ನಮ್ಮ ಪ್ರಜಾಪ್ರಭುತ್ವ ಸುರಕ್ಷಿತವಾಗಿದೆಯೇ?-ಸನತ್ ಕುಮಾರ ಬೆಳಗಲಿ

ಈ ಬಾರಿ ಬಿಜೆಪಿ ಚುನಾವಣೆ ಉಸ್ತುವಾರಿಯನ್ನು ಆರೆಸ್ಸೆಸ್ ವಹಿಸಿಕೊಂಡಿದೆ. ಪ್ರತೀ ಬೂತ್ ಮಟ್ಟಕ್ಕೂ ನೂರಾರು ಕಾರ್ಯಕರ್ತರು ಬಂದಿದ್ದಾರೆ. 60 ಮತದಾರರಿಗೆ ಒಬ್ಬ ಕಾರ್ಯಕರ್ತನನ್ನು ಮನವೊಲಿಸಲು ನೇಮಕ ಮಾಡಲಾಗಿದೆ. ಮತದಾರರ ಪಟ್ಟಿಯ ಪ್ರತಿಯೊಂದು ಪುಟಕ್ಕೂ ಪುಟ ಪ್ರಮುಖರನ್ನು ನೇಮಕ ಮಾಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವವಾದಿ ಶಕ್ತಿಗಳು ಎಚ್ಚರದಿಂದ ಹೆಜ್ಜೆ ಇಡಬೇಕಿದೆ.

ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಬಿಜೆಪಿ ಮಾತನಾಡುತ್ತಿದ್ದರೂ ಅದು ಬಯಸುತ್ತಿರುವುದು ಪ್ರತಿಪಕ್ಷ ಮುಕ್ತ ಮತ್ತು ಪ್ರಜಾಪ್ರಭುತ್ವ ಮುಕ್ತ ಭಾರತವನ್ನು. ತ್ರಿಪುರಾ ಚುನಾವಣೆ ಫಲಿತಾಂಶದ ನಂತರ ಕೇರಳವನ್ನು ಕಮ್ಯುನಿಸ್ಟರಿಂದ ಮುಕ್ತಗೊಳಿಸುವುದಾಗಿ ಬಿಜೆಪಿ ಹೇಳಿದೆ. ದೇಶವನ್ನು ಪ್ರಜಾಪ್ರಭುತ್ವದಿಂದ ಮುಕ್ತಗೊಳಿಸಿ, ಸಾಮಾಜಿಕ ಸಮಾನತೆಯನ್ನು ನಾಶಗೊಳಿಸುವುದು ಅದರ ನಿಜವಾದ ಗುರಿಯಾಗಿದೆ. ಮೋದಿಯವರ ಅಧಿಕಾರ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂಬುದು ಈ ದೇಶದ ಮೇಲ್ವರ್ಗಗಳ ಮತ್ತು ಮೇಲ್ಜಾತಿಗಳ ಹೆಬ್ಬಯಕೆಯಾಗಿದೆ.

ಭಾರತದಲ್ಲಿ ಈಗ ಪ್ರಜಾಪ್ರಭುತ್ವ ಸುರಕ್ಷಿತವಾಗಿದೆಯೇ? ಈ ಪ್ರಶ್ನೆ ಕಳೆದ ನಾಲ್ಕು ವರ್ಷಗಳಿಂದ ಪದೇ ಪದೇ ಎದುರಾಗುತ್ತಿದೆ. ಹಾಗೆ ನೋಡಿದರೆ, ಸಂವಿಧಾನದಲ್ಲಿ ನಂಬಿಕೆ ಇಲ್ಲದಿರುವ ಹಾಗೂ ನಂಬಿಕೆ ಇರುವಂತೆ ನಟಿಸುವ ಪಕ್ಷವೊಂದು ಅಯೋಧ್ಯೆ ಮಸೀದಿ ಕೆಡವಿ, ಸಂಸತ್ತಿನಲ್ಲಿ ಬಲ ಹೆಚ್ಚಿಸಿಕೊಂಡಾಗಲೇ ಗಂಡಾಂತರದ ಸೂಚನೆಗಳು ಕಾಣತೊಡಗಿದವು. ಆದರೂ, ತಕ್ಷಣಕ್ಕೆ ಹಾಗಾಗಲಿಕ್ಕಿಲ್ಲ ಎಂದು ನಾವು ನಂಬಿಕೊಂಡು ಬಂದೆವು. ವಾಜಪೇಯಿ ಪ್ರಧಾನಿಯಾಗಿದ್ದಾಗ, ಸಂವಿಧಾನ ಪರಾಮರ್ಶೆಗೆ ಸಮಿತಿ ರಚಿಸಿದರೂ ಕೂಡ ಜನತಂತ್ರದ ಲಕ್ಷ್ಮಣ ರೇಖೆಯನ್ನು ಅವರು ದಾಟಲಿಲ್ಲ. ಅದಕ್ಕೆ ಕಾರಣ, ಸಂವಿಧಾನ ಪರಾಮರ್ಶೆಗೆ ತೀವ್ರ ಪ್ರತಿರೋಧ ಬಂತು.

ಆದರೆ ಈಗ ಕಳೆದ ಲೋಕಸಭಾ ಚುನಾವಣೆಯ ನಂತರ ನಡೆದ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಬಂದರೆ, ಕಳೆದ 70 ವರ್ಷಗಳಿಂದ ಸುರಕ್ಷಿತವಾಗಿದ್ದ ನಮ್ಮ ಜನತಂತ್ರಕ್ಕೆ ಗಂಡಾಂತರ ಎದುರಾಗಿದೆಯೇನೋ ಎಂಬ ಆತಂಕ ಎದುರಾಗುತ್ತದೆ. ಹಾಗೆ ನೋಡಿದರೆ, ಅಮೆರಿಕದಲ್ಲಿ ಟ್ರಂಪ್‌ನಂತಹವರು ಅಧ್ಯಕ್ಷರಾದ ನಂತರ ಜಗತ್ತಿನ ಕೆಲ ದೇಶದಲ್ಲಿ ಅಂತಹವರೇ ಗೆದ್ದು ಬಂದ ನಂತರ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವದ ಅಡಿಪಾಯ ಕುಸಿಯುತ್ತಿರುವ ಲಕ್ಷಣಗಳು ಕಾಣುತ್ತಿವೆ. ಭಾರತದಲ್ಲಂತೂ ಅದು ತೀವ್ರ ಸ್ವರೂಪ ಪಡೆದಿದೆ.

ರಾಜಕಾರಣದಲ್ಲಿ ವ್ಯಕ್ತಿಪೂಜೆ ಅಥವಾ ಹೀರೋ ವರ್ಶಿಪ್ ಎಂಬುದು ವಿಜೃಂಭಿಸತೊಡಗಿದರೆ, ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 1949ರಲ್ಲಿ ಹೇಳಿದ್ದರು. ಭಾರತದ ಸಂವಿಧಾನ ರೂಪಿಸಿದ ಅವರಿಗೆ ಈ ದೇಶದಲ್ಲಿ ಪ್ರಜಾಪ್ರಭುತ್ವದ ಪ್ರಯೋಗದ ಬಗ್ಗೆ ಒಂದು ವಿಧದ ಆತಂಕವಿತ್ತು. ಕಂದಾಚಾರ ಮತ್ತು ಪಾಳೇಗಾರಿಕೆಯಿಂದ ಕೂಡಿದ ಈ ದೇಶದಲ್ಲಿ ಜನತಂತ್ರದ ಪ್ರಯೋಗ ವಿಫಲಗೊಳ್ಳುವುದೇನೋ ಎಂದು ಅಂಬೇಡ್ಕರ್ ಅವರು 1953ರಲ್ಲಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ಈಗ ನಮ್ಮ ದೇಶದಲ್ಲಿ ನಡೆಯುತ್ತಿರುವ ವ್ಯಕ್ತಿಪೂಜೆ, ಚರಿತ್ರೆಯ ವಿರೂಪೀಕರಣ, ಅಜ್ಞಾನದ ಅಟ್ಟಹಾಸ ಹಾಗೂ ಚಿಂತಕರ ಕಗ್ಗೊಲೆಗಳನ್ನು ನೋಡಿದರೆ ಬಾಬಾ ಸಾಹೇಬರು ವ್ಯಕ್ತಪಡಿಸಿದ ಸಂದೇಹ ನಿಜವಾಗುವುದೇನೋ ಎಂಬ ಆತಂಕ ಉಂಟಾಗುತ್ತದೆ. ಚುನಾವಣೆ ಮೂಲಕ ಅಧಿಕಾರಕ್ಕೆ ಬಂದವರು ತಾವು ಹತ್ತಿ ಬಂದ ಏಣಿಯನ್ನೇ ಒದ್ದು ಸಂವಿಧಾನಾತ್ಮಕ ಸಂಸ್ಥೆಗಳನ್ನು ಬುಡಮೇಲು ಮಾಡಲು ಹೊರಟಿರುವುದು ಕಳವಳದ ಸಂಗತಿಯಾಗಿದೆ.

ಕಳೆದ 70 ವರ್ಷಗಳಲ್ಲಿ ಈ ದೇಶದಲ್ಲಿ ಏನೂ ಆಗಲೇ ಇಲ್ಲ ಎಂದು ಹೇಳುತ್ತಲೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಧನೆಗಳನ್ನು ಹೀಯಾಳಿಸುತ್ತ ಕಳೆದ ನಾಲ್ಕು ವರ್ಷಗಳಲ್ಲಿ ಅಧಿಕಾರ ವಹಿಸಿಕೊಂಡವರು ಕಡೆದು ಕಟ್ಟೆ ಹಾಕಿದ್ದಾರೆ ಎಂಬ ಹುಸಿ ಭ್ರಮೆ ಸೃಷ್ಟಿಸಲಾಗಿದೆ. ಈ ನಾಲ್ಕು ವರ್ಷಗಳಲ್ಲಿ ಈ ದೇಶ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೂ ಕೂಡ ದೇಶ ಪ್ರಗತಿಯಲ್ಲಿದೆ ಎಂಬ ಭ್ರಮೆ ಹುಟ್ಟಿಸಲಾಗಿದೆ. ಲಲಿತ್ ಮೋದಿ, ನೀರವ್ ಮೋದಿ, ವಿಜಯ ಮಲ್ಯ ಅಂತಹವರು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಟೋಪಿ ಹಾಕಿ, ದೇಶ ಬಿಟ್ಟು ಹೋಗಲು ಅವಕಾಶ ನೀಡಲಾಗಿದೆ. ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಇವರಿಗೆ ಪ್ರಶ್ನಾತೀತ ಅಧಿಕಾರ ಬೇಕಾಗಿದೆ.

ಜಗತ್ತಿನ ಸುರಕ್ಷಿತ ಪ್ರಜಾಪ್ರಭುತ್ವಗಳ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿಯುತ್ತಲೇ ಇದೆ. ಜನತಂತ್ರ ಕುರಿತು ಅನೇಕ ಅಧ್ಯಯನ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಭಾರತದ ಸ್ಥಿತಿ ಕಳವಳಕಾರಿಯಾಗಿದೆ. ಐದಾರು ಮಾನದಂಡಗಳನ್ನು ಇಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗುತ್ತದೆ. ನಾಗರಿಕರ ಹಕ್ಕುಗಳು, ಬಹುತ್ವ, ಸರಕಾರದ ಕಾರ್ಯವಿಧಾನ ಮತ್ತು ರಾಜಕೀಯ ಸಂಸ್ಕೃತಿ ಹೀಗೆ ಅನೇಕ ಮಾನದಂಡಗಳಿಂದ ಸಮೀಕ್ಷೆ ನಡೆಸಿದ ನಂತರ, ಭಾರತದ ಸ್ಥಾನ ಕುಸಿಯುತ್ತಿದೆ. ಹಿಂದುತ್ವದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡ ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಮತ್ತು ಸಮಾಜವಾದ ಎಂಬ ಶಬ್ದಗಳು ಭಾರತಕ್ಕೆ ಪರಕೀಯ ಎಂದು ಆರೆಸ್ಸೆಸ್‌ನ ಎರಡನೇ ಸರಸಂಘ ಚಾಲಕ ಗೋಳ್ವಾಲ್ಕರ್ ಆಗಾಗ ಹೇಳುತ್ತಿದ್ದರು. ಭಾರತದ ಮಣ್ಣಿಗೆ ಪ್ರಜಾಪ್ರಭುತ್ವ ಹೊಂದುವುದಿಲ್ಲ ಎಂದು ಅವರು ಹೇಳಿದ್ದರು. ಈಗ ಅವರ ಶಿಷ್ಯರೇ ಅಧಿಕಾರದಲ್ಲಿ ಇರುವುದರಿಂದ ಪ್ರಜಾಪ್ರಭುತ್ವ ಅಪಾಯ ಎದುರಿಸುತ್ತಿದೆ. ಕೇಂದ್ರದಲ್ಲಿ ಸಂಘ ಪರಿವಾರ ನಿಯಂತ್ರಿತ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವದ ಅಡಿಪಾಯ ಕುಸಿಯತೊಡಗಿದೆ. ಈಗ ಗಡಿಯಾಚೆಗಿನ ಶತ್ರುಗಳೊಂದಿಗೆ ಕದನ ನಡೆದಿಲ್ಲ. ದೇಶದೊಳಗೆ, ನಮ್ಮ ಬಂಧುಗಳನ್ನೇ ಶತ್ರುಗಳನ್ನಾಗಿ ಹೆಸರಿಸಿ, ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ಆರಂಭವಾಗಿದೆ. ಮುಸಲ್ಮಾನರು ಮತ್ತು ಕ್ರೈಸ್ತರು ಈ ದೇಶದಲ್ಲಿ ಎರಡನೇ ದರ್ಜೆ ಪ್ರಜೆಗಳಾಗಿರಬೇಕೆಂದು ಗೋಳ್ವಾಲ್ಕರ್ ಹೇಳಿದ ಮಾತನ್ನು ಅವರ ಶಿಷ್ಯರು ನಿಜ ಮಾಡಲು ಹೊರಟಿದ್ದಾರೆ.

ಸಂಸತ್ತಿನಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ನಿರಾಕರಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಅವರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾತಿನಿಧ್ಯ ಒತ್ತಟ್ಟಿಗಿರಲಿ, ಅವರು ನೆಮ್ಮದಿಯಾಗಿ ಇರಲು ಸಹ ಬಿಡುತ್ತಿಲ್ಲ. ದನರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಅಮಾಯಕರ ಹತ್ಯೆಗಳು, ಅಖ್ಲಾಕ್ ಎಂಬಾತ ತನ್ನ ಮನೆಯಲ್ಲಿ ದನದ ಮಾಂಸ ಇಟ್ಟಿದ್ದ ಎಂಬ ಕಾರಣಕ್ಕಾಗಿ ನಡೆದ ಕಗ್ಗೊಲೆ, ಇನ್ನೊಬ್ಬ ಮುಸ್ಲಿಂ ಬಾಲಕ ಹಬ್ಬದ ದಿನ ಊರಿಗೆ ಮಾಂಸ ತೆಗೆದುಕೊಂಡು ಹೋಗುತ್ತಿದ್ದಾನೆಂದು ರೈಲು ನಿಲ್ದಾಣದಲ್ಲಿ ನಡೆದ ಹತ್ಯೆ ಇವೆಲ್ಲ ಪ್ರಜಾಪ್ರಭುತ್ವದ ಕುಸಿತದ ಸೂಚನೆಗಳಾಗಿವೆ.

ಇನ್ನೂ ಆತಂಕದ ಸಂಗತಿಯೆಂದರೆ, ಒಂದು ಸಮುದಾಯದವರನ್ನು ಗುರುತಿಸಿ ಕೊಲ್ಲುವುದರ ಜೊತೆಗೆ ಯಾವ ಸಮುದಾಯಕ್ಕೂ ಸೇರದ ವಿಚಾರವಾದಿಗಳನ್ನು ಗುರಿಯಾಗಿ ಇರಿಸಿಕೊಂಡು ಹಾಡಹಗಲೇ ಅವರನ್ನು ಕೊಂದು ಹಾಕಲಾಗುತ್ತಿದೆ. ಪುಣೆಯ ಅಂಧಶ್ರದ್ಧ ನಿರ್ಮೂಲನಾ ಸಮಿತಿಯ ನರೇಂದ್ರ ಧಾಭೋಳ್ಕರ್, ಕೊಲ್ಲಾಪುರದ ಚಿಂತಕ ಹಾಗೂ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ, ನಮ್ಮ ನಾಡಿನ ಖ್ಯಾತ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಮತ್ತು ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಮನೆ ಬಾಗಿಲಿಗೆ ಬಂದು ಕೊಲ್ಲಲಾಯಿತು. ಇನ್ನು ಮುಂದಿನ ಬಲಿ ಯಾರೆಂದು ಆತಂಕದಿಂದ ಕಾಯುವ ದಿನಗಳು ಬಂದಿವೆ. ಈ ನಾಲ್ವರನ್ನು ಕೊಂದವರನ್ನು ಬಂಧಿಸಿ, ಹತ್ಯೆಯ ಜಾಲವನ್ನು ಭೇದಿಸಲು ಪೊಲೀಸರಿಗೆ ಈವರೆಗೆ ಸಾಧ್ಯವಾಗಿಲ್ಲ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಕೇಂದ್ರ ಸರಕಾರಕ್ಕೆ ಮನಸ್ಸಿಲ್ಲ. ಹಂತಕರನ್ನು ಅಧಿಕಾರದಲ್ಲಿ ಇದ್ದವರೇ ರಕ್ಷಿಸುತ್ತಿದ್ದಾರೇನೋ ಎಂಬ ಸಂದೇಹ ಬರುವಂತೆ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ. ಇದು ಕೂಡ ಪ್ರಜಾಪ್ರಭುತ್ವದ ಅವನತಿಯ ಲಕ್ಷಣ.

ಇನ್ನೂ ಅಪಾಯಕಾರಿ ಸಂಗತಿಯೆಂದರೆ, ದಶಕಗಳ ಕಾಲ ಬೆಳೆದು ಬಂದ ಶೈಕ್ಷಣಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಯತ್ನ ನಡೆದಿದೆ. ಮುಕ್ತ ಸಂವಾದಕ್ಕೆ ಹೆಸರಾದ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ನಾಶ ಮಾಡಲು ವ್ಯಾಪಕ ಸಂಚು ರೂಪಿಸಲಾಗಿದೆ. ನಿಧಾನ ವಿಷವನ್ನು ನೀಡಿ, ಇದನ್ನು ಕೊಲ್ಲಲು ಅಲ್ಲಿನ ಕುಲಪತಿ ಸುಪಾರಿ ಪಡೆದಿದ್ದಾರೆ. ಈ ದೇಶಕ್ಕೆ ನೂರಾರು ವಿಜ್ಞಾನಿಗಳನ್ನು, ರಾಜ್ಯತಂತ್ರಜ್ಞರನ್ನು, ಸಾಹಿತಿಗಳನ್ನು, ಸಂಶೋಧಕರನ್ನು ನೀಡಿದ ಜೆಎನ್‌ಯು ಇಂದು ಪ್ರಭುತ್ವ ಪ್ರೇರಿತ ಕಲಹದ ಕಣವಾಗಿದೆ. ಈ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಓದಿದ ಎನ್.ರಾಮ್, ಸೀತಾರಾಂ ಯೆಚೂರಿ, ಪ್ರಕಾಶ್ ಕಾರಟ್ ಮತ್ತು ಈಗ ರಕ್ಷಣಾ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಕೂಡ ತಮ್ಮನ್ನು ಬೆಳೆಸಿದ ಜೆಎನ್‌ಯು ಬಗ್ಗೆ ಅಭಿಮಾನ ಹೊಂದಿದ್ದಾರೆ. ಇಂತಹ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ಹಯ್ಯಿಕುಮಾರ್, ಶೆಹ್ಲಾ ರಶೀದ್, ಉಮರ್ ಖಾಲಿದ್ ಅಂತಹವರನ್ನು ಪಾಕ್ ಏಜೆಂಟರು ಎಂಬಂತೆ ಬಿಂಬಿಸಲು ಯತ್ನಿಸಿದ ಸರಕಾರ ಅವರ ಮೇಲಿನ ಆರೋಪ ಸಾಬೀತು ಮಾಡಲಾಗದೇ ಅಪಹಾಸ್ಯಕ್ಕೀಡಾಯಿತು. ಇದು ಕೂಡ ಪ್ರಜಾಪ್ರಭುತ್ವಕ್ಕೆ ಅಳಿಸಲಾಗದ ಕಳಂಕ.

ಜೆಎನ್‌ಯುನಲ್ಲಿ ನಡೆಯುತ್ತಿರುವುದು ಎಡ-ಬಲ ಸಂಘರ್ಷವೆಂದು ಬಿಂಬಿಸುತ್ತಿರುವುದು ಸರಿಯಲ್ಲ. ಮುಕ್ತ ಚಿಂತನೆಗೆ ಹೆಸರಾದ ಈ ವಿಶ್ವವಿದ್ಯಾ ನಿಲಯವನ್ನು ಕೇಂದ್ರ ಸರಕಾರವೇ ನಾಶ ಪಡಿಸುತ್ತಿರುವ ಬಗ್ಗೆ ಈ ದೇಶದ ನೂರಾರು ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಂವಿಧಾನಾತ್ಮಕ ಸಂಸ್ಥೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗುತ್ತಿದೆ. ಯೋಜನಾ ಆಯೋಗವನ್ನು ನೀತಿ ಆಯೋಗವನ್ನಾಗಿ ಮಾಡಿ, ಅದರ ಮೂಲ ಸ್ವರೂಪವನ್ನೇ ಹಾಳು ಮಾಡಲಾಯಿತು. ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಕೂಡ ಸರಕಾರ ನಿಯಂತ್ರಿಸುತ್ತಿದೆಯೇನೋ ಎಂಬ ಸಂದೇಹ ಉಂಟಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲೂ ಸರಕಾರ ಹಸ್ತಕ್ಷೇಪ ಮಾಡುತ್ತಿದೆಯೆಂದು ಹಿರಿಯ ನ್ಯಾಯಮೂರ್ತಿಗಳು ಬಹಿರಂಗವಾಗಿ ಹೇಳಿದ್ದಾರೆ. ಇದು ಕೂಡ ಕುಸಿಯುತ್ತಿರುವ ಪ್ರಜಾಪ್ರಭುತ್ವದ ಸೂಚನೆ.

ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಬಿಜೆಪಿ ಮಾತನಾಡುತ್ತಿದ್ದರೂ ಅದು ಬಯಸುತ್ತಿರುವುದು ಪ್ರತಿಪಕ್ಷ ಮುಕ್ತ ಮತ್ತು ಪ್ರಜಾಪ್ರಭುತ್ವ ಮುಕ್ತ ಭಾರತವನ್ನು. ತ್ರಿಪುರಾ ಚುನಾವಣೆ ಫಲಿತಾಂಶದ ನಂತರ ಕೇರಳವನ್ನು ಕಮ್ಯುನಿಸ್ಟರಿಂದ ಮುಕ್ತಗೊಳಿಸುವುದಾಗಿ ಬಿಜೆಪಿ ಹೇಳಿದೆ. ದೇಶವನ್ನು ಪ್ರಜಾಪ್ರಭುತ್ವದಿಂದ ಮುಕ್ತಗೊಳಿಸಿ, ಸಾಮಾಜಿಕ ಸಮಾನತೆಯನ್ನು ನಾಶಗೊಳಿಸುವುದು ಅದರ ನಿಜವಾದ ಗುರಿಯಾಗಿದೆ. ಮೋದಿಯವರ ಅಧಿಕಾರ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂಬುದು ಈ ದೇಶದ ಮೇಲ್ವರ್ಗಗಳ ಮತ್ತು ಮೇಲ್ಜಾತಿಗಳ ಹೆಬ್ಬಯಕೆಯಾಗಿದೆ. ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಆಗಾಗ ಇದನ್ನು ಹೇಳುತ್ತಲೇ ಇರುತ್ತಾರೆ. ಸರ್ವರಿಗೂ ಸಮಾನ ಅವಕಾಶ ಇರಕೂಡದು ಎಂಬುದೇ ಪ್ರಜಾಪ್ರಭುತ್ವ ವಿರುದ್ಧ ನೀತಿಯಾಗಿದೆ. ಇಂತಹ ಸನ್ನಿವೇಶದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಬಂದಿದೆ. ಈ ಚುನಾವಣೆಯಲ್ಲಿ ಬಹುತೇಕ ಕಡೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಹಳೆಯ ಮೈಸೂರಿನ ಕೆಲ ಭಾಗಗಳಲ್ಲಿ ಜಾತ್ಯತೀತ ಜನತಾ ದಳವು ನಿರ್ಣಾಯಕ ಪಾತ್ರ ವಹಿಸಲಿದೆ. ಕರ್ನಾಟಕವನ್ನು ಗೆದ್ದರೆ ಕೇರಳ ಸಹಿತ ದಕ್ಷಿಣ ಭಾರತ ಗೆಲ್ಲಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲವೇ ಬಿಜೆಪಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಇವೆರಡಕ್ಕೂ ಪರ್ಯಾಯ ಬೇಕೆಂದು ಕೆಲವರು ಹೇಳುತ್ತಿದ್ದರೂ ಕೂಡ ವಾಸ್ತವವಾಗಿ ಅಂತಹ ಪರ್ಯಾಯ ಈಗ ಸಾಧ್ಯವಿಲ್ಲ. ಅಂತಹ ಪ್ರಯೋಗಗಳೆಲ್ಲ ವಿಫಲಗೊಂಡಿವೆ. ಈಗ ನಮ್ಮ ಮುಂದಿರುವುದು ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕೋ ಅಥವಾ ಉಳಿಯಬಾರದೋ ಎಂಬ ಎರಡೇ ಆಯ್ಕೆಗಳು. ದೇಶದ ಸಕಲ ಸಂಪನ್ಮೂಲಗಳನ್ನು ಲೂಟಿ ಮಾಡಲು ಹೊರಟಿರುವ ಕಾರ್ಪೊರೇಟ್ ಬಂಡವಾಳಶಾಹಿಗೆ ಕೇಂದ್ರದಲ್ಲಿ ತಮ್ಮ ಪರವಾಗಿ ಇರುವ ಪ್ರಶ್ನಾತೀತ ಅಧಿಕಾರ ಹೊಂದಿರುವ ನರೇಂದ್ರ ಮೋದಿ ಅವರಂತಹ ಸರಕಾರ ಬೇಕಾಗಿದೆ. ಸಂಘ ಪರಿವಾರಕ್ಕೆ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿ ಸ್ಪಂದಿಸುವ ಸರಕಾರ ಬೇಕಾಗಿದೆ. ನರೇಂದ್ರ ಮೋದಿ ಸರಕಾರ ಇವೆರಡನ್ನೂ ಪ್ರತಿನಿಧಿಸುತ್ತಿದೆ. ನವ ಉದಾರೀಕರಣ ಆರ್ಥಿಕ ನೀತಿಯನ್ನು ಇನ್ನಷ್ಟು ತೀವ್ರವಾಗಿ ತರಲು ದುರ್ಬಲ ಕಾಂಗ್ರೆಸ್‌ಗಿಂತ ಪ್ರಬಲ ಮೋದಿ ಬಂಡವಾಳಶಾಹಿಗೆ ಬೇಕು.

ಈ ದೇಶದ ಸಂವಿಧಾನವನ್ನು ದುರ್ಬಲಗೊಳಿಸದೇ ಪ್ರಜಾಪ್ರಭುತ್ವವನ್ನು ನಾಶ ಮಾಡದೇ ಸಂಪತ್ತನ್ನು ಲೂಟಿ ಮಾಡುವ ಗುರಿ ಸಾಧಿಸಲು ಸಾಧ್ಯವಿಲ್ಲವೆಂದು ನಂಬಿರುವ ಬಂಡವಾಳಶಾಹಿ ತನ್ನ ಹಿತ ರಕ್ಷಿಸುವ ಇಂದಿನ ಕೇಂದ್ರ ಸರಕಾರಕ್ಕೆ ಬೆಂಗಾವಲಾಗಿ ನಿಂತಿದೆ. ಇಂತಹ ಸನ್ನಿವೇಶದಲ್ಲಿ ಮೂರನೇ ಪರ್ಯಾಯದ ಕುರಿತು ಮಾತನಾಡುತ್ತ ಕಾಲಹರಣ ಮಾಡುವುದು ಅಪಾಯಕಾರಿಯಾಗಿದೆ. ದೇಶದ ಸಂಸದೀಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಬೇಕಿದೆ.

ಈ ನೆಲೆಯಲ್ಲಿ ಕಮ್ಯುನಿಸ್ಟ್ ನಾಯಕರಾದ ಸೀತಾರಾಂ ಯೆಚೂರಿ ಮತ್ತು ಪ್ರಕಾಶ್ ಕಾರಟ್ ಅವರು ಹೇಳಿದ ಮಾತು ಗಮನಾರ್ಹವಾಗಿದೆ. ಈ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕೆಂದು ಮುಖ್ಯವಲ್ಲ, ಯಾರನ್ನು ಸೋಲಿಸಬೇಕು ಎಂಬುದು ಮುಖ್ಯವಾಗಿದೆ. ಆದರೆ ಅವರನ್ನು ಸೋಲಿಸುವುದು ಅಷ್ಟು ಸುಲಭದ ಸಂಗತಿಯಲ್ಲ. ಈ ಬಾರಿ ಬಿಜೆಪಿ ಚುನಾವಣೆ ಉಸ್ತುವಾರಿಯನ್ನು ಆರೆಸ್ಸೆಸ್ ವಹಿಸಿಕೊಂಡಿದೆ. ಪ್ರತೀ ಬೂತ್ ಮಟ್ಟಕ್ಕೂ ನೂರಾರು ಕಾರ್ಯಕರ್ತರು ಬಂದಿದ್ದಾರೆ. 60 ಮತದಾರರಿಗೆ ಒಬ್ಬ ಕಾರ್ಯಕರ್ತನನ್ನು ಮನವೊಲಿಸಲು ನೇಮಕ ಮಾಡಲಾಗಿದೆ. ಮತದಾರರ ಪಟ್ಟಿಯ ಪ್ರತಿಯೊಂದು ಪುಟಕ್ಕೂ ಪುಟ ಪ್ರಮುಖರನ್ನು ನೇಮಕ ಮಾಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವವಾದಿ ಶಕ್ತಿಗಳು ಎಚ್ಚರದಿಂದ ಹೆಜ್ಜೆ ಇಡಬೇಕಿದೆ.

courtesy : varthabharati

Please follow and like us:
error