ಗಂಗಾವತಿ : ನೀತಿ ಸಂಹಿತೆ ನಿಗಾ ವಹಿಸಲು ಚೆಕ್‌ಪೋಸ್ಟ್ ಸ್ಥಾಪನೆಗೆ ಸೂಚನೆ

 ಗಂಗಾವತಿ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಕುರಿತು ನಿಗಾ ವಹಿಸಲು ಚೆಕ್‌ಪೋಸ್ಟ್ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಆದೇಶಿಸಿದ್ದಾರೆ.
ಗಂಗಾವತಿ ನಗರಸಭೆಗೆ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಜರುಗಿಸುವ ಉದ್ದೇಶದಿಂದ ಎಂ.ಸಿ.ಸಿ. ತಂಡದ ಮುಖ್ಯಸ್ಥರಾಗಿರುವ ಐಎಎಸ್ ಪ್ರೊಬೆಷನರಿ ಅಧಿಕಾರಿ ಅಕ್ಷಯ್ ಶ್ರೀಧರ್, ನೋಡಲ್ ಅಧಿಕಾರಿಯಾಗಿರುವ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ ಅವರು ಸೋಮವಾರದಂದು ಗಂಗಾವತಿ ನಗರಸಭೆ ವ್ಯಾಪ್ತಿಯ ಗಂಗಾವತಿ ನಗರಸಭೆ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾ.ಪಂ. ಕಚೇರಿ ಹಾಗೂ ಕೃಷಿ ಇಲಾಖೆ ಕಚೇರಿ ಸೇರಿದಂತೆ ಐದು ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ನಾಮಪತ್ರ ಸ್ವೀಕೃತಿ ಪ್ರಕ್ರಿಯೆ ಹಾಗೂ ಚುನಾವಣೆ ನೀತಿ ಸಂಹಿತೆ ಪಾಲನೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಜರುಗಿಸಲು ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದೆ, ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಿ, ಅಕ್ರಮಗಳನ್ನು ತಡೆಗಟ್ಟುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಅದರನ್ವಯ, ಗಂಗಾವತಿಯಿಂದ ಆನೆಗೊಂದಿ ರಸ್ತೆ ಹಾಗೂ ರಾಯಚೂರು ರಸ್ತೆಗಳಲ್ಲಿ ತಲಾ ಒಂದು ಚೆಕ್ ಪೋಸ್ಟ್ ಸ್ಥಾಪಿಸಿ, ಅಕ್ರಮಗಳನ್ನು ತಡೆಗಟ್ಟಲು ಅಗತ್ಯ ಬಂದೋಬಸ್ತ್ ಹಾಗೂ ತಪಾಸಣೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ವಿದ್ಯುನ್ಮಾನ ಮತಯಂತ್ರಗಳನ್ನು ದಾಸ್ತಾನು ಮಾಡಿರುವ ಕೊಠಡಿಗೆ ಭೇಟಿ ನೀಡಿ, ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಅಧಿಕಾರಿಗಳು ಪರಿಶೀಲಿಸಿದರು.
ಗಂಗಾವತಿ ತಹಸಿಲ್ದಾರರ ಕಚೇರಿಯ ಚುನಾವಣಾ ವಿಭಾಗದ ಗುರುರಾಜ್ ಸೇರಿದಂತೆ ನಗರಸಭೆ ವ್ಯಾಪ್ತಿಯ ಚುನಾವಣಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿದರು.

Please follow and like us:

Related posts