ್ರವಲ್ಲ ಕೃಷಿಭಾಗ್ಯ, ಭಾಗ್ಯಪೂರ್ಣ, ದೇವರಾಜ ಅರಸು ಅವರ ಮನಸ್ವಿನಿ, ಮೈತ್ರಿ ಮುಂತಾದ ಯೋಜನೆಯ ಬಗ್ಗೆ ವಿವರಿಸಿದರು. ತಾವು ಬಾಲ್ಯದಲ್ಲಿ ಕಾಲಿಗೆ ಚಪ್ಪಲಿ ಇಲ್ಲದೇ ಓಡಾಡಿದ್ದನ್ನು ನೆನಪು ಮಾಡಿಕೊಂಡು ಶೂ ಭಾಗ್ಯ ಯೋಜನೆ ಜಾರಿಗೆ ತಂದಿರುವುದಾಗಿ ಹೇಳಿದರು. ಇಂಥ ಸಿದ್ದರಾಮಯ್ಯನವರನ್ನು ರಾಜ್ಯದ ಜನತೆ ಮತ್ತೆ ಚುನಾಯಿಸಲಿಲ್ಲ. – ಯಾವುದೇ ಭ್ರಷ್ಟಾಚಾರ ಆರೋಪವಿಲ್ಲದಿದ್ದರೂ ಜೈಲಿಗೆ ಹೋಗಿ ಬಂದಿಲ್ಲದಿದ್ದರೂ ಅವರನ್ನು ತಿರಸ್ಕರಿಸಿದೆ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದ ವ್ಯಕ್ತಿಯನ್ನೇ ಏಕೆ ಚುನಾಯಿಸಿದ್ದರು. ಜನರ ಮನೋಗತವೇ ಒಮ್ಮಿಮ್ಮೆ ಅರ್ಥವಾಗುವುದಿಲ್ಲ.

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸಿದ್ದರಾಮಯ್ಯನವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಈಗ ಎರಡು ತಿಂಗಳ ಹಿಂದೆ ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೆ. ಆಗ ಲಿಂಗಾಯತ ಚಳವಳಿಮಾತು ಬಂದಾಗ ಸ್ವಾಮೀಜಿ ಅವರು, ‘‘ಇದು ಸರಕಾರಕ್ಕೆ ತಿರುಗುಬಾಣವಾಗುತ್ತದೆ’’ ಎಂದು ಹೇಳಿದ್ದರು. ಹೇಗೆ ಎಂದು ಕೇಳಿದೆ. ಆಗ ಮಟ್ಟಿಗೆ ಮುಂದು ಮಾಡಲಾದ ಆಗ ಸ್ವಾಮೀಜಿ ಅವರು ಸಿದ್ದರಾಮಯ್ಯ ಸದುದ್ದೇಶದಿಂದ ಲಿಂಗಾಯತ ಧರ್ಮ ಮಾನ್ಯತೆ ಪರವಾಗಿ ಶಿಫಾರಸು ಮಾಡಿದರೂ ಸಂಘ ಪರಿವಾರದವರು ‘ಇದನ್ನು ಲಿಂಗಾಯತ ಧರ್ಮ ವಿಭಜಿಸುವ ಯತ್ನ ಎಂದು ಪ್ರಚಾರ ಮಾಡುತ್ತಾರೆ’ ಎಂದು ಹೇಳಿದರು.

ನಿಡುಮಾಮಿಡಿ ಸ್ವಾಮೀಜಿ ಅವರು ಹೇಳಿದಂತೆ ಮೂವತ್ತು ಸಾವಿರ ಆರೆಸ್ಸೆಸ್ ಕಾರ್ಯಕರ್ತರು ಹಳ್ಳಿ ಹಳ್ಳಿಗೆ ಹೋಗಿ, ಬೂತ್ ಮಟ್ಟದಲ್ಲಿ ಮನೆಮನೆಗೆ ಹೋಗಿ ಲಿಂಗಾಯತ ಧರ್ಮ ಒಡೆಯಲಾಗುತ್ತದೆ ಎಂದು ಲಿಂಗಾಯತರನ್ನು ಹೆದರಿಸಿದರು. ಅಲ್ಲದೆ ಅನ್ನಭಾಗ್ಯದ ಅಕ್ಕಿಯನ್ನು ಕೊಟ್ಟದ್ದು ಕೇಂದ್ರದ ನರೇಂದ್ರ ಮೋದಿ ಸರಕಾರ ಎಂದು ಪ್ರಚಾರ ಮಾಡಿದರು.

ಸಂಘ ಪರಿವಾರದ ಕಾರ್ಯಕರ್ತರ ಪ್ರಚಾರಕ್ಕೆ ಪ್ರತಿಯಾಗಿ ಮನೆ ಮನೆಗೆ ಹೋಗಿ ಜನರಿಗೆ ತಿಳಿಸಿ ಹೇಳುವ ಈ ಕಾರ್ಯಕರ್ತರ ಪಡೆ ಕಾಂಗ್ರೆಸ್‌ನಲ್ಲಿರಲಿಲ್ಲ. ಸಿದ್ದರಾಮಯ್ಯನವರು ಎಷ್ಟೇ ಜನಪರ ಕಾರ್ಯಕ್ರಮ ನೀಡಿದರೂ ಅದರ ಬಗ್ಗೆ ಸರಿಯಾಗಿ ಪ್ರಚಾರವಾಗಲಿಲ್ಲ. ಸಿದ್ದರಾಮಯ್ಯ ಸರಕಾರದ ಕಾರ್ಯಕ್ರಮಗಳನ್ನು ಮೋದಿ ಸರಕಾರದ ಕಾರ್ಯಕ್ರಮಗಳೆಂದು ಪ್ರಚಾರ ನಡೆಯಿತು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿ ಯಾರೂ ಕೂಡ ಸಂಘ ಪರಿವಾರದ ಕೋಮುವಾದಿ ಹುನ್ನಾರಗಳ ಬಗ್ಗೆ ಮಾತಾಡಲಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅಷ್ಟೆಲ್ಲ ಆಕ್ರಮಣಕಾರಿಯಾಗಿ ಮಾತನಾಡಿದರೂ ಅದೇ ಜಿಲ್ಲೆಯ ದೇಶಪಾಂಡೆಯವರಂತಹ ಹಿರಿಯ ಸಚಿವರು ಉತ್ತರ ನೀಡುವ ಗೋಜಿಗೇ ಹೋಗಲಿಲ್ಲ. ಎರಡನೆಯದಾಗಿ ರಾಜ್ಯದ ಮಾಧ್ಯಮಗಳು ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ಸಿದ್ದರಾಮಯ್ಯನವರ ವಿರುದ್ಧ ನೀಚತನದ ಅಪಪ್ರಚಾರಕ್ಕೆ ಇಳಿದವು. ಸಿಎಂ ಮೇಲೆ ಟೀಕೆ ಮಾಡಲು ಯಾವ ಆಕ್ಷೇಪಗಳಿಲ್ಲದಿದ್ದರೂ ‘ಮೀನು ತಿಂದು ದೇವಾಲಯಕ್ಕೆ ಹೋದರು’ ‘ಶೂ ಹಾಕಿಕೊಂಡು ಚಾಮುಂಡೇಶ್ವರಿ ಪೂಜೆ ಮಾಡಿದರು’, ’ಕಾಗೆ ಕುಳಿತಿತೆಂದು ಕಾರು ಬದಲಿಸಿದರು’ ಎಂದೆಲ್ಲ ಪ್ರಚಾರ ಮಾಡಿದರು. ರಾಜ್ಯದ ಅಧಿಕಾರ ಸೂತ್ರವನ್ನು ಸರದಿಯಂತೆ ಹಂಚಿಕೊಳ್ಳುತ್ತ ಬಂದ ಮೇಲ್ಜಾತಿ ಮತ್ತು ಮೇಲ್ವರ್ಗಗಳಿವೆ. ಶೇ 69 ರಷ್ಟು ಜನ ಸಮುದಾಯವನ್ನು ಪ್ರತಿನಿಧಿಸುವ ಅವಕಾಶ ವಂಚಿತ ಸಮುದಾಯದ ದಕ್ಷ, ಪ್ರಾಮಾಣಿಕ ರಾಜಕೀಯ ಅಧಿಕಾರದಲ್ಲಿರುವವರನ್ನು ಸಹಿಸಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದಿನ ಮುಖ್ಯಮಂತ್ರಿಯಂತೆ ಗುಡಿ ಗುಂಡಾರ ಸುತ್ತಲಿಲ್ಲ, ಮಠಾಧೀಶರ ಎದುರು ಕೈ ಕಟ್ಟಿಕೊಂಡು ನಿಲ್ಲಲಿಲ್ಲ, ಮಾಟ ಮಂತ್ರಗಳಿಗೆ ಮಾರುಹೋಗಲಿಲ್ಲ. ಮೂಢನಂಬಿಕೆ ನಿರ್ಬಂಧ ವಿಧೇಯಕವನ್ನು ಎಲ್ಲರ ವಿರೋಧ ಎದುರಿಸಿ ಅಂಗೀಕಾರವಾಗುವಂತೆ ಮಾಡಿದರು. ಈ ಎಲ್ಲ ಕಾರಣಗಳನ್ನು ನನ್ನಂತಹ ಎಡಪಂಥೀಯ, ಪ್ರಗತಿಪರ ವಿಚಾರದವರಿಗೂ ಇಷ್ಟವಾದವು.

2008ರಿಂದ 2013ರ ವರೆಗೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಭ್ರಷ್ಟಾಚಾರದ ಗಬ್ಬು ವಾಸನೆ ಎಲ್ಲೆಡೆ ಹಬ್ಬಿತ್ತು. ಮುಖ್ಯಮಂತ್ರಿಯೇ ಜೈಲಿಗೆ ಹೋಗಿ ಬಂದರು. ಮೂವರು ಮುಖ್ಯಮಂತ್ರಿಗಳು ಬದಲಾದರು. ವಿಧಾನ ಸೌಧದಲ್ಲಿ ಹೋಮ ಮಾಡಿ ಹೊಗೆ ಎಬ್ಬಿಸಿದರು. ವಿಧಾನಸೌಧದ ಸುತ್ತ ಮಾಟ ಮಂತ್ರದ ನಿಂಬೆಕಾಯಿಗಳು ಗೋಚರಿಸಿದವು. ಆದರೆ ಸಿದ್ದರಾಮಯ್ಯ ಈ ನಾಡು ಕಂಡ ವಿಭಿನ್ನವಾದ ಅಪರೂಪದ ಮುಖ್ಯಮಂತ್ರಿ. ನಾಮಪತ್ರ ಸಲ್ಲಿಸುವಾಗಲೂ ಅವರು ರಾಹು ಕಾಲ, ಗುಳಿಕ ಕಾಲ ನೋಡಲಿಲ್ಲ. ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆಂದು ಮೂಢನಂಬಿಕೆಗೆ ಹೆದರಿ ಜೆ.ಎಚ್. ಪಟೇಲರೂ ಅಲ್ಲಿಗೆ ಹೋಗಿರಲಿಲ್ಲ, ಆದರೆ ಇದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಹೋಗಿ ಬಂದು ಐದು ವರ್ಷ ಸ್ಥಿರವಾದ ಆಡಳಿತ ನೀಡಿದರು. ಇಂತಹ ಸಿದ್ದರಾಮಯ್ಯನವರು ನಿರ್ಗಮಿಸಿದ್ದಾರೆ. ಆದರೆ ನಾಡಿನ ಪ್ರಜ್ಞಾವಂತ ಜನತೆ, ದಲಿತರು, ಅಲ್ಪಸಂಖ್ಯಾತರು, ಅವಕಾಶ ವಂಚಿತ ಸಮುದಾಯಗಳು, ಪ್ರಗತಿಪರರು ಸಿದ್ದರಾಮಯ್ಯರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

Please follow and like us:
error
error: Content is protected !!