ಜಾತಿಯ ಪೆಡಂಭೂತಕ್ಕೆ ಬಲಿಯಾದ ಜೀವಗಳು

 ಸೈರಾಟ್ ಸಿನಿಮಾ ಮಾದರಿಯಲ್ಲಿ  ಪ್ರೇಮಿಗಳನ್ನ ಕೊಂದು ಹಾಕಿದ ಪಾಪಿಗಳು

Gadag :   ಗದಗ ಜಿಲ್ಲೆಯ ರೋಣ ತಾಲೂಕಿನ ಲಕ್ಕಲಕಟ್ಟಿ ಎಂಬ ಸಣ್ಣ ಊರಲ್ಲಿ ಜಾತಿಯ ಕಾರಣಕ್ಕೆ ಎರಡು ಕೊಲೆಗಳಾಗಿವೆ.   ಕೊಲೆಯಾದ ಇಬ್ಬರು ಕೆಳಜಾತಿಯ ಯುವಕ ಯುವತಿಯರೇ. ರಮೇಶ ಮಾದರ ದಲಿತ ಹುಡುಗ, ಹುಡುಗಿ ಲಂಬಾಣಿ ಸಮುದಾಯದ ಗಂಗಮ್ಮ. ಜಾತಿಯತೆ ಅನ್ನೋದು ಗ್ರಾಮೀಣ ಪ್ರದೇಶದಲ್ಲಿ ಎಷ್ಟೊಂದು ಬಲವಾಗಿದೆ. ಅದ್ರಲ್ಲೂ ಒಂದುಕ್ಕೊಂದು ಆತುಕೊಂಡು ತಾಯ್ತನದಿಂದ ಬದುಕಬೇಕಿದ್ದ ತಳ ಸಮುದಾಯಗಳನ್ನೂ ಜಾತಿಯತೆಯ ಕ್ರೌರ್ಯ ಎಷ್ಟೊಂದು ಆಳದಲ್ಲಿ ಬೇರು ಬಿಟ್ಟಿದೆ ಎನ್ನುವುದಕ್ಕೆ ಇದೊಂದು ನಿದರ್ಶನವಷ್ಟೆ.

ದಲಿತ ಕುಟುಂಬದ ರಮೇಶ ಮಾದರ ಎಂಬ ಹುಡುಗ ಲಂಬಾಣಿಯ ಗಂಗಮ್ಮ ನಾಲ್ಕು ವರ್ಷಗಳ ಹಿಂದೆ ತೀವ್ರವಾಗಿ ಪ್ರೀತಿಸುತ್ತಿದ್ದರು. ಪ್ರೀತಿಯ ಆರಂಭದ ದಿನಗಳಲ್ಲಿ ಇವರಿಬ್ಬರು ಊರ ಹೊರಗಿನ ಹೊಲದಲ್ಲಿ ಸಿಕ್ಕಿ ಬಿದ್ದಾಗಲೇ ರಮೇಶನನ್ನು ಮೈ ಬಾವು ಬರುವ ಹಾಗೆ ಹೊಡೆದು ಊರು ಬಿಡಿಸಿದ್ದರು. ಇದಾದ ಎರಡ್ಮೂರು ತಿಂಗಳು ಕಾಯ್ದಿದ್ದ ರಮೇಶ ಒಂದಿನ ರಾತ್ರೋರಾತ್ರಿ ಊರಿಗೆ ಬಂದು ಗಂಗಮ್ಮಳನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದ. ಶಿವಮೊಗ್ಗ, ಬೆಂಗಳೂರು, ಮಂಗಳೂರುಗಳಲ್ಲಿ, ಗೌಂಡಿ ಕೆಲಸ, ಕೂಲಿ ಕೆಲಸ ಮಾಡುತ್ತಾ ಇಬ್ಬರು ಚಂದದ ಬದುಕು ಕಟ್ಟಿಕೊಂಡಿದ್ದರು. ಆದ್ರೂ ಊರ ನೆಲ, ಊರ ಕರುಳಬಳ್ಳಿಗಳು ಜಗ್ಗುತ್ತಿದ್ದುದರಿಂದ ಒಂದು ಮಗುವಾದ ಮೇಲೆ ಊರಿಗೆ ಹೋಗಿ ಎರಡು ದಿನವಿದ್ದು ಹೋಗಿದ್ದರು. ಆಮೇಲೆ ಅವರಿಬ್ಬರು ಭಯದ ನಡುವೆಯೇ ಆಗಾಗ ಊರಿಗೆ ಬಂದು ಹೋಗಿ ಮಾಡುತ್ತಿದ್ದರು.
ಆದರೆ, ಇವರಿಬ್ಬರನ್ನು ಊರ ಹಾದಿ ಬೀದಿಯಲ್ಲಿ ಕಂಡಾಗಲೆಲ್ಲ ಲಂಬಾಣಿ ಸಮುದಾಯದ ಗಂಗಮ್ಮಳ ಸಂಬಂಧಿಕರು ಕಾಲ ಕೆರೆದು ಜಗಳ ಮಾಡುವುದು, ಕ್ಯಾಕರಿಸಿ ಉಗುಳುವುದು ಮಾಡುತ್ತಿದ್ದರಂತೆ. ಅಷ್ಟೆ ಅಲ್ಲದೇ, ಕಳೆದ ಜಾತ್ರಿಯಲ್ಲಿ ಊರ ಹಿರಿಯರನ್ನು ಸೇರಿಸಿ “ದಯವಿಟ್ಟು ಆ ಹುಡುಗಾ ಹುಡುಗಿನ್ನ ಊರ ಬಿಡಿಸ್ರಿ, ನಮ್ಮ ಕಣ್ಣಿಂದ ನೋಡಾಕ ಆಗೂದಿಲ್ಲ. ಅವರ ಕಣ್ಣಿಗೆ ಬಿದ್ದಾಗಲೆಲ್ಲ ಸಿಟ್ಟ ನೆತ್ತಿಗೇರಿ ಮೈ ನಡುಗತೈತಿ. ಮಾದರ ಹುಡುಗ ನಮ್ಮ ಹುಡುಗಿನ್ನ ಓಡಿಸಿಕೊಂಡು ಹೋಗ್ಯಾನಂದ್ರ ನಮ್ಮ ಮರ್ಯಾದೆ ಏನಾಗಬಾರದು. ಅವರನ್ನ ಸರಳ$$ ಊರು ಬಿಡಿಸ್ತಿರೋ, ಅಥವಾ ನಾವು ಅವರನ್ನ ಈ ಲೋಕಾನೆ ಬಿಡಸೋಣ್ವೋ ಅಂತ ಧಮಕಿ ಹಾಕಿದ್ದರಂತೆ.
ಇದೆಲ್ಲ ಆದಮ್ಯಾಲ ಮತ್ತೆ ಅವರಿಬ್ಬರು ಊರು ಕಡೆ ಮತ್ತೆ ಒಂದಿಷ್ಟು ದಿನ ತಲೆ ಹಾಕಿರಲಿಲ್ಲ. ಆದ್ರೆ ದೀಪಾವಳಿ ನಮ್ಮ ಕಡೆ ದೊಡ್ಡ ಹಬ್ಬ.ಯಾರೇನು ಮಾಡ್ತಾರೇಳು? ಅಂತ ಹುಂಬ ದೈರ್ಯದಿಂದ, ಸಂಬಂಧಿಕರ, ಊರಿನ ನೆನಪುಗಳು ಕಾಡತೊಡಗಿ, ಕಳ್ಳ ತಡಿಲಾರದೇ ಮತ್ತೆ ಹಬ್ಬಕ್ಕೆ ಈ ಸಲ ಊರಿಗೆ ಬಂದಿದ್ರು. ಮತ್ತೆ ವಾಪಸ್ ಶಿವಮೊಗ್ಗಕ್ಕೆ ಇನ್ನೇನು ಹೋಗಬೆಕೇನ್ನುವಾಗ “ಹೆಂಗೂ ಬಂದಿರಿ, ಇನ್ಯಾಡ ದಿನ ಇದ್ದು ಹೋಗ್ರೆಪ್ಪ. ಮತ್ತ ಬರೋದು ಯಾವಾಗೋ ಏನೋ” ಅಂದಿದ್ದಕ್ಕೆ ಉಳಿದುಕೊಂಡಿದ್ದರಂತೆ.
ಆದರೆ, ಇವರು ಬಂದಾಗಿನಿಂದಲೂ ಇವರಿಬ್ಬರನ್ನು ಕೊಲೆ ಮಾಡಲೆಂದು ಹುಡುಗಿ ಸಂಬಂಧಿಕರು ಹೊಂಚು ಹಾಕುತ್ತಲೇ ಇದ್ರು. ಎರಡ್ಮೂರು ರಾತ್ರಿ ಹಗಲು ಕದ್ದು ಕಾಯುತ್ತಿದ್ದರು. ಇವತ್ತು ಮಧ್ಯಾಹ್ನ ಮೂರು ಗಂಟೆಗೆ ಯಾರದೋ ಶವ ಸಂಸ್ಕಾರಕ್ಕೆಂದು ಮನೆಯಿಂದ ಹೊರ ಹೋಗಿದ್ದ ರಮೇಶ, ಇನ್ನೇನು ಮನೆ ಹೊಸ್ತಿಲೊಳಗೆ ಪ್ರವೇಶಿಸಬೇಕು. ಅಷ್ಟರಲ್ಲೇ ಹುಡುಗಿ ಅಣ್ಣ ಮತ್ತು ಚಿಕ್ಕಪ್ಪ ದೊಡ್ಡ ಕಟ್ಟಿಗೆಯ ಕೊಡ್ಡ, ಆಯುಧಗಳಿಂದ ರಮೇಶನನ್ನು ಹೊಡೆದು ಕೆಡವಿ ಬಡಿಯತೊಡಗಿದರು. ಬಿಡಿಸಲು ಬಂದ ಗಂಗಮ್ಮಳನ್ನು ಸೊಂಟಕ್ಕೆ ಹೊಡೆದಿದ್ದರಿಂದ ಸೊಂಟವೇ ಮುರಿದು ಆಕೆ ನೆಲಕ್ಕೆ ಬಿದ್ದಿದ್ದಾಳೆ. ಆಕೆ ಸೊಂಟ ಎಳೆಯುತ್ತಲೇ ಚೀರುತ್ತಿದ್ದ ಮಗುವಿನತ್ತ ದಾವಿಸುತ್ತಿದ್ದಾಗ ಮತ್ತೆರಡು ಏಟುಗಳು ಬಿದ್ದಿದ್ದರಿಂದ ಅಲ್ಲೆ ನೆಲಕ್ಕೆ ಒರಗಿದ್ದಾಳೆ. ರಮೇಶನ ಸಹೋದರ “ನಮ್ಮ ಅಣ್ಣನ್ನ ಕೊಲ್ಲಾಕ ಹತ್ಯಾರ ಬರ್ರೆಪೋ” ಅಂತ ಚೀರುತ್ತಾ ಕೇರಿಯಿಂದ ಊರೊಳಕ್ಕೆ ಓಡಿ ಹೋಗಿ ಊರ ಜನ ಕರೆದುಕೊಂಡು ಬರುವುದ್ರೊಳಗೆ ಅಲ್ಲಿ ಎಲ್ಲವೂ ಮುಗಿದಿತ್ತು. ಕೊಲೆ ಮಾಡಿದವರು ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ತಾವು ಕೊಲೆ ಮಾಡಿದ್ದನ್ನು ದೈರ್ಯವಾಗಿ ಒಪ್ಪಿಕೊಂಡು ಶರಣಾಗಿದ್ದಾರೆ. ಕೊಲೆಯಾದ ಇಬ್ಬರಿಗೂ ಎರಡೂವರೆ ವರ್ಷ ಮತ್ತು ಐದು ತಿಂಗಳ ಮಕ್ಕಳಿವೆ. ಒಡಹುಟ್ಟಿದ ತಂಗಿಯನ್ನೆ ಕೊಲ್ಲುವಷ್ಟು ಕ್ರೌರ್ಯ ಜಾತಿಯತೆಯ ಹಿಂದೆ ಅವಿತಿದೆ.

-Hanumant Halageri

Please follow and like us:
error