ಮತಗಟ್ಟೆಗಳ ಭೌತಿಕ ಪರಿಶೀಲನೆ ಮಾಡಿ : ಸಿ.ಡಿ. ಗೀತಾ ಸೂಚನೆ

: ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ಭೌತಿಕ ಪರಿಶೀಲನೆ ಮಾಡಿ ಕೊಠಡಿಯ ಸೀಲಿಂಗ್, ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿ ವರದಿ ಸಲ್ಲಿಸಿ ಎಂದು ಕೊಪ್ಪಳ ವಿಧಾನಸಭಾ ಚುನಾವಣಾಧಿಕಾರಿಯಾಗಿರುವ ಸಿ.ಡಿ ಗೀತಾ ಅವರು ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ನೇಮಕಗೊಂಡಿರುವ ಸೆಕ್ಟರ್ ಅಧಿಕಾರಿಗಳೊಂದಿಗೆ ತಹಸಿಲ್ದಾರರ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಪ್ರದೇಶದ ಮತಗಟ್ಟೆಗಳ ದುರಸ್ಥಿ ಕಾರ್ಯವನ್ನು ನಗರಸಭೆ, ಗ್ರಾಮೀಣ ಭಾಗದ ಮತಗಟ್ಟೆಗಳ ದುರಸ್ಥಿ ಕಾರ್ಯವನ್ನು ನಿರ್ಮಿತಿ ಕೇಂದ್ರದವರು ಕೈಗೊಳ್ಳಬೇಕು. ಹಾಗೂ ಗ್ರಾಮ ಪಂಚಾಯತಿಯಲ್ಲಿರುವ ಮತಗಟ್ಟೆಗಳನ್ನು ಅಥವಾ ಅಂಗನವಾಡಿ ಕಟ್ಟಡದಲ್ಲಿರುವ ಮತಗಟ್ಟೆಗಳನ್ನು ದುರಸ್ಥಿ ಮಾಡಲು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಶಾಲೆಯಲ್ಲಿನ ಮತಗಟ್ಟೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿ ಸಲ್ಲಿಸಬೇಕು.
ಸೆಕ್ಟರ್ ಅಧಿಕಾರಿಗಳ ಕೆಲಸವನ್ನು ವಿವರವಾಗಿ ಚರ್ಚಿಸಿ, ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಸೆಕ್ಟರ್ ಅಧಿಕಾರಿಗಳಿಗೆ ಇನ್ನೂ ಒಂದು ಸುತ್ತಿನ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು. ಹಾಗೂ ಸೆಕ್ಟರ್ ಅಧಿಕಾರಿಗಳು ನಮೂನೆ-೨ ರಲ್ಲಿ ಮತಗಟ್ಟೆಗಳಲ್ಲಿನ ದುರಸ್ಥಿಯ ಬಗ್ಗೆ ತುರ್ತಾಗಿ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಚುನಾವಣಾ ಲೆಕ್ಕ ಪತ್ರ ತಂಡದವರು ಸೂಕ್ಷ್ಮವಾಗಿ ಲೆಕ್ಕಪತ್ರ ಪರಿಶೀಲನೆ ಮಾಡುಬೇಕು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ತಂಡದವರು ಪ್ರತಿದಿನ ವಿಡಿಯೋ ಪ್ರತಿಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.
ಚೆಕ್‌ಪೋಸ್ಟ್ ತಂಡದವರು, ತಾತ್ಕಾಲಿಕವಾಗಿ ಚೆಕ್‌ಪೋಸ್ಟ್ ಹತ್ತಿರ ರೋಡ್ ಹಂಪ್ಸ್ ಹಾಕಿಸಲು ಮನವಿ ಸಲ್ಲಿಸಿದ್ದು, ಅದಕ್ಕೆ ಲೋಕೋಪಯೋಗಿ ಇಲಾಖೆಗೆ ಬೆಳಗಟ್ಟಿ ತಪಾಸಣಾ ಕೇಂದ್ರದ ಹತ್ತಿರ ತಾತ್ಕಾಲಿಕ ಹಂಪ್ಸ್ ಹಾಕಿಸಲು ಸೂಚನೆ ನೀಡಿದ್ದು, ಇದರೊಂದಿಗೆ ಚೆಕ್‌ಪೋಸ್ಟ್‌ಗಳಿಗೆ ಪ್ರಮುಖ ಬೆಳಕಿನ ಟಾರ್ಚ್ (ಬ್ಯಾಟರಿ) ಗಳನ್ನು ಪೂರೈಸಲು ಸಹಾಯಕ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಮುನಿರಾಬಾದ್ ಚೆಕ್‌ಪೋಸ್ಟ್ ತಾತ್ಕಾಲಿಕ ಹಂಪ್ಸ್ ಹಾಕುವಂತೆ ಎನ್.ಹೆಚ್.ಎ.ಐ. ಇವರಿಗೆ ಪತ್ರ ಬರೆಯಬೇಕು. ನಿಗದಿತ ನಮೂನೆಯಲ್ಲಿ ಕಂದಾಯ ನಿರೀಕ್ಷರು ಮತಗಟ್ಟೆಯ ವಿವರಗಳನ್ನು (ಕಟ್ಟಡ, ನೀರು, ಶೌಚಾಲಯ) ವ್ಯವಸ್ಥೆಯ ಬಗ್ಗೆ ವರದಿ ಸಲ್ಲಿಸಬೇಕು.
ಚುನಾವಣಾ ವೀಕ್ಷಕರು ಮತಗಟ್ಟೆಗಳ ಪರಿಶೀಲನೆಗೆ ಬರುವ ಸಾಧ್ಯತೆಗಳು ಹೆಚ್ಚಾಗಿದ್ದು, ಮತಗಟ್ಟೆಗಳನ್ನು ಸುವ್ಯವಸ್ಥಿತವಾಗಿ ಇರಿಸಲು ಕಂದಾಯ ನಿರೀಕ್ಷರು ಕ್ರಮ ಕೈಗೊಳ್ಳಬೇಕು. ಮತರಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಬಗ್ಗೆ ಕಂದಾಯ ನಿರೀಕ್ಷರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಚರ್ಚಿಸಿ ಕೆಲಸ ಪೂರ್ಣಗೊಳಿಸಬೇಕು. ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಬಗ್ಗೆ ಹಾಗೂ ಹೋಬಳಿ ಮಟ್ಟದಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ವರದಿಯನ್ನು ಕಛೇರಿಗೆ ಸಲ್ಲಿಸುವಂತೆ ಕೊಪ್ಪಳ ವಿಧಾನಸಭಾ ಚುನಾವಣಾಧಿಕಾರಿ ಸಿ.ಡಿ ಗೀತಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸೆಕ್ಟರ್ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

Please follow and like us:
error