ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : ಈ ದಾಖಲೆಗಳಲ್ಲಿ ಯಾವುದಾದರೂ ಒಂದು ಇದ್ದರೂ ಮತದಾನ ಮಾಡಬಹುದು

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : ಮತದಾರರ ಗುರುತಿಗೆ ಪರ್ಯಾಯ ೨೨ ದಾಖಲೆಗಳು
Koppal Election News : ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ನಿಯಮಾನುಸಾರ ನೊಂದಾಯಿತರಾಗಿರುವ ಮತದಾರರು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ರಾಜ್ಯ ಚುನಾವಣಾ ಆಯೋಗವು ಪರ್ಯಾಯವಾಗಿ ೨೨ ದಾಖಲೆಗಳನ್ನು ಸೂಚಿಸಿದ್ದು, ಈ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಅವರು ತಿಳಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಗಾಗಿ ರಾಜ್ಯ ಚುನಾವಣಾ ಆಯೋಗವು ಆ. ೩೧ ರಂದು ಮತದಾನವನ್ನು ನಿಗದಿಪಡಿಸಿದ್ದು, ಈ ಚುನಾವಣೆಯಲ್ಲಿ ನಿಯಮಾನುಸಾರ ನೊಂದಾಯಿತರಾಗಿರುವ ಮತದಾರರು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ (ಇ.ಪಿ.ಐ.ಸಿ) ಯನ್ನು ತೋರಿಸಿ ಮತದಾನ ಮಾಡಬಹುದು. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ (ಇ.ಪಿ.ಐ.ಸಿ) ಹೊಂದದೇ ಇರುವ ಮತದಾರರಿಗೆ ಪರ್ಯಾಯವಾಗಿ ೨೨ ಬಗೆಯ ದಾಖಲೆಗಳನ್ನು ನಿಗದಿಪಡಿಸಿದೆ. ಈ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯಿದ್ದಲ್ಲಿ, ತಮ್ಮ ಮತ ಚಲಾಯಿಸಬಹುದಾಗಿದೆ.
ಪಾಸ್ ಪೋರ್ಟ, ಡ್ರೈವಿಂಗ್ ಲೈಸನ್ಸ್, ಆದಾಯ ತೆರಿಗೆ ಗುರುತಿನ ಚೀಟಿ (ಪ್ಯಾನ್ ಕಾರ್ಡ್), ರಾಜ್ಯ/ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್/ ಕಿಸಾನ್ ಮತ್ತು ಅಂಚೆ ಕಛೇರಿ ನೀಡಿರುವ ಭಾವಚಿತ್ರವಿರುವ ಪಾಸ್‌ಬುಕ್, ಮಾನ್ಯತೆ ಪಡೆದ ನೋದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು, ಭಾವಚಿತ್ರವಿರುವ ನೋಂದಾಯಿತ ಡೀಡ್‌ಗಳು/ ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಭಾವಚಿತ್ರವಿರುವ ಪಡಿತರ ಚೀಟಿಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಎಸ್.ಸಿ./ ಎಸ್.ಟಿ./ ಒ.ಬಿ.ಸಿ. ಭಾವಚಿತ್ರವಿರುವ ಪ್ರಮಾಣ ಪತ್ರಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ/ ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ದಾಪ್ಯ ವೇತನ ಆದೇಶ, ವಿಧವಾ ವೇತನ ಆದೇಶಗಳು, ಭಾವಚಿತ್ರವಿರುವ ಸ್ವಾತಂತ್ರ ಯೋಧರ ಗುರುತಿನ ಚೀಟಿಗಳು, ಸಕ್ಷಮ ಪ್ರಾಧಿಕಾರದಿಂದ ನೀಡಿದ ಭಾವಚಿತ್ರವಿರುವ ಶಸ್ತ್ರ ಪರವಾನಿಗೆ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರದಿಂದ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿಗಳು, ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ ಕ್ಯಾಂಟಿನ್ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ, ನರೇಗಾ ಯೋಜನೆಯಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ, ಭಾವಚಿತ್ರವಿರುವ ಯಶಸ್ವಿನಿ ಕಾರ್ಡ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾ.ಪಂ. ಇತ್ಯಾದಿ ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚಿಟಿಗಳು, ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರೀಕರ ಗುರುತಿನ ಚೀಟಿ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯು ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ/ ಮೂಲ ಪಡಿತರ ಚೀಟಿ, ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ ಕಾರ್ಡಗಳು (ಕಾರ್ಮಿಕ ಮಂತ್ರಾಲಯ ಯೋಜನೆ) ಹಾಗೂ ಆದಾರ ಕಾರ್ಡ, ಈ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ.  
ಅರ್ಹ ಎಲ್ಲ ಮತದಾರರೂ ತಪ್ಪದೆ ತಮ್ಮ ಮತ ಚಲಾಯಿಸುವಂತೆ ಮತ್ತು ಮತದಾನವನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತ ರೀತಿಯಿಂದ ಕೈಗೊಳ್ಳಲು ಮತದಾರರು ಸಹಕರಿಸುವಂತೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್  ತಿಳಿಸಿದ್ದಾರೆ.