ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಅಜ್ಜಿಯನ್ನು ರಕ್ಷಿಸಿದ ಭಾಗ್ಯನಗರ ಯುವಕರು

ಇಳಿವಯಸ್ಸಿನಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ್ದರಿಂದ ಮನನೊಂದು ವಯೋವೃದ್ಧೆಯೊಬ್ಬಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದಾಗ ಸಮಯಪ್ರಜ್ಞೆ ಮೆರೆದ ಯುವಕರಿಬ್ಬರು ಆ ವಯೋವೃದ್ದೆಯನ್ನು ರಕ್ಷಣೆ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ವಯೊವೃದ್ದೆ ಶಾಂತಮ್ಮ ಎಂಬಾಕೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಿನ್ನೆ ರಾತ್ರಿ ನಗರದ ರೇಲ್ವೆ ನಿಲ್ದಾಣದ ಅನತಿ ದೂರದಲ್ಲಿ ರೈಲು ಬರುವುದನ್ನು ನೋಡಿದ ಆ ಮಹಿಳೆ ರೇಲ್ವೆ ಟ್ರ್ಯಾಕ್ ಮೇಲೆ ಮಲಗುತ್ತಿರುವುದನ್ನು ಕಂಡ ಭಾಗ್ಯನಗರ ಗ್ರಾಮದ ನಾಗರಾಜ್ ಸಮಗಂಡಿ ಹಾಗೂ ಸಂದೀಪ್ ಕೊಡಾಲ್ ಎಂಬ ಯುವಕರು ಅಜ್ಜಿಯನ್ನು ರಕ್ಷಣೆ ಮಾಡಿದ್ದಾರೆ. ರೇಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ಅಜ್ಜಿಯನ್ನು ಅಲ್ಲಿಂದ ಕರೆತಂದಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಅಜ್ಜಿ ಬಸಮ್ಮಳನ್ನು ಈಗ ಮಹಿಳಾ ಸಾಂತ್ವನ ಕೇಂದ್ರದ ವಶಕ್ಕೆ ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಅಜ್ಜಿಯನ್ನು ಸಮಯ ಪ್ರಜ್ಞೆಯಿಂದ ಯುವಕರು ರಕ್ಷಣೆ ಮಾಡಿದ ಯುವಕರಾದ ಸಂದೀಪ್ ಹಾಗೂ ನಾಗರಾಜ್ ಕಾರ್ಯಕ್ಕೆ ಅಲ್ಲಿದ್ದವರು ಪ್ರಶಂಸೆ ವ್ಯಕ್ತಪಡಿಸಿದರು. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಅಜ್ಜಿ ಇಳಕಲ್ ಬಳಿಯ ಕೊತಗಿಗೋನಾಳ ಗ್ರಾಮದವಳು. ಕಳೆದ ಎರಡು ವರ್ಷದ ಹಿಂದೆ ಶಾಂತಮ್ಮಳ ಪತಿ ತೀರಿಹೋಗಿದ್ದಾನೆ. ಅನಾರೋಗ್ಯದ ಹಿನ್ನೆಲೆಯಲ್ಲಿ ನಗರಕ್ಕೆ ಚಿಕಿತ್ಸೆಗೆಂದು ಬಂದಿದ್ದಾಳೆ. ಅಲ್ಲಿ ಇಲ್ಲಿ ಓಡಾಡಿಕೊಂಡು ಈಗ ಜೀವನ ನಡೆಸುತ್ತಿದ್ದಾಳಂತೆ. ಅದರ ಜೊತೆಗೆ ಮಕ್ಕಳು ಇಲ್ಲದ ಕಾರಣ ಈ ಶಾಂತಮ್ಮ ಅನಾಥೆಯಾಗಿದ್ದಾಳೆ. ಸಂಬಂಧಿಕರು ನೋಡಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ, ಇಳಿವಯಸ್ಸಿನಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ್ದರಿಂದ ತಾನೇಕೆ ಬದುಕಬೇಕು ಎಂದು ನೊಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಅಜ್ಜಿ ಬಂದಿರುವುದಾಗಿ ಹೇಳಿದ್ದಾಳೆ. ಒಂದು ಕಡೆ ಮಕ್ಕಳಿದ್ದರೂ ಅನಾಥವಾಗುವ ಪಾಲಕರಿದ್ದಾರೆ. ಏನೇ ಆಗಲಿ ಮಕ್ಕಳಿಲ್ಲದೆ, ಸಂಬಂಧಿಕರೂ ಹತ್ತಿರ ಸುಳಿಯದೆ ಇರುವ ಈ  ಮುಪ್ಪಿನ ಕಾಲದಲ್ಲಿ ಆ ಅಜ್ಜಿ ಇಂತಹ ಸ್ಥಿತಿಯನ್ನಎದುರಿಸಬೇಕಾಗಿ ಬಂದಿರೋದು ನಿಜಕ್ಕೂ ದುಃಖಕರ.

Please follow and like us:
error