ಚೆಕ್‌ಪೋಸ್ಟ್ ಕಾರ್ಯವೈಖರಿ ಖುದ್ದು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

ಚುನಾವಣೆ ನೀತಿ ಸಂಹಿತೆ ಪಾಲನೆ

ಕೊಪ್ಪಳ ಏ.: : ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅಕ್ರಮಗಳನ್ನು ಪತ್ತೆ ಹಚ್ಚಲು ಕೊಪ್ಪಳ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಸ್ಥಿರ ಕಣ್ಗಾವಲು ತಂಡವನ್ನು ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೋಮವಾರದಂದು ಯಲಬುರ್ಗಾ ತಾಲೂಕು ಸಂಕನೂರ ಗ್ರಾಮ ಬಳಿಯ ಚೆಕ್‌ಪೋಸ್ಟ್‌ಗೆ ಆಕಸ್ಮಿಕ ಭೇಟಿ ನೀಡಿ, ಕಾರ್ಯ ತಂಡದ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿದರು.
ಯಲಬುರ್ಗಾ ತಾಲೂಕು ಸಂಕನೂರ ಗ್ರಾಮ ಬಳಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗೆ ಆಕಸ್ಮಿಕ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಚೆಕ್‌ಪೋಸ್ಟ್ ಮೂಲಕ ಸಂಚರಿಸುವ ಲಾರಿ, ಕಾರು, ಟಾಟಾ ಏಸ್ ಸೇರಿದಂತೆ ಎಲ್ಲ ಬಗೆಯ ವಾಹನಗಳ ತಪಾಸಣೆಯನ್ನು ಖುದ್ದು ಹಾಜರಿದ್ದು, ಮಾಡಿಸಿದರು. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು ೧೧ ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಎಲ್ಲ ಬಗೆಯ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಅಥವಾ ಇದಕ್ಕೆ ಸಂಬಂಧಿತರಿಂದ ಅಕ್ರಮ ಹಣ ಸಾಗಾಣಿಕೆ, ಮತದಾರರಿಗೆ ಆಮಿಷ ಒಡ್ಡಲು ವಿವಿಧ ಬಗೆಯ ಸಾಮಗ್ರಿಗಳ ಸಾಗಾಣಿಕೆ, ಮದ್ಯ ಸಾಗಾಣಿಕೆ ಸೇರಿದಂತೆ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣಾ ಕಾರ್ಯ ಜರುಗುತ್ತಿದೆ. ಸ್ಥಿರ ಕಣ್ಗಾವಲು ತಂಡಗಳು ಕಟ್ಟೆಚ್ಚರ ವಹಿಸಿ, ವಾಹನಗಳ ತಪಾಸಣೆ ಕೈಗೊಳ್ಳಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ, ಕೂಡಲೆ ಕಾನೂನು ರೀತ್ಯ ಕ್ರಮ ವಹಿಸುವರು. ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಉದ್ದೇಶದಿಂದ ಜಿಲ್ಲಾಡಳಿತ ಎಲ್ಲ ಬಗೆಯ ಸಿದ್ಧತೆಗಳನ್ನು ಕೈಗೊಂಡು, ಈಗಾಗಲೆ ಕಾರ್ಯತತ್ಪರವಾಗಿದೆ. ಈ ದಿಸೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಂತಹ ಚೆಕ್‌ಪೋಸ್ಟ್‌ಗಳಿಗೆ ಆಕಸ್ಮಿಕ ಭೇಟಿ ನೀಡಿ, ಕಾರ್ಯವೈಖರಿ ಪರಿಶೀಲಿಸುವ ಕಾರ್ಯ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೋಮವಾರದಂದು ಯಲಬುರ್ಗಾ ತಾಲೂಕು ಸಂಕನೂರು ಗ್ರಾಮದ ಬಳಿ ಆಕಸ್ಮಿಕ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೆ ಚೆಕ್‌ಪೋಸ್ಟ್‌ನ ಸಿಬ್ಬಂದಿಗಳಿಗೆ ಎಚ್ಚರಿಕೆಯಿಂದ, ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳುವಂತೆ ಸೂಚನೆ ನೀಡಿದರು.
೧೧ ಚೆಕ್‌ಪೋಸ್ಟ್‌ಗಳು : ಚೆಕ್‌ಪೋಸ್ಟ್ ಸ್ಥಾಪಿಸಿರುವ ಸ್ಥಳ ಹಾಗೂ ತಂಡದ ಮುಖ್ಯಸ್ಥರ ವಿವರ ಇಂತಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ಯಾದಿಗುಪ್ಪ : ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಎಸ್.ಡಿ. ಅಗಡಿ- ೯೭೩೧೦೬೫೭೦೧. ಹನಮನಾಳ : ಕುಷ್ಟಗಿ ತಾ.ಪಂ. ನರೇಗ ಸಹಾಯಕ ನಿರ್ದೇಶಕ ಅರುಣಕುಮಾರ- ೮೧೫೦೯೧೦೫೭೮. ಕಿಲ್ಹಾರಹಟ್ಟಿ : ಮುಖ್ಯಾಧಿಕಾರಿ, ತಾವರಗೇರ, ಪ.ಪಂ. ಸಾಯಿಬಣ್ಣ ಸೂಗೂರ- ೭೩೫೩೮೭೭೦೯೯. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಚನ್ನಳ್ಳಿ ಕ್ರಾಸ್ : ಮೀನುಗಾರಿಕೆ ಸಹಾಯಕ ನಿರ್ದೇಶಕ ಬಸವರಾಜ ಪಿ. ಮುನಿರಾಬಾದ್ – ೯೮೮೬೪೩೦೩೩೮. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಚಿಕ್ಕಜಂತಕಲ್ : ಗಂಗಾವತಿ ತಾ.ಪಂ. ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ- ೯೭೩೮೮೩೪೯೩೫. ಕಡೇಬಾಗಿಲು : ವೀರಭದ್ರಪ್ಪ ಗೊಂಡಬಾಳ, ಕ್ಷೇತ್ರ ಸಮನ್ವಯಾಧಿಕಾರಿ ಸಂಗಾಪುರ- ೭೯೭೫೨೪೭೩೦೪. ಯಲಬುರ್ಗಾ ಕ್ಷೇತ್ರದಲ್ಲಿ ಬನ್ನಿಕೊಪ್ಪ: ಬಿಸಿಎಂ ವಿಸ್ತರಣಾಧಿಕಾರಿ ಎಸ್.ವಿ. ಭಜಂತ್ರಿ- ೯೪೮೨೪೨೮೨೯೯. ಸಂಕನೂರ ಕ್ರಾಸ್ : ಪಿಡಿಒ ಕರಮುಡಿ ಫಕೀರಪ್ಪ ಕಟ್ಟಿಮನಿ- ೯೪೮೦೮೭೧೪೭೯. ಬಂಡಿ : ಪಿಡಿಒ ಗೆದಿಗೇರಿ ಹನುಮಂತಗೌಡ- ೯೪೮೦೮೭೧೫೦೮. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮೂನ್‌ಲೈಟ್ ಡಾಬಾ ಬಳಿ : ಪ್ರಾದೇಶಿಕ ಪೌಲ್ಟ್ರಿ ಫರ‍್ಟಿಲಿಟಿ ಮತ್ತು ತರಬೇತಿ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕ ಡಾ. ಸತೀಶಕುಮಾರ- ೯೪೪೯೧೫೪೧೨೭. ಬೆಳಗಟ್ಟಿ : ಖಜಾನೆ ಇಲಾಖೆ ಉಪನಿರ್ದೇಶಕ ಹರಿನಾಥಬಾಬು-೯೪೮೦೦೪೧೩೧೨.
ಪ್ರತಿ ಚೆಕ್‌ಪೋಸ್ಟ್‌ಗೆ ತಂಡದ ಮುಖ್ಯಸ್ಥರ ಜೊತೆಗೆ ನಾಲ್ವರು ಪೊಲೀಸ್ ಸಿಬ್ಬಂದಿ, ಓರ್ವ ಇತರೆ ಇಲಾಖೆ ಸಿಬ್ಬಂದಿ ಹಾಗೂ ಕ್ಯಾಮೆರಾಮನ್ ಇರುತ್ತಾರೆ. ಯಾವುದೇ ಅನುಮಾನಸ್ಪದ ಹಾಗೂ ಅಕ್ರಮ ಸಾಗಾಣಿಕೆ ಇತರೆ ಚಟುವಟಿಕೆ ಪತ್ತೆಯಾದಲ್ಲಿ, ವಶಕ್ಕೆ ಪಡೆದು, ಎಫ್.ಐ.ಆರ್. ದಾಖಲಿಸಿ, ೨೪ ಗಂಟೆಯೊಳಗಾಗಿ ಆಯಾ ವ್ಯಾಪ್ತಿಯ ನ್ಯಾಯಾಲಯಕ್ಕೆ ಸಲ್ಲಿಸಬೇಕಿರುತ್ತದೆ. ಅಲ್ಲದೆ ಪ್ರತಿದಿನದ ವರದಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಚೆಕ್‌ಪೋಸ್ಟ್‌ಗಳಿಗೆ ನಿಯಮಿತವಾಗಿ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಚುನಾವಣಾ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ಜಿಲ್ಲಾ ಚುನಾವಣಾಧಿಕಾರಿ ಎಂ. ಕನಗವಲ್ಲಿ ಅವರು.

Please follow and like us:
error