ಮಾಜಿ ಪ್ರಧಾನಿ ಮಕ್ಕಳಿಗೆ ಸಂಸ್ಕಾರವಿಲ್ಲ, ಬಿ.ಕೆ ಹರಿಪ್ರಸಾದ್ ಗೆ ಪ್ರಾಕ್ಟಿಕಲ್ ನಾಲೇಜ್ ಇಲ್ಲ : ಶಾಸಕ ಬಿ.ಶ್ರೀರಾಮುಲು

ಕೊಪ್ಪಳ: ನಿರುದ್ಯೋಗದ ಸಮಸ್ಯೆ ಕುರಿತಂತೆ ರಾಹುಲ್ ಗಾಂಧಿ ಭಾರತದಲ್ಲಿ ಮಾತನಾಡಬೇಕೇ ಹೊರತು ಇರಾನ್, ಇರಾಕ್​ನಲ್ಲಿ ಅಲ್ಲ. ಬಿಜೆಪಿ ಹುಚ್ಚಾಸ್ಪತ್ರೆ ಎಂದು ಬಿ.ಕೆ. ಹರಿಪ್ರಸಾದ್ ಅವರು ನೀಡಿರುವ ಹೇಳಿಕೆ ರಾಹುಲ್​ ಗಾಂಧಿಗೆ ಅನ್ವಯಿಸುತ್ತದೆ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಕೊಪ್ಪಳ ನಗರದಲ್ಲಿ  ಸ್ಥಳೀಯ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ಶ್ರೀರಾಮುಲು  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ  ಬಿ.ಕೆ.ಹರಿಪ್ರಸಾದ್ ಬುದ್ಧಿಜೀವಿ  ಆದರೆ, ಪ್ರಾಕ್ಟಿಕಲ್ ನಾಲೇಜ್ ಇಲ್ಲ.  ನಮ್ಮ ಹಾಗೆ ಅವರು ಜನರಿಂದ ನೇರವಾಗಿ ಆಯ್ಕೆಯಾದವರಲ್ಲ. ಬೆಂಗಳೂರಿನಿಂದ ನೇರವಾಗಿ ದೆಹಲಿಗೆ ಹೋಗ್ತಾರೆ. ಅಲ್ಲೊಂದಿಷ್ಟು ಲಾಬಿ ಮಾಡಿಕೊಂಡು ರಾಜ್ಯಸಭೆ ಸದಸ್ಯರಾಗ್ತಾರೆ ಎಂದರು.
ಒಂದಿಷ್ಟು ಪುಸ್ತಕ ಓದಿಕೊಂಡು ಬುದ್ಧಿಜೀವಿಯಂತೆ ಮಾತಾಡ್ತಾರೆ. ಬಿ.ಕೆ.ಹರಿಪ್ರಸಾದ್ ಅವರು ನಾಲಿಗೆ ಬಿಗಿಹಿಡಿದು ಮಾತನಾಡಬೇಕು. ನಾಲಿಗೆ ಹರಿಬಿಟ್ಟು ಮಾತಾಡೋದನ್ನು ನಿಲ್ಲಿಸಬೇಕು. ಇಲ್ಲಂದ್ರೆ ನಾವು ಮಾತನಾಡಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
 ರೇವಣ್ಣ ಸಂಸ್ಕಾರವಿಲ್ಲದವರು. ಮಾಜಿ ಪ್ರಧಾನಿ ದೇವೇಗೌಡರ ಪುತ್ರರು ಈ ರೀತಿಯಾಗಿ ಸಂಸ್ಕಾರವಿಲ್ಲದವರ ಹಾಗೆ ವರ್ತನೆ ಮಾಡಬಾರದು. ಜನರ ಬಳಿ ಯಾವ ರೀತಿ ವರ್ತಿಸಬೇಕು ಎಂಬ ಸಂಸ್ಕಾರವಿಲ್ಲ ಅವರಿಗೆ. ಕೊಡಗಿನ ನಿರಾಶ್ರಿತ ಜನರಿಗೆ ಬಿಸ್ಕೆಟ್ ಎಸೆಯುತ್ತಾರೆ. ಒಬ್ಬ ಮಾಜಿ ಪ್ರಧಾನಿ ಮಕ್ಕಳಿಗೆ ಸಂಸ್ಕಾರವಿಲ್ಲ ಎಂದು ಜನರು ಮಾತನಾಡುತ್ತಿದ್ದಾರೆ ಎಂದರು.
ಕೊಡಗಿನ ವಿಷಯದಲ್ಲಿ ಆ ಭಾಗದ ಸಂಸದ ಪ್ರತಾಪ ಸಿಂಹ, ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಯ ಅನೇಕರು ಭೇಟಿ ನೀಡಿ ನೆರವಾಗಿದ್ದಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ತಡವಾಗಿ ಭೇಟಿ ನೀಡಿದ್ದಾರೆ. ಅವರು ಲೇಟ್ ಕಮ್ಮರ್. ಅಲ್ಲಿಗೆ ಹೋಗಿರೋದೆ ಲೇಟಾಗಿ. ಒಂದು ಗಂಟೆಯಲ್ಲಿ ಅಲ್ಲಿಂದ ವಾಪಾಸ್ಸಾಗುವವರಿದ್ದರು. ಆದರೆ, ಮಾಧ್ಯಮಗಳ ವರದಿ ನೋಡಿ  ಒಂದು ದಿನ ಅಲ್ಲಿ ಉಳಿದುಕೊಂಡರು. ಈಗ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂದು ಆರೋಪ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಎನ್​ಡಿಆರ್​ಎಫ್​ನಲ್ಲಿ ಅನುದಾನ ಪಡೆಯಲು ಅಲ್ಲಿ ಆಗಿರುವ ಹಾನಿಯ ಆಸ್ತಿಪಾಸ್ತಿ, ಬೆಳೆ ಹಾಗೂ ಜೀವಹಾನಿ ಸೇರಿದಂತೆ ವಿವಿಧ ರೀತಿಯ ಹಾನಿಯ ಬಗ್ಗೆ ವಿವರವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕಾಗಿತ್ತು. ನರೇಂದ್ರ ಮೋದಿ ಅವರು ಹಣವನ್ನು ನೀಡುವುದಿಲ್ಲ ಎಂದೇನು ಹೇಳಿಲ್ಲ. ಆ ಅನುದಾನ ಪಡೆಯಲು ರಾಜ್ಯ ಸರ್ಕಾರ ಏನು ಮಾಡಬೇಕಾಗಿತ್ತೋ ಆ ಕೆಲಸವನ್ನು ಮಾಡದೆ ಕೇಂದ್ರದ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂದು ಹೇಳುತ್ತಿದೆ. ಆದರೆ, ಇನ್ನೂ ಆದೇಶ ಬ್ಯಾಂಕ್ ತಲುಪಿಲ್ಲ. ಒಬ್ಬೇ ಒಬ್ಬ ರೈತರ ಸಾಲ ಮನ್ನಾ ಆಗಿರೋದು ತೋರಿಸಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿ.ಶ್ರೀರಾಮುಲು ಇದೇ ಸಂದರ್ಭದಲ್ಲಿ ಸವಾಲ್ ಹಾಕಿದರು.