You are here
Home > Election_2018 > ಕರಡು ಮತದಾರರ ಪಟ್ಟಿ ಪ್ರಕಟ : ಪರಿಷ್ಕರಿಸಿಕೊಳ್ಳಲು ಸೂಚನೆ

ಕರಡು ಮತದಾರರ ಪಟ್ಟಿ ಪ್ರಕಟ : ಪರಿಷ್ಕರಿಸಿಕೊಳ್ಳಲು ಸೂಚನೆ

ಕೊಪ್ಪಳ ಅ.  :  ಕೊಪ್ಪಳ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಗಳನ್ನು ಸಂಬಂಧಪಟ್ಟ ತಹಶೀಲ್ದಾರ ಕಾರ್ಯಾಲಯದಲ್ಲಿ ಪ್ರಕಟಿಸಲಾಗಿದ್ದು, ಪರಿಷ್ಕರಿಸಿಕೊಳ್ಳಲು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.
ದಿನಾಂಕ ೦೧-೦೧-೨೦೧೯ ರ ಆಧಾರದ ಮೇಲೆ ನಡೆಯುತ್ತಿರುವ ಮತದಾರರ ಪಟ್ಟಿ ಪರಿಸ್ಕರಣೆ ೨೦೧೯ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ ಕೊಪ್ಪಳ ಜಿಲ್ಲೆಯ, ೬೦-ಕುಷ್ಟಗಿ, ೬೧-ಕನಕಗಿರಿ, ೬೨-ಗಂಗಾವತಿ, ೬೩-ಯಲಬುರ್ಗಾ ಮತ್ತು ೬೪-ಕೊಪ್ಪಳ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿಯನ್ನು ಅಕ್ಟೋಬರ್. ೧೦ ರಂದು ಪ್ರಕಟಿಸಲಾಗಿದೆ. ಈ ಕರಡು ಮತದಾರರ ಪಟ್ಟಿಗಳನ್ನು ಸಂಬಂಧಪಟ್ಟ ತಹಶೀಲ್ದಾರ ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಮತ್ತು ಸಹಾಯಕ ಆಯುಕ್ತರು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳು ಕೊಪ್ಪಳ ಇವರ ಕಾರ್ಯಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇರಿಸಲಾಗಿದೆ.
ಪರಿಷ್ಕರಣಾ ವೇಳಾ ಪಟ್ಟಿ : ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯಕ್ರಮದ ವೇಳಾ ವಿವರ ಇಂತಿದೆ, ಅ. ೧೦ ರಿಂದ ನವೆಂಬರ್. ೨೦ ರವರೆಗೆ ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನಿಗದಿಪಡಿಸಿದ ಅವಧಿ. ನವೆಂಬರ್. ೨೦ ರಂದು ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳ ವಿಲೆವಾರಿಗೆ ಕೊನೆಯ ದಿನಾಂಕವಾಗಿದೆ. ೨೦೧೯ ರ ಜನೇವರಿ. ೦೪ ರಂದು ಅಂತಿಮ ಮತದಾರರ ಪಟ್ಟಿಗಳ ಪ್ರಕಟಣೆ ನಡೆಯಲಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು, ಈ ಕರಡು ಮತದಾರರ ಪಟ್ಟಿಗೆ ಯಾವುದಾದರೂ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ, ಹೊಸದಾಗಿ ಸೇರ್ಪಡೆಗಾಗಿ ನಮೂನೆ-೬, ತೆಗೆದು ಹಾಕಲು ನಮೂನೆ-೭, ತಿದ್ದುಪಡಿಗಾಗಿ ನಮೂನೆ-೮ ಹಾಗೂ ವಿಧಾನ ಸಭಾ ಕ್ಷೇತ್ರದೊಳಗಡೆ ವರ್ಗಾವಣೆಗಾಗಿ ನಮೂನೆ-೮ಎ ಗಳನ್ನು ನಿಗದಿತ ದಾಖಲೆಗಳೊಂದಿಗೆ ನಿಗದಿಪಡಿಸಿದ ಅವಧಿಯಲ್ಲಿ, ಸಂಬಂಧಪಟ್ಟ ನೊಂದಣಾಧಿಕಾರಿಗಳು/ ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ ಅಥವಾ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್   ತಿಳಿಸಿದ್ದಾರೆ

Top