ವರದಿಗಾರನ ಕೊಲೆಗೆ ಸುಪಾರಿ : ರವಿ ಬೆಳಗೆರೆ ಬಂಧನ

ವರದಿಗಾರನ ಕೊಲೆಗೆ ಸುಪಾರಿ :

ಪತ್ರಕರ್ತ ರವಿ ಬೆಳಗೆರೆ ಬಂಧನ ಕುರಿತು ಪೊಲೀಸರು ನೀಡಿದ ಆಘಾತಕಾರಿ ಮಾಹಿತಿ ಇಲ್ಲಿದೆ

ಬೆಂಗಳೂರು, ಡಿ.8: ಕೊಲೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಪತ್ರಕರ್ತ ರವಿ ಬೆಳಗೆರೆಯನ್ನು ನಗರದ ಪದ್ಮನಾಭನಗರದ ನಿವಾಸದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಪೊಲೀಸರು ನೀಡಿದ ಪತ್ರಿಕಾ ಪ್ರಕಟಣೆ ಹೀಗಿದೆ:-

ಡಿ. 3 ರಂದು ಬೆಂಗಳೂರು ನಗರ ಸಿಸಿಬಿ ಪೊಲೀಸ್ ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಯತ್ನಿಸುತ್ತಿದ್ದ ತಾಹೀರ್ ಹುಸೇನ್ ಯಾನೆ ಅನೂಪ್ ಗೌಡ ಎಂಬಾತನನ್ನು ಬಂಧಿಸಿರುತ್ತಾರೆ. ಈತನನ್ನು ಪೊಲೀಸ್ ಬಂಧನಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗಿ ವಿಜಯಪುರ ಜಿಲ್ಲೆಯ ಶಶಿಧರ್ ರಾಮಚಂದ್ರ ಮುಂಡೆವಾಡಿ ಎಂಬಾತನು ಮತ್ತೊಂದು ನಾಡ ಪಿಸ್ತೂಲ್ ಮತ್ತು 2 ಜೀವಂತ ಗುಂಡುಗಳನ್ನು ಪಡೆದುಕೊಂಡಿರುವುದಾಗಿ ಮಾಹಿತಿ ನೀಡುತ್ತಾನೆ. ನಂತರ ಅಕ್ರಮ ಪಿಸ್ತೂಲ್ ಹೊಂದಿದ್ದ ಜಾಲವನ್ನು ಬೆನ್ನಟ್ಟಿದ್ದ ಸಿಸಿಬಿ ಅಧಿಕಾರಿಗಳು ಡಿ. 7ರಂದು ರಾತ್ರಿ 11:15ಕ್ಕೆ ಶಶಿಧರ್ ರಾಮಚಂದ್ರ ಮುಂಡೆವಾಡಿ ಎಂಬಾತನನ್ನು ಪತ್ತೆ ಮಾಡಿ ಬಂಧಿಸಿರುತ್ತಾರೆ.

ಶಶಿಧರ್ ರಾಮಚಂದ್ರ ಮುಂಡೆವಾಡಿಯನ್ನು ಕೂಲಂಕುಶವಾಗಿ ವಿಚಾರಣೆ ಮಾಡಲಾಗಿ ಹಾಯ್ ಬೆಂಗಳೂರ್ ಪತ್ರಿಕೆಯ ಸಂಸ್ಥಾಪಕನಾದ ರವಿ ಬೆಳಗೆರೆ ನೀಡಿದ ಸುಪಾರಿಯ ಮೇರೆಗೆ ಆ. 28ರಂದು ತನ್ನ ಸಹಚರ ವಿಜು ಬಡಿಗೇರ್ ಜೊತೆ ರವಿ ಬೆಳಗೆರೆ ಕಚೇರಿಗೆ ಹೋಗಿ, ಅದೇ ದಿನ ರವಿ ಬೆಳಗೆರೆ ಶಶಿಧರ್‌ಗೆ ಒಂದು ಗನ್ ಮತ್ತು 4 ಜೀವಂತ ಗುಂಡುಗಳನ್ನು ಹಾಗೂ 1 ಚಾಕುವನ್ನು ನೀಡಿ ವೈಯಕ್ತಿಕ ವೈಷಮ್ಯದಿಂದಾಗಿ ತನಗೆ ದ್ರೋಹ ಬಗೆದಿರುವ, ಈ ಹಿಂದೆ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಹೆಗ್ಗರವಳ್ಳಿಯನ್ನು ಕೊಲೆ ಮಾಡು, ನಿನಗೆ ಎಷ್ಟು ಬೇಕೋ ಅಷ್ಟು ಹಣ ಕೊಡುತ್ತೇನೆಂದು ಹೇಳಿ ಸುಪಾರಿ ನೀಡಿ ಮುಂಗಡವಾಗಿ 15 ಸಾವಿರ ರೂ. ನೀಡಿರುತ್ತಾನೆ. ರವಿ ಬೆಳಗೆರೆ ಕಚೇರಿಯ ಒಬ್ಬ ಹುಡುಗ ಶಶಿಧರ್ ಮತ್ತು ವಿಜು ಬಡಿಗೇರ್ ರವರಿಗೆ ಉತ್ತರಹಳ್ಳಿ ಯಲ್ಲಿರುವ ಸುನೀಲ್ ಹೆಗ್ಗರವಳ್ಳಿಯ ಮನೆಯನ್ನು ತೋರಿಸಿಕೊಟ್ಟಿರುತ್ತಾರೆ. ನಂತರ ಶಶಿಧರ್ ಮತ್ತು ವಿಜು ಬಡಿಗೇರ್ ಸುನೀಲ್ ಹೆಗ್ಗರವಳ್ಳಿಯನ್ನು ಗನ್‌ನಿಂದ ಶೂಟ್ ಮಾಡಿ ಕೊಲೆ ಮಾಡಲು ಅವನ ಮನೆಯ ಬಳಿ ಕಾಯುತ್ತಿದ್ದು, ಮನೆಯಿಂದ ಹೊರಬಂದ ಸುನೀಲ್ ಹೆಗ್ಗರವಳ್ಳಿಯನ್ನು ಶೂಟ್ ಮಾಡಲು ಶಶಿಧರ್ ರಾಮಚಂದ್ರ ಮುಂಡೆವಾಡಿ ಗುರಿ ಇಟ್ಟಿದ್ದು, ಈ ಸಂದರ್ಭ ಸುನೀಲ್ ಮರೆಯಾಗಿ ಸರಿಯಾದ ಸಮಯ ದೊರೆಯದಿದ್ದ ಕಾರಣ ಆರೋಪಿ ಶಶಿಧರ್‌ ರವಿ ಬೆಳಗೆರೆಗೆ ಗನ್ ಹಾಗು ಗುಂಡುಗಳನ್ನು ವಾಪಸ್ ನೀಡಿ ಒಂದು ತಿಂಗಳು ಬಿಟ್ಟು ಬಂದು ಕೆಲಸ ಮುಗಿಸಿಕೊಡುವುದಾಗಿ ತಿಳಿಸಿ ವಾಪಸ್ ಊರಿಗೆ ಹೋಗಿರುತ್ತಾನೆ.

ಈ ಸಂಚಿನ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ-525/2017 ಕಲಂ: 120(ಬಿ), 307 ಸಹಿತ 34 ಐ.ಪಿ.ಸಿ ಜೊತೆಗೆ 3, 25 ಆರ್ಮ್ಸ್ ಕಾಯ್ದೆ 1958 ರೀತ್ಯ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಸಿಸಿಬಿ ಅಧಿಕಾರಿಗಳು ಕೈಗೊಂಡಿರುತ್ತಾರೆ. ಸಿಸಿಬಿ ಅಧಿಕಾರಿಗಳು ಈ ಪ್ರಕರಣದ ಮುಖ್ಯ ಆರೋಪಿ ರವಿ ಬೆಳಗೆರೆಯನ್ನು ಪತ್ತೆ ಮಾಡಲು ಮಾನ್ಯ ನ್ಯಾಯಾಲಯದಿಂದ ಸರ್ಚ್‌ ವಾರೆಂಟ್ ಪಡೆದುಕೊಂಡು ಇಂದು ಮಧ್ಯಾಹ್ನ 1:30 ಕ್ಕೆ ಹಾಯ್ ಬೆಂಗಳೂರು ಕಚೇರಿಯಲ್ಲಿ ಈ ಪ್ರಕರಣದ ಆರೋಪಿ ರವಿ ಬೆಳಗೆರೆಯನ್ನು ದಸ್ತಗಿರಿ ಮಾಡಿರುತ್ತಾರೆ.

ರವಿಬೆಳಗೆರೆ ವಶದಲ್ಲಿದ್ದ ಈ ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಂಡಿತ್ತಾರೆ

1) ಒಂದು ರಿವಾಲ್ವಾರ್, 53 ಜೀವಂತ ಗುಂಡುಗಳು, ಒಂದು ಬಳಸಿರುವ ಗುಂಡು

2) ಜಿಂಕೆ ಚರ್ಮ

3) ಒಂದು ಡಬ್ಬಲ್ ಬ್ಯಾರೆಲ್ ಗನ್, 41 ಜೀವಂತ ಗುಂಡುಗಳು

4) 1.5 ಅಡಿ x 1.5 ಅಡಿ ಉದ್ದಗಲದ ಒಂದು ದೊಡ್ಡ ಆಮೆ ಚಿಪ್ಪು ವಶಪಡಿಸಿಕೊಂಡಿದ್ದು, ರವಿ ಬೆಳಗೆರೆ ವಿಚಾರಣೆ ಮುಂದುವರಿಸಿದ್ದಾರೆ.

ಶಶಿಧರ್ ಮುಂಡೆವಾಡಿ ವಿರುದ್ಧ ದಾಖಲಾಗಿರುವ ಪ್ರಕರಣಗಳು 

1. 2006ರಲ್ಲಿ ಮುತ್ತು ಮಾಸ್ತರ್ ಎಂಬವರನ್ನು ಕೊಲೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

2. 2013ರಲ್ಲಿ ಬಸಪ್ಪ ಹರಿಜನ್ ಎಂಬವರನ್ನು ಕೊಲೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

3. 2014 ರಲ್ಲಿ ತನ್ನ ಸ್ನೇಹಿತ ಸುರೇಶ್ ಲಾಳಸಂಗಿ ಎಂಬವರನ್ನು ಕೊಲೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

4. 2016ರಲ್ಲಿ  ಇಂಡಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.

5. 2017 ರಲ್ಲಿ ಮಹಾರಾಷ್ಟ್ರ ರಾಜ್ಯ ಮೀರಜ್‌ನ ಗಾಂದಿಚೌಕ್ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಇಟ್ಟುಕೊಂಡಿದ್ದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

courtesy : varthabharati

Related posts