ಯಡಿಯೂರಪ್ಪ, ಸಂಗಣ್ಣ ಕರಡಿ ಸಮ್ಮುಖದಲ್ಲಿ ಸಾಲೋಣಿ ನಾಗಪ್ಪ ಬಿಜೆಪಿ ಸೇರ್ಪಡೆ

ಯಡಿಯೂರಪ್ಪ, ಸಂಗಣ್ಣ ಕರಡಿ ಸಮ್ಮುಖದಲ್ಲಿ ಸೇರ್ಪಡೆ | ಏ. ೮ರಂದು ಮತ್ತಷ್ಟು ನಾಯಕರ ಆಗಮನ

ಬೆಂಗಳೂರು, ಏ. ೪: ಕೊಪ್ಪಳದ ಕುರುಬ ಸಮುದಾಯದ ಪ್ರಭಾವಿ ಮುಖಂಡರಲ್ಲಿ ಒಬ್ಬರಾಗಿರುವ ಮಾಜಿ ಸಚಿವ ನಾಗಪ್ಪ ಸಾಲೋಣಿ, ಪಿಎಲ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬೆಟಗೇರಿಯ ವೀರೇಶ ಲಕ್ಷಾಣಿ, ಹಿರೆಸಿಂದೋಗಿಯ ಕೆಂಚರೆಡ್ಡಿ ಸಿದ್ದರೆಡ್ಡಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಈಶಪ್ಪ ಮಾದಿನೂರ ಸಹಿತ ಜಿಲ್ಲೆಯ ಹಲವಾರು ಪ್ರಮುಖರು ಬಿಜೆಪಿಗೆ ಸೇರ್ಪಡೆಯಾದರು.
ಬೆಂಗಳೂರಿನಲ್ಲಿ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಇವರನ್ನು ಬಿಜೆಪಿ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಪಕ್ಷಕ್ಕೆ ಇಂದು ಒಳ್ಳೆಯ ದಿನ. ಬಿಜೆಪಿಗೆ ಸೇರ್ಪಡೆಯಾದವರನ್ನು ತಾವು ಸ್ವಾಗತಿಸುತ್ತೇವೆ. ಇದೇ ೮ರಂದು ವಿಜಯಪುರ ಬಸವ ಕಲ್ಯಾಣದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಮಾಲೀಕಯ್ಯ ಗುತ್ತೇದಾರ್ ಅವರು ನಾಲ್ಕು ಜನ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಮತ್ತಷ್ಟು ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಿದರು.
ಕೊಪ್ಪಳದ ವಿವಿಧ ಪಕ್ಷಗಳ ಗಣ್ಯರನ್ನು ಬಿಜೆಪಿ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಸದ ಸಂಗಣ್ಣ ಕರಡಿ ಅವರನ್ನು ಅಭಿನಂದಿಸಿದ ಯಡಿಯೂರಪ್ಪ, ಇದರಿಂದ ಜಿಲ್ಲೆಯಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ. ಈ ನಾಯಕರ ಅನುಭವ ಬಿಜೆಪಿಗೆ ಉಪಯುಕ್ತವಾಗಲಿದೆ ಎಂದರು.
ಪಕ್ಷ ಸೇರ್ಪಡೆಯಾದ ಕೊಪ್ಪಳದ ಪ್ರತಿಯೊಬ್ಬ ನಾಯಕರನ್ನು ಕೈಕುಲುಕಿ ಕುಶಲ ವಿಚಾರಿಸಿದ ಯಡಿಯೂರಪ್ಪ, ಪಕ್ಷವನ್ನು ಬಲಪಡಿಸಲು ತಕ್ಷಣದಿಂದ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು. ಸಂಸದ ಸಂಗಣ್ಣ ಕರಡಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಸಾಧನೆಗಳನ್ನು ಜನರತ್ತ ಕೊಂಡೊಯ್ಯುವ ಕೆಲಸ ಮಾಡಬೇಕೆಂದು ವಿವರಿಸಿದರು.

Please follow and like us:
error