ಮೇ. ೧೧ ಮತ್ತು ೧೨ ರಂದು ಪ್ರಕಟಗೊಳ್ಳುವ ಎಲ್ಲ ಜಾಹೀರಾತುಗಳಿಗೂ ಪೂರ್ವಾನುಮತಿ ಕಡ್ಡಾಯ

ಪ್ರಸಕ್ತ ವಿಧಾನಸಭೆ ಚುನಾವಣೆ ಅಂಗವಾಗಿ ಮತದಾನ ನಡೆಯವ ದಿನದ ೪೮ ಗಂಟೆಗಳ ಅವಧಿಯೊಳಗೆ ಅಂದರೆ ಮೇ. ೧೧ ಮತ್ತು ೧೨ ರಂದು ಯಾವುದೇ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕಿದ್ದಲ್ಲಿ, ಅಂತಹ ಜಾಹೀರಾತಿಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂಸಿಎಂಸಿ) ಸಮಿತಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. 
ಯಾವುದೇ ಪತ್ರಿಕೆಗಳಲ್ಲಿ ಮೇ. ೧೧ ಮತ್ತು ೧೨ ರಂದು ಚುನಾವಣಾ ಜಾಹೀರಾತು ಪ್ರಕಟಿಸಲು ಬಯಸುವ ಅಭ್ಯರ್ಥಿಗಳು, ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ, ನಿಗದಿತ ಅರ್ಜಿ ನಮೂನೆಯಲ್ಲಿ ಮೇ. ೦೯ ರ ಒಳಗಾಗಿ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿಂದ ಪೂರ್ವಾನುಮತಿ ಪ್ರಮಾಣ ಪತ್ರ ಇಲ್ಲದೇ ಇರುವ ಚುನಾವಣಾ ಸಂಬಂಧಿತ ಜಾಹೀರಾತುಗಳನ್ನು ಯಾವುದೇ ಪತ್ರಿಕೆಗಳು, ಮೇ. ೧೧ ಮತ್ತು ೧೨ ರಂದು ಪ್ರಕಟಿಸುವಂತಿಲ್ಲ ಎಂದು ಚುನಾವಣಾ ಆಯೋಗ ಈಗಾಗಲೆ ಸ್ಪಷ್ಟಪಡಿಸಿದೆ.
ಪೂರ್ವಾನುಮತಿಗೆ ಅರ್ಜಿ ಲಭ್ಯ : ಮೇ. ೧೧ ಮತ್ತು ೧೨ ರಂದು ಮುದ್ರಣ ಮಾಧ್ಯಮದಲ್ಲಿ ಚುನಾವಣೆ ಸಂಬಂಧಿತ ಜಾಹೀರಾತು ಪ್ರಕಟಣೆಗೆ ಪೂರ್ವಾನುಮತಿ ಪಡೆಯಲು ಅಗತ್ಯವಿರುವ ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾಡಳಿತ ಭವನದ ಚುನಾವಣಾ ವಿಭಾಗ ಅಥವಾ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಿಂದ ಪಡೆಯಬಹುದಾಗಿದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸೂಚನೆ : ಮತದಾನಕ್ಕೆ ನಿಗದಿಪಡಿಸಿರುವ ಅವದಿ ಕೊನೆಗೊಳ್ಳುವ ೪೮ ಗಂಟೆಗಳ ಮೊದಲು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ (ಟಿವಿ, ಸಿನಿಮಾಟೋಗ್ರಾಫ್, ದೃಶ್ಯ ಶ್ರವಣ) ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ- ೧೯೫೧ ರ ಕಲಂ ೧೨೬ ರ ಪ್ರಕಾರ ನಿಷೇಧಿಸಲಾಗಿದೆ. ಚುನಾವಣಾ ಸಂಬಂಧಿ ವಿಷಯವೆಂದರೆ, ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಅಥವಾ ಪರಿಣಾಮ ಬೀರುವಂತಹ ವಿಷಯಗಳಾಗಿರುತ್ತವೆ. ಟಿ.ವಿ. / ರೇಡಿಯೋ/ ಕೇಬಲ್ ನೆಟ್‌ವರ್ಕ್ ಮತ್ತು ಎಲ್ಲ ಡಿಜಿಟಲ್ ಮಾಧ್ಯಮಗಳು ಮತದಾನ ಪೂರ್ವ ೪೮ ಗಂಟೆಗಳ ಅವಧಿಯಲ್ಲಿ ಚುನಾವಣೆ ಸಂಬಂಧಿತ ವಇಷಯಗಳು ಪ್ರಸಾರ ಮಾಡದಂತೆ ಕ್ರಮ ವಹಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವವರು (ಪ್ಯಾನಲಿಸ್ಟ್) ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರ ಅಥವಾ ವಿರೋಧವಾಗಿರುವ ಅಭಿಪ್ರಾಯಗಳು / ಮನವಿಗಳು ಮತ್ತು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ವಿಷಯಗಳನ್ನು ಕೂಡ ಪ್ರಸಾರ ಮಾಡುವಂತಿಲ್ಲ. ನಿಗದಿತ ೪೮ ಗಂಟೆಗಳ ಅವಧಿಯಲ್ಲಿ ಒಪೀನಿಯನ್ ಪೋಲ್ ಪ್ರಕಟಿಸುವಂತಿಲ್ಲ, ಚರ್ಚೆ ಅಥವಾ ವಿಶ್ಲೇಷಣೆ ಏರ್ಪಡಿಸುವಂತಿಲ್ಲ. ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ.
ಕರ್ನಾಟಕ ವಿಧಾನಸಭೆ ಚುನಾವಣೆ ೨೦೧೮ ರ ಅಂಗವಾಗಿ ಮೇ. ೧೨ ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಎಲ್ಲ ಮುದ್ರಣ ಮಾಧ್ಯಮಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಮೇಲೆ ತಿಳಿಸಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Please follow and like us:
error