ನಿಯಮಗಳನ್ನು ಪಾಲಿಸಲು ಮುದ್ರಣ ಸಂಸ್ಥೆ ಹಾಗೂ ಕೇಬಲ್ ಆಪರೇಟರ್‌ಗಳಿಗೆ ತಾಕೀತು

 ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಅವಧಿಯಲ್ಲಿ ಜಿಲ್ಲೆಯ ಎಲ್ಲ ಮುದ್ರಣಕಾರರು, ಕೇಬಲ್ ಆಪರೇಟರ್‌ಗಳು ಹಾಗೂ ರಾಜಕೀಯ ಪಕ್ಷಗಳು ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಾಕೀತು ಮಾಡಿದರು.
ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮುದ್ರಣಕಾರರು, ಕೇಬಲ್ ಆಪರೇಟರ್‌ಗಳು ಅಲ್ಲದೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಂಗಳವಾರದಂದು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುದ್ರಣಕಾರರು : ಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಮುದ್ರಣಕಾರರು ನಿಯಮಾನುಸಾರ ಯಾವುದೇ ಜಾತಿ, ಧರ್ಮ ನಿಂದಿಸುವಂತಹ ಹಾಗೂ ಪ್ರಚೋದನಕಾರಿ ವಿಷಯವನ್ನೊಳಗೊಂಡ ಕರಪತ್ರವನ್ನು ಮುದ್ರಿಸಬಾರದು. ಅಲ್ಲದೆ ವಯಕ್ತಿಕ ನಿಂದನೆ ಮತ್ತು ಕೋಮು ಸಾಮರಸ್ಯ ಕದಡುವಂತಹ ವಿಷಯಗಳನ್ನು ಪ್ರಕಟಿಸಬಾರದು. ಚುನಾವಣಾ ಪ್ರಚಾರಕ್ಕೆ ಕರಪತ್ರಗಳನ್ನು ಮುದ್ರಿಸುವಾಗ ಕರಪತ್ರದ ಕೆಳಭಾಗದಲ್ಲಿ ಮುದ್ರಣಾಲಯದ ಹೆಸರು, ಮೊಬೈಲ್ ಸಂಖ್ಯೆ, ಮುದ್ರಣ ಮಾಡಿದ ಕರಪತ್ರಗಳ ನಿಖರ ಸಂಖ್ಯೆಯನ್ನು ಅದರಲ್ಲಿ ನಮೂದಿಸಬೇಕು. ಅಭ್ಯರ್ಥಿ ಅಥವಾ ನಿಯಮಾನುಸಾರ ನೇಮಕಗೊಂಡ ಚುನಾವಣಾ ಏಜೆಂಟ್‌ಗಳು ನೀಡಿದ ಕರಪತ್ರ ಸಾಮಗ್ರಿಯನ್ನು ಮಾತ್ರ ಮುದ್ರಣ/ತಯಾರು ಮಾಡಬೇಕು. ಮುದ್ರಣಕ್ಕೆ ಕಾರ್ಯಾದೇಶ ಪಡೆಯುವ ಸಂದರ್ಭದಲ್ಲಿ ಅವರ ಹೆಸರು, ಮೊಬೈಲ್ ಸಂಖ್ಯೆ, ಇಬ್ಬರು ಸಾಕ್ಷಿಗಳ ಸಹಿಯೊಂದಿಗೆ ಅಪೆಂಡಿಕ್ಸ್-ಎ ನಮೂನೆಯಲ್ಲಿ ಕಾರ್ಯಾದೇಶ ಪಡೆದುಕೊಂಡು, ನಂತರ ಮುದ್ರಣ ಕಾರ್ಯ ಮುಗಿದ ಬಳಿಕ, ಅಪೆಂಡಿಕ್ಸ್-ಎ ಮತ್ತು ಅಪೆಂಡಿಕ್ಸ್-ಬಿ ನಲ್ಲಿ ಸೂಕ್ತ ಮಾಹಿತಿಯೊಂದಿಗೆ ಘೋಷಣಾ ಪತ್ರವನ್ನು ತಮ್ಮ ಸಂಸ್ಥೆಯ ಮೊಹರು ಹಾಗೂ ಸಹಿಯೊಂದಿಗೆ ಆಯಾ ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಆಫೀಸರ್‌ಗೆ ಸಲ್ಲಿಸಬೇಕು. ಇದು ಮುದ್ರಣಕಾರರ ಕರ್ತವ್ಯವಾಗಿದೆ. ತಮ್ಮ ಸಂಸ್ಥೆಯ ಅಧಿಕೃತ ರಸೀದಿ, ಬಿಲ್ ಮಾತ್ರ ಬಳಸಬೇಕು. ಲೆಕ್ಕ ಪತ್ರಗಳಿಗೆ ಸಂಬಂಧಿಸಿದಂತೆ ಬಿಲ್‌ಗಳು ಹಾಗೂ ರಸೀದಿಗಳನ್ನು ಸಮರ್ಪಕವಾಗಿ ಇರಿಸಿಕೊಳ್ಳಬೇಕು. ಚುನಾವಣಾ ಅಧಿಕಾರಿಗಳು, ಚುನಾವಣಾ ವೀಕ್ಷಕರು ಯಾವುದೇ ಸಂದರ್ಭದಲ್ಲಿ ಯಾವುದೇ ಮುದ್ರಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದ್ದು, ನಿಯಮಗಳನ್ನು ಉಲ್ಲಂಘಿಸುವ ಮುದ್ರಣಕಾರರಿಗೆ ೦೬ ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿರುತ್ತದೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೇಬಲ್ ಆಪರೇಟರ್‌ಗಳು : ಟಿ.ವಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳು, ಕೇಬಲ್ ನೆಟ್ ವರ್ಕ, ಮೊಬೈಲ್ ನೆಟ್ ವರ್ಕ ಮತ್ತು ಎಸ್‌ಎಂಎಸ್ ಸಂದೇಶ ಇತ್ಯಾದಿಗಳಂತಹ ಸಮೂಹ ಮಾಧ್ಯಮದ ವಿಧಾನಗಳನ್ನು ನೋಡಿಕೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯನ್ನು (ಎಂಸಿಎಂಸಿ) ರಚಿಸಲಾಗಿದೆ. ಅಭ್ಯರ್ಥಿಗಳು ಹಾಗೂ ಪಕ್ಷಗಳು ಪ್ರಕಟಿಸಲು ಅಥವಾ ಪ್ರಚುರಪಡಿಸಲು ಬಯಸುವ ಜಾಹಿರಾತುಗಳು, ಸಾರ್ವಜನಿಕ ಪ್ರಕಟಣೆಗಳು, ಸಂದೇಶಗಳನ್ನು ಪ್ರಸಾರ ಮಾಡುವ ಮುನ್ನ ಜಿಲ್ಲಾ ಮಟ್ಟದ ಈ ಸಮಿತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಅಲ್ಲದೆ ಪತ್ರಿಕೆ ಅಥವಾ ಟಿ.ವಿ. ಮತ್ತು ಕೇಬಲ್ ನೆಟ್‌ವರ್ಕ್, ಸಾಮಾಜಿಕ ಜಾಲತಾಣಗಳ ಜಾಹೀರಾತುಗಳಿಗೆ ನಿಯಮಾನುಸಾರ ದರ ನಿಗದಿಪಡಿಸಿ, ಸಂಬಂಧಪಟ್ಟ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರ್ಪಡೆಗೊಳಿಸಲಾಗುವುದು. ಜಾಹೀರಾತು ನೀಡಬಯಸುವ ಅಭ್ಯರ್ಥಿ ಅಥವಾ ಪಕ್ಷಗಳು ಜಾಹೀರಾತಿನ ವಿಷಯವುಳ್ಳ ತಲಾ ೦೨ ಸಿ.ಡಿ. ನೊಂದಿಗೆ ಎಲ್ಲ ವಿವರಗಳನ್ನು ನಮೂದಿಸಿ ಅನುಬಂಧ-ಎ ನಮೂನೆಯಲ್ಲಿ ಅಭ್ಯರ್ಥಿ ಅಥವಾ ಅಧಿಕೃತ ಏಜೆಂಟರ ಸಹಿಯೊಂದಿಗೆ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಗೆ ಸಲ್ಲಿಸಬೇಕು. ಸಮಿತಿಯು ಜಾಹೀರಾತು ವಿಷಯವನ್ನು ಪರಿಶೀಲಿಸಿ, ಪ್ರಸಾರಕ್ಕೆ ಅರ್ಹವಿದ್ದಲ್ಲಿ ಅನುಬಂಧ-ಬಿ ನಲ್ಲಿ ಅನುಮತಿ ನೀಡಲಿದೆ. ಸಂಬಂಧಪಟ್ಟ ಟಿ.ವಿ. ಅಥವಾ ಕೇಬಲ್ ಆಪರೇಟರ್‌ಗಳು ಅನುಬಂಧ- ಬಿ ನಲ್ಲಿ ಅನುಮತಿ ಪಡೆದಿರುವ ಜಾಹೀರಾತನ್ನು ಮಾತ್ರ ಪ್ರಸಾರ ಮಾಡಬೇಕಾಗುತ್ತದೆ. ಎಲ್ಲ ಕೇಬಲ್ ಆಪರೇಟರ್‌ಗಳು ಆಯಾ ಕ್ಷೇತ್ರ ಚುನಾವಣಾ ಅಧಿಕಾರಿಗಳ ಕಚೇರಿಗೆ ತಮ್ಮ ಕೇಬಲ್ ಸೆಟ್‌ಟಾಪ್ ಬಾಕ್ಸ್ ಅಳವಡಿಸಿ, ಟಿ.ವಿ. ಮೂಲಕ ಸಂಪರ್ಕ ಒದಗಿಸಬೇಕು. ಕೇಬಲ್ ಮೂಲಕ ಪ್ರಸಾರ ಮಾಡುವ ಎಲ್ಲ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಿಕೊಂಡಿರಬೇಕು. ಯಾವುದೇ ದೂರುಗಳು ಬಂದಲ್ಲಿ, ಆ ಪ್ರಸಾರದ ಅವಧಿಯ ಕಾರ್ಯಕ್ರಮದ ವಿಡಿಯೋ ಅನ್ನು ಡಿವಿಡಿ ಮೂಲಕ ಕೂಡಲೆ ಒದಗಿಸಲು ಸಿದ್ಧರಿರಬೇಕು. ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಕೇಬಲ್ ಆಪರೇಟರ್‌ಗಳು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವಾಗಿದೆ. ನಿಯಮವನ್ನು ಉಲ್ಲಂಘಿಸುವ ಕೇಬಲ್ ಆಪರೇಟರ್‌ಗಳ ಎಲ್ಲ ಉಪಕರಣಗಳನ್ನು ಯಾವುದೇ ನೋಟಿಸ್ ಇಲ್ಲದೆ ಜಪ್ತಿ ಮಾಡಲಾಗುವುದು. ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಕೊಪ್ಪಳ ಚುನಾವಣಾಧಿಕಾರಿ ಸಿ.ಡಿ. ಗೀತಾ, ಕುಷ್ಟಗಿ ಚುನಾವಣಾಧಿಕಾರಿ ಪ್ರಶಾಂತ್ ಪಿ.ಬಿ, ಕನಕಗಿರಿ ಚುನಾವಣಾಧಿಕಾರಿ ಎಚ್.ವಿ. ನಾಗರಾಜ್, ಗಂಗಾವತಿ ಚುನಾವಣಾಧಿಕಾರಿ ರವಿ ತಿರ್ಲಾಪುರ, ಯಲಬುರ್ಗಾ ಚುನಾವಣಾಧಿಕಾರಿ ವಿಜಯ ಮೆಕ್ಕಳಕಿ ಸೇರಿದಂತೆ ವಿವಿಧ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಮುದ್ರಣ ಸಂಸ್ಥೆಗಳ ಮಾಲೀಕರು, ಕೇಬಲ್ ಆಪರೇಟರ್‌ಗಳ ಮಾಲೀಕರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Please follow and like us:
error