ಕ್ಷೇತ್ರದ ಸಮಗ್ರ ಅಭಿವೃದ್ಧಿಯೆ ಬಿಜೆಪಿ ಗುರಿ: ಅಮರೇಶ್ ಕರಡಿ

ಟಣಕನಕಲ್‌ನಲ್ಲಿ ಪ್ರಚಾರಸಭೆ | ಬಿಜೆಪಿ ಬೆಂಬಲಿಸಿ ಹಲವರು ಸೇರ್ಪಡೆ
ಕೊಪ್ಪಳ:
ಕೊಪ್ಪಳ ಕ್ಷೇತ್ರದ ಸಮಗ್ರ ಅಭಿವೃದ್ಧಿಯೆ ಬಿಜೆಪಿಯ ಗುರಿ. ಹೀಗಾಗಿ ಕ್ಷೇತ್ರದ ಜನತೆ ಕೂಡ ಬಿಜೆಪಿ ಬೆಂಬಲಿಸಿ ಮತ ಹಾಕಿದರೆ ಅನುಕೂಲವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಅಮರೇಶ್ ಕರಡಿ ಹೇಳಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಐದು ವರ್ಷಗಳ ಕಾಲ ಕಾಂಗ್ರೆಸ್ ಅಭಿವೃದ್ಧಿ ಕಾರ್ಯ ಮಾಡದೇ ಕಾಲಹರಣ ಮಾಡಿದೆ. ಕ್ಷೇತ್ರದಲ್ಲಿ ಮರಳು ಮಾಫಿಯಾ, ನೀರು ಮಾಫಿಯಾ ಹೆಚ್ಚಾಗಿ ನಡೆಯುತ್ತಿದೆ. ಕ್ಷೇತ್ರದ ಅಭಿವೃದ್ಧಿ ಮರೆತ ಕಾಂಗ್ರೆಸ್‌ನ್ನು ದೂರ ಇಟ್ಟು ಬಿಜೆಪಿ ಬೆಂಬಲಿಸಿದರೆ ಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದರೆ ಕ್ರಮೇಣ ಕೊಪ್ಪಳ ಸಹ ಅಬೀವೃದ್ಧಿಯಾಗುತ್ತದೆ. ಇದನ್ನು ಮನಗಂಡು ತಾವುಗಳು ಬಿಜೆಪಿಯ ಕಮಲದ ಗುರುತಿಗೆ ತಪ್ಪದೆ ಮತದಾನ ಮಾಡಿ ಬಹುಮತದಿಂದ ನನ್ನನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ನಮ್ಮದು ಬಿಸಿಲ ನಾಡು, ಇಲ್ಲಿ ಮಳೆಯೂ ಸಹ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಇಂದು ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿರುವುದು ಗೊತ್ತಿರುವ ಸಂಗತಿ. ಕ್ಷೇತ್ರಕ್ಕೆ ನೀರಾವರಿ ಯೋಜನೆಗಳನ್ನು ತಂದು ರೈತರ ಬಾಳು ಬೆಳಗುವಂತೆ ಮಾಡುವುದು ಬಿಜೆಪಿ ಆಶಯ. ರೈತರ ಏಳ್ಗೆಗಾಗಿ ಈ ಹಿಂದೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಯಡಿಯೂರಪ್ಪ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಅವರನ್ನು ಮತ್ತೊಮ್ಮೆ ಸಿಎಂ ಮಾಡಲು ತಾವು ಸಹ ಕೈ ಜೋಡಿಸಬೇಕು. ಪಕ್ಕದಲ್ಲೇ ತುಂಗಭದ್ರಾ ಜಲಾಶಯ ಇದ್ದರೂ ಕ್ಷೇತ್ರಕ್ಕೆ ಹೆಚ್ಚಿನ ಉಪಯೋಗವಾಗಿಲ್ಲ. ಜಲಾಶಯದ ನೀರು ಬಳಸಿ ರೈತರ ಜಮೀನಿಗೆ ನೀರೊದಗುವಂತೆ ಮಾಡಲಾಗುವುದು. ನಮ್ಮ ತಂದೆಯವರು ಶಾಸಕರಿದ್ದಾಗ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಈಶ್ವರಗೌಡ್ರ, ಮಂಜುನಾಥ ಪಾಟೀಲ್ ಹಂದ್ರಾಳ್, ಶಿವಪ್ಪ ಹಂದ್ರಾಳ, ಗವಿಸಿದ್ದಪ್ಪ ಬಿಸರಳ್ಳಿ, ಸಂಗಪ್ಪ ಬಿಸನಳ್ಳಿ, ಅಂದಾನಪ್ಪ ಪೊಲೀಸ್‌ಪಾಟೀಲ್, ಹನುಮಂತ ಕಟ್ಟಿ, ಆನಂದ ಸಣ್ಣಗೌಡರ, ಸೋಮಲಿಂಗಪ್ಪ ಹೊಸುರು, ಸಂಗಪ್ಪ ಲಕ್ಕುಂಡಿ, ಚಂದಾಲಿಂಗಪ್ಪ ಹಂದ್ರಾಳ, ಫಕೀರಪ್ಪ ಬಿಸನಳ್ಳಿ, ಮಲ್ಲಿಕಾರ್ಜುನ ಪೊಲೀಸ್‌ಪಾಟೀಲ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಜನತೆ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮುಖಂಡ ಹನುಮಂತಪ್ಪ ಹದ್ದಿನ್, ಮಲ್ಲಪ್ಪ ಹದ್ದಿನ್ ಸೇರಿದಂತೆ ಮುಂತಾದ ಹಲವು ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.

Please follow and like us:
error