ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು

): ಪ್ರಸಕ್ತ ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಮೇ. ೧೨ ರಂದು ನಡೆಯುವ ಮತದಾನ ಕಾರ್ಯಕ್ಕಾಗಿ ಬಳಸಲಾಗುವ ಮತಯಂತ್ರಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ವಾಹನಗಳ ಮೂಲಕ ಕೊಪ್ಪಳ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಿಗೆ ಬುಧವಾರದಂದು ಸಾಗಿಸಲಾಯಿತು.
ಕೊಪ್ಪಳ ಜಿಲ್ಲಾಡಳಿತ ಭವನ ಆವರಣದಲ್ಲಿನ ಮತಯಂತ್ರಗಳ ದಾಸ್ತಾನು ಕೇಂದ್ರದಲ್ಲಿ ಇದುವರೆಗೂ ಪೊಲೀಸರ ಸರ್ಪಗಾವಲಿನಲ್ಲಿ ಇರಿಸಲಾಗಿದ್ದ ವಿದ್ಯುನ್ಮಾನ ಮತಯಂತ್ರಗಳನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮಂಗಳವಾರದಂದು ಕಂಪ್ಯೂಟರೀಕೃತ ರ‍್ಯಾಂಡಮೈಜೇಶನ್ ಮೂಲಕ ಆಯಾ ಕ್ಷೇತ್ರಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಂಚಿಕೆ ಮಾಡಿದ್ದರು.
ಮಂಗಳವಾರದಂದು ಬೆಳಿಗ್ಗೆ ೦೬ ಗಂಟೆಯಿಂದಲೇ ಭೌತಿಕವಾಗಿ ಮತ ಯಂತ್ರಗಳ ಹಂಚಿಕೆ ಕಾರ್ಯ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಾರಂಭಗೊಂಡಿತು. ಆಯಾ ಕ್ಷೇತ್ರ ಚುನಾವಣಾಧಿಕಾರಿಗಳು ಮತಯಂತ್ರಗಳನ್ನು ವಾಹನಗಳಲ್ಲಿ ಕೊಂಡೊಯ್ಯಲು ಬೆಳಿಗ್ಗೆಯೇ ಸಜ್ಜಾಗಿ ಬಂದಿದ್ದರು. ಮತಯಂತ್ರಗಳ ಸಾಗಾಟ ಪ್ರಕ್ರಿಯೆಯಲ್ಲಿ ಬಂದೋಬಸ್ತ್ ಕೈಗೊಳ್ಳಲು ಪೊಲೀಸರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಡಳಿತ ಭವನ ಆವರಣದಲ್ಲಿ ಜಮಾವಣೆಗೊಂಡಿದ್ದರು. ಕ್ಷೇತ್ರಗಳಿಗೆ ಹಂಚಿಕೆಯಾದ ಮತಯಂತ್ರ ಪೆಟ್ಟಿಗೆಗಳ ಸಂಖ್ಯೆಯ ವಿವರ ಹೊಂದಿರುವ ಪಟ್ಟಿಯನ್ನು ಹಿಡಿದು, ಚುನಾವಣಾ ಸಿಬ್ಬಂದಿಗಳು ಮತಯಂತ್ರ ಪೆಟ್ಟಿಗೆಗಳನ್ನು ಹಂಚಿಕೆ ಮಾಡಿದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಬೆಳಿಗ್ಗೆ ೦೬ ಗಂಟೆಯಿಂದಲೇ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ಮತಯಂತ್ರಗಳ ಹಂಚಿಕೆ ಹಾಗೂ ಸಾಗಾಣಿಕೆ ಪ್ರಕ್ರಿಯೆಯನ್ನು ಖುದ್ದಾಗಿ ಸ್ಥಳದಲ್ಲಿಯೇ ಇದ್ದು ಪರಿಶೀಲನೆ ನಡೆಸಿದರು. ಆಯಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾದ ಮತಯಂತ್ರಗಳ ಪೆಟ್ಟಿಗೆಗಳನ್ನು ವಾಹನಕ್ಕೆ ತುಂಬಿ, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸಾಗಿಸಲಾಯಿತು. ಚುನಾವಣೆಗಾಗಿ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಪಾಲ್ಗೊಂಡು, ಮತಯಂತ್ರಗಳ ಸಾಗಾಣಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

Please follow and like us:
error