fbpx

ಸೈಬರ್ ಕ್ರೈಂಗಳ ಪರಿಣಾಮಕಾರಿ ತಡೆಗೆ ಪೊಲೀಸ್ ಇಲಾಖೆ ಸನ್ನದ್ಧ- ಡಾ. ಜಿ. ಪರಮೇಶ್ವರ್

: ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಬಳಸಿ ನಡೆಸುವ ಸೈಬರ್ ಕ್ರೈಂ ಹೊಸದಾದ ಸಾಮಾಜಿಕ ಸಮಸ್ಯೆಯಾಗಿ ಉಲ್ಬಣಗೊಳ್ಳುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪೊಲೀಸ್ ಇಲಾಖೆ ಸರ್ವ ರೀತಿಯಿಂದ ಸನ್ನದ್ಧವಾಗುತ್ತಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.
ಕೊಪ್ಪಳ ತಾಲೂಕು ಮುನಿರಾಬಾದ್‌ನ ಕೆ.ಎಸ್.ಆರ್.ಪಿ. ತರಬೇತಿ ಶಾಲೆ ಆವರಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಾಣಾರ್ಥಿಗಳ ಮತ್ತು ನಗರ/ ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ “ನಿರ್ಗಮನ ಪಥಸಂಚಲನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಅಭಿವೃದ್ಧಿಗೊಂಡಂತೆ ಹೊಸದಾಗಿ ಸಾಮಾಜಿಕ ಸಮಸ್ಯೆಗಳು ಕಂಡುಬರುತ್ತಿವೆ. ಈ ಪೈಕಿ ಕಂಪ್ಯೂಟರ್ ಹಾಗೂ ಅಂತರ್ಜಾಲ ತಂತ್ರಜ್ಞಾನ ಬಳಸಿಕೊಂಡು ನಡೆಸುತ್ತಿರುವ ಸೈಬರ್ ಕ್ರೈಂ ಕೂಡ ಸಾಮಾಜಿಕ ಸಮಸ್ಯೆಯಾಗಿ ಉಲ್ಬಣಗೊಳ್ಳುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನು ಸನ್ನದ್ಧಗೊಳಿಸುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಲವು ಬಗೆಯ ಸಿದ್ಧತೆಗಳನ್ನು, ಹೊಸ ಬಗೆಯ ಆವಿಷ್ಕಾರಗಳನ್ನು ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ಪೊಲೀಸ್ ಇಲಾಖೆಗೆ ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿಯಂತಹ ಉನ್ನತ ಶಿಕ್ಷಣ ಪಡೆದವರು ಕಾನ್ಸ್‌ಟೇಬಲ್ ಹುದ್ದೆಗಳಿಗೆ ಸೇರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹೀಗಾಗಿ ಉನ್ನತ ಶಿಕ್ಷಣ ಪಡೆದಂತಹ ಅಭ್ಯರ್ಥಿಗಳಿಗೆ ತಂತ್ರಜ್ಞಾನದ ಬಳಕೆ ಸುಲಭವಾಗುತ್ತಿದ್ದು, ಈ ನಿಟ್ಟಿನಲ್ಲಿ ಸೈಬರ್ ಕ್ರೈಂಗಳನ್ನು ತಡೆಗಟ್ಟುವ ರೀತಿಯಲ್ಲಿ ತರಬೇತಿ ನೀಡಲು ಸುಲಭವಾಗುತ್ತಿದೆ. ಪೊಲೀಸ್ ಎಂದರೆ ಸಮಾಜದಲ್ಲಿ ಗೌರವ ದೊರೆಯಬೇಕು. ಅದಕ್ಕೆಂದೇ ಪೊಲೀಸ್ ಜನಸ್ನೇಹಿಯಾಗಬೇಕು ಎಂದು ಬಯಸುತ್ತೇವೆ. ಪೊಲೀಸ್ ಠಾಣೆಗೆ ಹೋದಲ್ಲಿ ಪೊಲೀಸರಿಂದ ಸಹಾಯ ತಪ್ಪದೆ ದೊರೆಯುತ್ತದೆ ಎಂಬ ಭಾವನೆ ಜನರಲ್ಲಿ ಬರಬೇಕು. ಇದು ಇಂದಿನ ಅಗತ್ಯಗಳಲ್ಲೊಂದಾಗಿದೆ. ದೇಶದಲ್ಲಿಯೇ ಕರ್ನಾಟಕ ಆಡಳಿತ ಮಾದರಿಯಾಗಿದ್ದು, ಅದು ಮುಂದುವರಿಯಬೇಕು. ಭ್ರಷ್ಟಾಚಾರ ತೊಲಗಬೇಕು. ನಮ್ಮದು ಮೈತ್ರಿ ಸರ್ಕಾರವಾಗಿದ್ದು ಒಳ್ಳೆಯ ಆಡಳಿತ ನೀಡುವ ನಿಟ್ಟಿನಲ್ಲಿಯೇ ನಮ್ಮ ಯೋಜನೆಗಳು ಅನುಷ್ಠಾನಗೊಳ್ಳಲಿವೆ ಎಂದು ಡಾ. ಜಿ. ಪರಮೇಶ್ವರ್ ಅವರು ಹೇಳಿದರು.
ಶಿಸ್ತು ಹಾಗೂ ಕಾನೂನು ವ್ಯವಸ್ಥೆ ರಕ್ಷಣೆಗೆ ರಾಜ್ಯ ಮಾದರಿ : ಕರ್ನಾಟಕ ಪೊಲೀಸ್ ಇಡೀ ರಾಷ್ಟ್ರದಲ್ಲಿಯೇ ಹೆಸರು ಮಾಡಿದೆ. ಶಿಸ್ತು, ಜವಾಬ್ದಾರಿಯಿಂದ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ಆಸ್ತಿ-ಪಾಸ್ತಿಗಳ ರಕ್ಷಣೆ, ಕಾನೂನು ವ್ಯವಸ್ಥೆ ಕಾಪಾಡುವಲ್ಲಿ, ಮಕ್ಕಳು, ಮಹಿಳೆಯರನ್ನು ರಕ್ಷಿಸುವಲ್ಲಿ ಇಡೀ ರಾಷ್ಟ್ರದಲ್ಲಿಯೇ ಕರ್ನಾಟಕ ರಾಜ್ಯ ಹೆಸರು ಮಾಡಿದೆ. ೯ ತಿಂಗಳುಗಳ ತರಬೇತಿ ನಂತರ ಪ್ರಶಿಕ್ಷಣಾರ್ಥಿಗಳು ಸಾರ್ವಜನಿಕ ಸೇವೆಗೆ ಅಡಿ ಇಡುತ್ತಿದ್ದು, ಅತ್ಯಂತ ಜವಾಬ್ದಾರಿಯುತ ದಾರಿಗೆ ತೆರಳುತ್ತಿದ್ದೀರಿ. ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಯಶಸ್ಸು, ಹಾಗೂ ಸಾರ್ಥಕತೆ ದೊರೆಯಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದ ಗೃಹ ಮಂತ್ರಿಗಳು, ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಸತಿ ಗೃಹಗಳ ನಿರ್ಮಾಣ, ಮೂಲಭೂತ ಸೌಕರ್ಯ, ಸವಲತ್ತು ಒದಗಿಸಲು ಅಗತ್ಯ ಅನುದಾನ ಒದಗಿಸಲಾಗುವುದು ಎಂದರು.
ಶ್ರೇಷ್ಠ ಸಂವಿಧಾನ : ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಕೊಟ್ಟಾಗ, ಇಡೀ ಜಗತ್ತಿಗೆ ಶ್ರೇಷ್ಠ ಸಂವಿಧಾನ ಇದಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ನಮ್ಮ ದೇಶದಲ್ಲಿ ಸಾವಿರಾರು ಜಾತಿ, ಸಂಸ್ಕೃತಿ, ಭಾಷೆಗಳಿದ್ದರೂ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮದು. ಅದೇ ರೀತಿ ಸಮಸ್ಯೆಗಳೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿಯೇ ಇವೆ. ಪ್ರತಿಯೊಂದು ವಿಚಾರಗಳಿಗೆ ಸಂವಿಧಾನದಲ್ಲಿ ಪರಿಹಾರವನ್ನು ಒದಗಿಸಲಾಗಿದ್ದು, ಇಂತಹ ಸಂವಿಧಾನದ ರಕ್ಷಣೆಯ ಹೊಣೆ ಎಲ್ಲರ ಮೇಲಿದೆ. ದೇಶದಲ್ಲಿ ಹಲವು ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ದೇಶದ ವಿಚಾರ ಬಂದಾಗ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಬೆಸೆಯುವಂತೆ ಮಾಡುತ್ತದೆ. ಆಧುನಿಕ ಭಾರತದಲ್ಲಿ ಜನರ ಸಮಸ್ಯೆಗಳು ಕಾಲಕ್ಕೆ ಅನುಗುಣವಾಗಿ ಬದಲಾವಣೆಗೊಳ್ಳುತ್ತಿವೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದಕ್ಕೆ ಅನುಗುಣವಾಗಿ ಸಂವಿಧಾನವೂ ತಿದ್ದುಪಡಿಗೊಂಡಿದೆ. ಆದರೆ ಸಂವಿಧಾನದ ಮೂಲ ಆಶಯ ಹಾಗೂ ವಿಚಾರಗಳು ಭಾರತೀಯನಾಗಿ ಉಳಿಯಲು ನೆರವಾಗಿವೆ. ನಮ್ಮ ದೇಶದ್ದು ಯಶಸ್ವಿ ಪ್ರಜಾಪ್ರಭುತ್ವ. ಬೇರೆ ದೇಶಗಳಲ್ಲಿನ ವಿದ್ಯಮಾನಗಳನ್ನು ಗಮನಿಸಿದಾಗ, ನಮ್ಮ ದೇಶದ ಸಂವಿಧಾನ ಶ್ರೇಷ್ಠ ಸಂವಿಧಾನ ಎನಿಸಿಕೊಳ್ಳುತ್ತದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎಂದೂ ಅಲುಗಾಡುವುದಿಲ್ಲ ಎಂಬ ವಿಶ್ವಾಸವಿದೆ. ಬೇರೆ ದೇಶಗಳಲ್ಲಿ ಚುನಾವಣೆ ಜರುಗಿ, ಸರ್ಕಾರ ಬದಲಾಗುವಾಗ ರಕ್ತಪಾತ ನಡೆಯುವುದನ್ನು ಕೇಳುತ್ತೇವೆ. ಆದರೆ ನಮ್ಮ ದೇಶದಲ್ಲಿ ಶಾಂತಿಯುತವಾಗಿ ಎಲ್ಲವೂ ನಡೆಯುತ್ತದೆ. ನಮ್ಮ ದೇಶದ ಪ್ರಜಾಪ್ರಭುತ್ವ ಯಶಸ್ಸಿಗೆ ಇದೇ ಸಾಕ್ಷಿಯಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.
ಮುನಿರಾಬಾದ್ ಕೆ.ಎಸ್.ಆರ್.ಪಿ. ತರಬೇತಿ ಶಾಲೆಯ ಪ್ರಾಚಾರ್ಯ ರಾಮಕೃಷ್ಣ ಮುದ್ದೆಪಾಲ ಅವರು, ತರಬೇತಿಯ ವರದಿ ವಾಚನ ಮಾಡಿ, ಕಳೆದ ೦೯ ತಿಂಗಳಿನಿಂದ ೩೦೫ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಈ ಪೈಕಿ ಬೆಳಗಾವಿ ಜಿಲ್ಲೆಯ ೬೧, ವಿಜಯಪುರ-೫೪, ಬಾಗಲಕೋಟೆ- ೩೧ ಸೇರಿದಂತೆ ವಿವಿಧ ಜಿಲ್ಲೆಯವರಾಗಿದ್ದಾರೆ. ೧೪೨ ಪ್ರಶಿಕ್ಷಣಾರ್ಥಿಗಳು ಪದವಿಧರರಾಗಿದ್ದು, ೩೯- ಸ್ನಾತಕೋತ್ತರ ಪದವಿಧರರಾಗಿದ್ದಾರೆ. ಉಳಿದಂತೆ ಪದವಿಪೂರ್ವ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ್ದಾರೆ. ಪ್ರಶಿಕ್ಷಣಾರ್ಥಿಗಳಿಗೆ ದೈಹಿಕ ತರಬೇತಿ, ಶಸ್ತ್ರ ರಹಿತ ಪದಾತಿ ಕವಾಯತು, ಶಸ್ತ್ರ ಸಹಿತ ತರಬೇತಿ, ವಿವಿಧ ಮತ್ತು ಆಧುನಿಕ ಆಯುಧಗಳ ಬಳಕೆ ಹಾಗೂ ನಿರ್ವಹಣೆ, ಲಾಠಿ ಕವಾಯತು, ಯುದ್ಧ ಕೌಶಲ್ಯ, ಅಶ್ರುವಾಯು ಪ್ರಯೋಗ, ಗುಂಪು ನಿಯಂತ್ರಣ, ಅಡೆತಡೆಗಳ ನಿರ್ವಹಣೆ, ಶಸ್ತ್ರ ರಹಿತ ಸಮರ ಕಲೆ, ಕರಾಟೆ, ರೂಟ್ ಮಾರ್ಚ್, ಈಜು, ನೈಟ್ ಪೆಟ್ರೂಲಿಂಗ್, ರೈಡ್, ಸರ್ಜ್, ಪಹರೆ ಕರ್ತವ್ಯ, ಸೆರೆಮೋನಿಯಲ್ ಕವಾಯತು, ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಲಾಗಿದೆ ಎಂದರು. ಅಲ್ಲದೆ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ನಿಷ್ಠೆಯಿಂದ ಕರ್ತವ್ಯ ನಿರ್ವಹಣೆ, ಸಾರ್ವಜನಿಕ ಶಾಸನ ರಕ್ಷಣೆ, ಪ್ರಾಣ ಮತ್ತು ಆಸ್ತಿ-ಪಾಸ್ತಿಗಳ ಭದ್ರತಗೆಗೆ ಶಕ್ತಿ ಮೀರಿ ಪ್ರಯತ್ನಿಸುವ ಮೂಲಕ ನ್ಯಾಯ, ಶಾಂತಿಯುತ ಹಾಗೂ ಸಾಮೂಹಿಕ ವ್ಯವಸ್ಥೆ ಅಭಿವೃದ್ಧಿಗಳಿಗೆ ಶ್ರಮಿಸುತ್ತೇವೆ ಎನ್ನುವ ಪ್ರತಿಜ್ಞಾ ವಿಧಿ ಬೋಧಿಸಿದರು.
ಗಮನ ಸೆಳೆದ ಕವಾಯತು : ಮುನಿರಾಬಾದ್‌ನ ಕೆ.ಎಸ್.ಆರ್.ಪಿ. ತರಬೇತಿ ಶಾಲೆಯಲ್ಲಿ ಕಳೆದ ೦೯ ತಿಂಗಳಿನಿಂದ ವಿವಿಧ ತರಬೇತಿ ಪಡೆದು, ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಮತ್ತು ನಗರ/ ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳು ಸಹಾಯಕ ಕಮಾಂಡೆಂಟ್ ಹೇಮಂತಕುಮಾರ್ ನೇತೃತ್ವದಲ್ಲಿ ಕೈಗೊಂಡ ಆಕರ್ಷಕ ಕವಾಯತು ನೆರೆದಿದ್ದ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮೈಸೂರಿನ ಅಶ್ವರೋಹಿ ದಳ ಸುರೇಶ್‌ರಾವ್ ಶಿಂಧೆ ನೇತೃತ್ವದಲ್ಲಿ ನಡೆಸಿಕೊಟ್ಟ ಟೆಂಟ್ ಪಿಗ್ಗಿಂಗ್ ಹಾಗೂ ಗ್ರೂಪ್ ಟೆಂಟ್ ಪಿಗ್ಗಿಂಗ್ ಪರೇಡ್ ಪ್ರದರ್ಶನ ನೋಡುಗರ ಮೈ ನವಿರೇಳಿಸಿತು. ಪ್ರಶಿಕ್ಷಣಾರ್ಥಿಗಳ ಕುಟುಂಬ ಸದಸ್ಯರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಆಕರ್ಷಕ ಕವಾಯತು ವೀಕ್ಷಿಸಿ ಸಂಭ್ರಮಿಸಿದರು. ತರಬೇತಿ ಸಂದರ್ಭದಲ್ಲಿ ವಿಶೇಷ ಪ್ರತಿಭೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ಹಾಗೂ ವಿಶೇಷ ಪಾರಿತೋಷಕವನ್ನು ರಾಜ್ಯದ ಗೃಹಮಂತ್ರಿಗಳು ಇದೇ ಸಂದರ್ಭದಲ್ಲಿ ಪ್ರದಾನ ಮಾಡಿದರು.
ರಾಜ್ಯದ ಎಡಿಜಿಪಿ ಭಾಸ್ಕರರಾವ್ ಅವರು ಸ್ವಾಗತಿಸಿದರು. ಪೊಲೀಸ್ ಮಹಾ ನಿರ್ದೇಶಕರು (ತರಬೇತಿ) ಪಿ.ಕೆ. ಗರ್ಗ್, ಪ್ರಭಾರಿ ಡಿಐಜಿ (ತರಬೇತಿ) ಡಾ. ತ್ಯಾಗರಾಜನ್, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಂಡೂರು ಶಾಸಕ ತುಕಾರಾಂ, ಗಣ್ಯರಾದ ವೇಣುಗೋಪಾಲ್, ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಬಳ್ಳಾರಿ ಜಿಲ್ಲಾಧಿಕಾರಿ ರಾಮಪ್ರಸಾತ್, ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಅವರು ಉಪಸ್ಥಿತರಿದ್ದರು.

Please follow and like us:
error
error: Content is protected !!