ಸೈನಿಕರ ಅವಹೇಳನ,ದೇಶದ್ರೋಹ ಹೇಳಿಕೆ: ಶಾಸಕ ಹಿಟ್ನಾಳ ವಿರುದ್ಧ ಅಮರೇಶ ಕರಡಿ ದೂರು

ಮಾ. ೨ರಂದು ಸೈನಿಕರ ದಾಳಿ ಅನುಮಾನಿಸಿ ಹೇಳಿಕೆ ನೀಡಿದ್ದ ಶಾಸಕ | ಉಗ್ರರ ಹೆಣಗಳ ಲೆಕ್ಕ ಎಲ್ಲ ಎನ್ನುವ ಮೂಲಕ ಸೈನ್ಯಕ್ಕೆ ಅಪಮಾನ | ದೇಶದ್ರೋಹದ ಆಧಾರದ ಮೇಲೆ ಕ್ರಮಕ್ಕೆ ಅಮರೇಶ್ ಕರಡಿ ಆಗ್ರಹ

ಕೊಪ್ಪಳ: ಭಾರತೀಯ ಸೈನಿಕರು ವಾಯು ದಾಳಿ ನಡೆಸಿ ಉಗ್ರರನ್ನು ಸದೆಬಡಿದ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಾಯುದಾಳಿ ನಡೆದಿಲ್ಲ ಎನ್ನುವ ರೀತಿ ಮಾತನಾಡುವುದಲ್ಲದೆ ಉಗ್ರರ ಹೆಣಗಳನ್ನೇ ತೋರಿಸಿಲ್ಲ ಎಂದು ಹೇಳಿಕೆ ನೀಡಿ ಸೈನಿಕರನ್ನು ಅಪಮಾನ ಮಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಅಮರೇಶ ಕರಡಿ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾ. ೨ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ೧೨ ನಿಮಿಷದಲ್ಲಿ ಯುದ್ಧವಂತೆ, ಅವೆನೋ ಜೆಟ್ ಬಾರ್ಡರ್ ದಾಟಿ ಹೋದವಂತೆ, ಉಗ್ರರ ಮೇಲೆ ವಾಯು ದಾಳಿ ನಡೆದಿಲ್ಲ, ನಡೆದಿದ್ದರೆ ಉಗ್ರರ ಹೆಣಗಳನ್ನು ತೋರಿಸುತ್ತಿದ್ದರು, ಯಾವ ಮಾಧ್ಯಮಗಳಲ್ಲೂ ಉಗ್ರರ ಮೃತದೇಹಗಳನ್ನು ತೋರಿಸಿಲ್ಲ ಎಂದು ಭಾರತೀಯ ಸೈನ್ಯದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಸೈನ್ಯವನ್ನು ಅವಮಾನಿಸಿ ದೇಶದ್ರೋಹದ ಕೆಲಸ ಮಾಡಿದ್ದಾರೆ. ಇಂತವರ ವಿರುದ್ಧ ದೇಶದ್ರೋಹದ ಆಪಾದನೆ ಮೇಲೆ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸೈನಿಕರು, ಭಾರತೀಯ ಸೈನ್ಯದ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಓರ್ವ ಜನಪ್ರತಿನಿಧಿಯಾಗಿ ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ. ಇದು ಶತ್ರುರಾಷ್ಟ್ರಗಳಿಗೆ, ಉಗ್ರರಿಗೆ ಕುಮ್ಮಕ್ಕು ನೀಡಿದಂತಿದೆ. ಸೈನಿರಕ ಪರಾಕ್ರಮ, ಶೌರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೂಲಕ ಸೈನ್ಯವನ್ನು ಅಪಮಾನಿಸಿದ್ದಾರೆ. ಹೀಗಾಗಿ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.