ಮದ್ಯದ ಬಾಟಲಿಯಿಂದ ಯುವಕನಿಗೆ ಇರಿದ ಶಿಕ್ಷಕ

Kustagi : ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ನಿಂಗಪ್ಪ ಗುನ್ನಾಳ ಎಂಬಾತ ಕಂದಕೂರು ಗ್ರಾಮದ ಮಾರುತಿ ಹಲಗಿ ಎಂಬ ಯುವಕನಿಗೆ ಮದ್ಯದ ಬಾಟಲಿಯಿಂದ ಇರಿದಿದ್ದಾನೆ. ಘಟನೆಯಲ್ಲಿ ಯುವಕನ ಎಡಗೈಗೆ ಬಲವಾದ ಗಾಯವಾಗಿದೆ. ಯುವಕನಿಗೆ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಭಾರಿ ಮುಖ್ಯೋಪಾಧ್ಯಾಯ ನಿಂಗಪ್ಪ ಗುನ್ನಾಳ ಕಂದಕೂರ ಶಾಲೆಯಲ್ಲಿ ನಾನಾ ರೀತಿಯಲ್ಲಿ ಗೋಲ್​ಮಾಲ್ ಮಾಡುತ್ತಿದ್ದಾನೆಂದು ಆರೋಪಿಸಿ ದೂರು ನೀಡಲಾಗಿತ್ತಂತೆ. ಈ ದೂರು ನೀಡಿರುವುದರ ಹಿಂದೆ ಗ್ರಾಮದ ಮಾರುತಿ ಹಲಗಿ ಕೈವಾಡವಿದೆ ಎಂದು ಶಿಕ್ಷಕ ನಿಂಗಪ್ಪ ಗುನ್ನಾಳ ಭಾವಿಸಿ ದ್ವೇಷ ಸಾಧಿಸುತ್ತಿದ್ದ . ನಿನ್ನೆ ರಾತ್ರಿ  ಕುಷ್ಟಗಿ ಪಟ್ಟಣದ ಮಲ್ಲಯ್ಯ ಸರ್ಕಲ್‍ನಲ್ಲಿ ಪಾನಮತ್ತನಾಗಿದ್ದ ನಿಂಗಪ್ಪ ತನ್ನ ಬಳಿ ಇದ್ದ ಮದ್ಯದ ಬಾಟಲಿಯಿಂದ ಇರಿಯಲು ಮುಂದಾಗಿದ್ದಾನೆ. ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬಾಟಲಿ ಕೈಗೆ ತಾಗಿ ಗಾಯಗೊಂಡಿದ್ದಾನೆ. ಗಾಯಗೊಂಡಿರುವ ಯುವಕನ ಕೈ ನರಗಳು ಕಟ್ ಆಗಿದ್ದು, ಹೆಚ್ಚಿನ ಚಿಕಿತ್ಸೆಗೆ ಯುವಕನನ್ನು ಬಾಗಲಕೋಟೆಗೆ ಮಾಡಲಾಗಿದೆ