ಜನರ ಪ್ರಣಾಳಿಕೆ ನಮ್ಮೂರು ಹಿಂಗಿರ್ಬೇಕು ಗೆ ಹಿಟ್ನಾಳ ಚಾಲನೆ


ಕೊಪ್ಪಳ, ಆ. ೨೪: ಕೊಪ್ಪಳ ನಗರಸಭೆಯ ೩೧ ವಾರ್ಡಿಗೆ ಭೇಟಿ ನೀಡಿ ಜನರನ್ನೇ ನೇರವಾಗಿ ಮಾತನಾಡಿಸಿ, ಜನರು ಹೇಳುವ ಕೆಲಸ ಮತ್ತು ಅಭಿವೃದ್ಧಿ ಕುರಿತು ಕಾಂಗ್ರೆಸ್ ಪ್ರಚಾರ ಸಮಿತಿ ನೇತೃತ್ವದಲ್ಲಿ ನಮ್ಮೂರು ಹಿಂಗಿರ್ಬೇಕು ಎಂಬ ಪ್ರಣಾಳಿಕೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು.
ನಗರದ ಒಂದನೆ ವಾರ್ಡಿನ ಶ್ರೀ ಸಿರಸಪ್ಪಯ್ಯನಮಠದ ಹತ್ತಿರ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕರು ವಾರ್ಡಿನ ಜನರಿಂದ ತಮ್ಮ ಬೇಡಿಕೆಗಳನ್ನು ಬರೆಸಿಕೊಳ್ಳುವ ಮೂಲಕ ವಿಶಿಷ್ಟವಾದ ಜನರ ಪ್ರಣಾಳಿಕೆ ಸಿದ್ಧಪಡಿಸಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ನವಯುಗ ಆರಂಭಿಸುವ ಮಹತ್ವಕಾಂಕ್ಷಿ ಯೋಜನೆಗೆ ಚಾಲನೆ ನಿಡಿದರು.
ಎಲ್ಲರಿಗೂ ತಮ್ಮ ಕರ್ತವ್ಯದ ಅರಿವು ಇರಬೇಕು ಹಕ್ಕಿನ ಜೊತೆಗೆ ತಿಳುವಳಿಕೆ ಬರಬೇಕು. ಹಚ್ಛ ಹಸಿರು-ಸಮೃದ್ಧ-ಸ್ವಚ್ಛ ಕೊಪ್ಪಳ ಮಾಡಲು ಈ ಯೋಜನೆ ತಯಾರಿಸಲಾಗುತ್ತದೆ. ಚಂಡಿಗರ್ ಮಾದರಿಯಲ್ಲಿ ಕೊಪ್ಪಳವನ್ನು ಅಭಿವೃದ್ಧಿಪಡಿಸಲು ಮೊದಲು ಜನರ ಬೇಡಿಕೆಗಳ ಪಟ್ಟಿ ಮಾಢಿ, ಅದರಂತೆ ನಗರಸಭೆ ಯೋಜನೆ ರೂಪಿಸಿ ತದನಂತರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕಿದೆ ಅದಕ್ಕೆ ಜನರು ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸಿ ಪೂರ್ಣ ಬಹುಮತದ ನಗರಸಭೆ ತರಬೇಕು ಎಂದರು.
ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮತನಾಡಿ, ನೂತನ ಪ್ರಣಾಳಿಕೆಯಲ್ಲಿ ಹೇಳಿದಂತೆ ನಗರಸಭೆ ಅಧಿಕಾರಕ್ಕೆ ಬಂದ ಕೂಡಲೇ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ನೇತೃತ್ವದಲ್ಲಿ ರೂಪರೇಷೆ ಸಿದ್ದಪಡಿಸಿ ನಗರವನ್ನು ಸಮಗ್ರ ಅಭಿವೃದ್ಧಿ ಮಾಡಲಾಗುವದು ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಪೂರ್ಣ ಬಹುಮತ ನೀಡಿ ಅವಕಾಶ ನೀಡಬೇಕು, ಹಂಗಿಲ್ಲದ ನಗರಸಭೆ ನಿರ್ಮಾಣಕ್ಕೆ ೩೧ ವಾರ್ಡಗಳಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು, ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದು, ಮುಂದಿನ ಐದು ವರ್ಷ ನಗರಸಭೆಯ ಕೆಲಸಗಳಿಗೆ ಶಾಸಕರ ಶಕ್ತಿಯಾಗಿ ಕೆಲಸ ಮಾಡಲು ನಗರಸಭೆ ಕಾಂಗ್ರೆಸ್ ಮಡಿಲಿಗೆ ಬರಬೇಕು ಎಂದರು.
ಮುಖಂಡರಾದ ಕೃಷ್ಣಾರಡ್ಡಿ ಗಲಿಬಿ ಮಾತನಾಡಿ, ಕೊಪ್ಪಳ ಶಾಸಕರು ಕಳೆದ ಐದು ವರ್ಷದಲ್ಲಿ ೨೨೦೦ ಕೋಟಿ ಅನುದಾನದಲ್ಲಿ ಕೊಪ್ಪಳ ನಗರಕ್ಕೆ ೨೪/೭ ಕುಡಿಯುವ ನೀರಿನ ವ್ಯವಸ್ಥೆ, ರೂ. ೪ ಕೋಟಿ ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ, ನಗರದೆಲ್ಲೆಡೆ ಸಿಸಿ ರಸ್ತೆ, ಜಿಲ್ಲಾ ಸ್ಟೇಡಿಯಂನಲ್ಲಿ ಈಜುಕೊಳ, ನಗರದಲ್ಲಿ ಶ್ರೀಕೃಷ್ಣ ದೇವರಾಯ ವಿವಿ ಕೊಪ್ಪಳ ಸ್ನಾತಕೋತ್ತರ ಕೇಂದ್ರಕ್ಕೆ ೧೩ ಎಕರೆ ಭೂಮಿ ಮಂಜೂರು, ಸರಕಾರಿ ಮಹಿಳಾ ಪದವಿ ಕಾಲೇಜು ಕಟ್ಟಡ, ಪದವಿಪೂರ್ವ ಕಾಲೇಜು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಕಟ್ಟಡ, ವೈದ್ಯಕೀಯ ಕಾಲೇಜಿಗೆ ೪೫೦ ಬೆಡ್ ಆಸ್ಪತ್ರೆ, ೧೦೦ ಬೆಡ್ ಸ್ತ್ರೀ ಮತ್ತು ಮಕ್ಕಳ ಆಸ್ಪತ್ರೆ, ವಾಲ್ಮೀಕಿ ಸಮುದಾಯ ಭವನ, ಮುಸ್ಲಿಂ ಸಮುದಾಯ ಭವನ, ಕ್ರಿಶ್ಚಿಯನ್ ಸಮುದಾಯ ಭವನ, ಜೈನ ಸಮುದಾಯ ಭವನ ಸೇರಿದಂತೆ ಅನೇಕ ಭವನಗಳಿಗೆ ಅನುದಾನಗಳ ತರುವದರ ಜೊತೆಗೆ ನಗರದಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಬಸವಣ್ಣ ವೃತ್ತದಲ್ಲಿ ಬೃಹತ್ ಬಸವ ಪುತ್ಥಳಿ ನಿರ್ಮಾಣ ಮಾಡಿದ್ದಾರೆಂಬುದು ಸಣ್ಣ ವಿಷಯವಲ್ಲ, ಆದ್ದರಿಂದ ಪ್ರತಿ ವಾರ್ಡಿನ ಅಭ್ಯರ್ಥಿಯೂ ರಾಘವೇಂದ್ರ ಹಿಟ್ನಾಳರೆಂದೇ ಭಾವಿಸಿ ಮತ ಹಾಕಿರಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಶಾ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜುಲ್ಲು ಖಾದರ್ ಖಾದ್ರಿ, ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಶೋರಿ ಬೂದನೂರ, ಕೃಷ್ಣಾ ಎಂ. ಇಟ್ಟಂಗಿ, ಅಮ್ಜದ್ ಪಟೇಲ್, ವೀರಣ್ಣ ಸಂಡೂರ, ವಿರುಪಾಕ್ಷಪ್ಪ ನವೋದಯ, ಮುತ್ತುರಾಜ ಕುಷ್ಟಗಿ, ಶಿವಣ್ಣ ಪಾವಲಿಶೆಟ್ಟರ್, ದ್ಯಾಮಣ್ಣ ಚಿಲವಾಡಗಿ, ರವಿ ಕುರಗೋಡ ಇತರರು ಇದ್ದರು.

Please follow and like us:
error

Related posts