ವಿಧಾನಸಭಾ ಕ್ಷೇತ್ರವಾರು ರ‍್ಯಾಂಡಮೈಜೇಶನ್ ಮೂಲಕ ಮತ ಯಂತ್ರಗಳ ಹಂಚಿಕೆ

ಪ್ರಸಕ್ತ ವಿಧಾನಸಭಾ ಚುನಾವಣೆ ನಿಮಿತ್ಯ ಮೇ. ೧೨ ರಂದು ನಡೆಯುವ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದು, ಆಯಾ ವಿಧಾನಸಭಾ ಕ್ಷೇತ್ರವಾರು ಮತ ಯಂತ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಕಂಪ್ಯೂಟರೀಕೃತ ರ‍್ಯಾಂಡಮೈಜೇಶನ್ ಮೂಲಕ ಮಂಗಳವಾರದಂದು ಹಂಚಿಕೆ ಮಾಡಿದರು.
ಜಿಲ್ಲಾಡಳಿತ ಭವನದ ಎನ್‌ಐಸಿ ಕಚೇರಿ ಸಭಾಂಗಣದಲ್ಲಿ ಕಂಪ್ಯೂಟರೀಕೃತವಾಗಿ ರ‍್ಯಾಂಡಮೈಜೇಶನ್ (ಯಾದೃಚ್ಛೀಕರಣ) ಕೈಗೊಳ್ಳುವ ಮೂಲಕ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಮತಗಟ್ಟೆಗಳ ಸಂಖ್ಯೆಗನುಗುಣವಾಗಿ ಹಂಚಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಕೊಪ್ಪಳ ಜಿಲ್ಲೆಯಲ್ಲಿ ಕಳೆದ ತಿಂಗಳು ಎಲ್ಲ ಮತಯಂತ್ರಗಳು ಹಾಗೂ ವಿವಿ ಪ್ಯಾಟ್‌ಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲಿಸಿ, ಜಿಲ್ಲಾಡಳಿತ ಭವನ ಆವರಣದಲ್ಲಿನ ದಾಸ್ತಾನು ಕೇಂದ್ರದಲ್ಲಿ ಇರಿಸಲಾಗಿತ್ತು. ಜಿಲ್ಲೆಗೆ ಒಟ್ಟು ೧೬೩೫ ಕಂಟ್ರೋಲ್ ಯುನಿಟ್, ೧೯೬೩ ಬ್ಯಾಲೆಟ್ ಯುನಿಟ್ ಹಾಗೂ ೧೭೬೬ ವಿವಿ ಪ್ಯಾಟ್ ಯಂತ್ರಗಳನ್ನು ಚುನಾವಣಾ ಆಯೋಗದಿಂದ ಪೂರೈಸಲಾಗಿತ್ತು.

ಕೊಪ್ಪಳ ಜಿಲ್ಲೆಯಲ್ಲಿ

ಕುಷ್ಟಗಿ ೨೭೧ (೦೨ ಹೆಚ್ಚುವರಿ ಸೇರಿದಂತೆ) ಮತಗಟ್ಟೆಗಳು,

ಯಲಬುರ್ಗಾ-೨೫೩,

ಕೊಪ್ಪಳ-೨೮೭,

ಕನಕಗಿರಿ-೨೬೦

ಗಂಗಾವತಿ ೨೩೨

ಒಟ್ಟು ೧೩೦೩ ಮತಗಟ್ಟೆಗಳಿವೆ.

ಈ ಮತಗಟ್ಟೆಗಳ ಸಂಖ್ಯೆಗೆ ಅನುಗುಣವಾಗಿ ಎಲ್ಲ ಮತ ಯಂತ್ರಗಳು ಹಾಗೂ ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚುವರಿ ಮತ ಯಂತ್ರಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಅಧಿಕಾರಿ ಸಿಬ್ಬಂದಿಗಳಿಗೆ ತರಬೇತಿ ಹಾಗೂ ಸಾರ್ವಜನಿಕರಲ್ಲಿ ಮತ ಯಂತ್ರಗಳ ಕುರಿತು ಅರಿವು ಮೂಡಿಸುವಂತಹ ಕಾರ್ಯಕ್ರಮಗಳಿಗೆ ಒಟ್ಟು ೭೦ ಮತ ಯಂತ್ರಗಳನ್ನು ಬಳಸಲಾಗುತ್ತಿದೆ. ತರಬೇತಿಗಾಗಿ ಬಳಸುವ ೭೦ ಮತ ಯಂತ್ರಗಳನ್ನು ಹೊರತುಪಡಿಸಿ, ಇತರೆ ಮತ ಯಂತ್ರಗಳನ್ನು ಕ್ಷೇತ್ರಗಳಿಗೆ ಹಂಚಲು ರ‍್ಯಾಂಡಮೈಜೇಶನ್ ಮಾಡಲಾಗುತ್ತಿದೆ. ನಂತರದ ದಿನಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಆಯಾ ಕ್ಷೇತ್ರದಲ್ಲಿ ಮತ್ತೊಮ್ಮೆ ರ‍್ಯಾಂಡಮೈಜೇಶನ್ ಪ್ರಕ್ರಿಯೆ ಕೈಗೊಂಡು, ಮತಗಟ್ಟೆವಾರು ಮತಯಂತ್ರಗಳನ್ನು ಹಂಚಿಕೆ ಮಾಡುವರು. ಮತಯಂತ್ರಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ವಾಹನಗಳ ಮೂಲಕ ಆಯಾ ತಾಲೂಕು ಕೇಂದ್ರಗಳಿಗೆ ಸಾಗಿಸಿ, ಆಯಾ ತಾಲೂಕು ಕೇಂದ್ರದಲ್ಲಿ ಮತಯಂತ್ರಗಳನ್ನು ದಾಸ್ತಾನು ಕೊಠಡಿಗಳಲ್ಲಿ ಸಂಗ್ರಹಿಸಿಡಲಾಗುವುದು ಎಂದರು.
ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ಕಂಪ್ಯೂಟರ್ ತಂತ್ರಾಂಶದಲ್ಲಿ ಮತ ಯಂತ್ರಗಳನ್ನು ರ‍್ಯಾಂಡಮೈಜೇಶನ್ ಮೂಲಕ ಹಂಚಿಕೆ ಮಾಡಲಾಯಿತು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ, ಗಂಗಾವತಿ- ಡಾ. ರವಿ ತಿರ್ಲಾಪುರ, ಯಲಬುರ್ಗಾ- ವಿಜಯ ಮೆಕ್ಕಳಕಿ, ಕುಷ್ಟಗಿ- ಪ್ರಶಾಂತ್ ಅವರು ಪಾಲ್ಗೊಂಡಿದ್ದರು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತಯಂತ್ರಗಳ ರ‍್ಯಾಂಡಮೈಜೇಶನ್ ಸಂದರ್ಭದಲ್ಲಿ ಉಪಸ್ಥಿತರಿದ್ದು, ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು.

Please follow and like us:
error