ಬಳಕೆದಾರರ ಮಾಹಿತಿಗಳನ್ನು ಫೇಸ್‌ಬುಕ್ ಮಾರುತ್ತದೆ

ಬಳಕೆದಾರರ ಮಾಹಿತಿಗಳನ್ನು ಫೇಸ್‌ಬುಕ್ ಮಾರುತ್ತದೆ: ಟ್ರಂಪ್‌ರ ಮಾಜಿ ಮುಖ್ಯ ವ್ಯೂಹಗಾರನ ಆರೋಪ 

ನ್ಯೂಯಾರ್ಕ್, ಮಾ.  : ಸಾಮಾಜಿಕ ಜಾಲತಾಣ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಮಾರಾಟ ಮಾಡುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಾಜಿ ಮುಖ್ಯ ವ್ಯೂಹಗಾರ ಹಾಗೂ ಕೇಂಬ್ರಿಜ್ ಎನಾಲಿಟಿಕದ ಮಾಜಿ ಉಪಾಧ್ಯಕ್ಷ ಸ್ಟೀವ್ ಬ್ಯಾನನ್ ಆರೋಪಿಸಿದ್ದಾರೆ.

ಆದಾಗ್ಯೂ, ರಾಜಕೀಯ ಮಾಹಿತಿ ವಿಶ್ಲೇಷಕ ಸಂಸ್ಥೆ ಕೇಂಬ್ರಿಜ್ ಎನಾಲಿಟಿಕವು ಫೇಸ್‌ಬುಕ್‌ನಿಂದ ಮಾಹಿತಿ ಪಡೆದಿರುವ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದು ‘ಫೈನಾನ್ಶಿಯಲ್ ಟೈಮ್ಸ್’ ಪತ್ರಿಕೆಯು ಗುರುವಾರ ಏರ್ಪಡಿಸಿದ ಸಮ್ಮೇಳನವೊಂದರಲ್ಲಿ ಮಾತನಾಡಿದ ಬ್ಯಾನನ್ ಹೇಳಿದ್ದಾರೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.

‘‘ಅವರು ನಿಮ್ಮ ಮಾಹಿತಿಗಳನ್ನು ಉಚಿತವಾಗಿ ಪಡೆದುಕೊಳ್ಳುತ್ತಾರೆ. ಅವರು ಅದನ್ನು ಭಾರೀ ಹಣಕ್ಕಾಗಿ ಮಾರಾಟ ಮಾಡುತ್ತಾರೆ. ಹಾಗಾಗಿಯೇ, ಇಂಥ ಕಂಪೆನಿಗಳ ಮೌಲ್ಯಮಾಪನ ಅತ್ಯಧಿಕವಾಗಿರುತ್ತದೆ’’ ಎಂದು ಬ್ಯಾನನ್ ಹೇಳಿದ್ದಾರೆ.

‘‘ನಂತರ ಅವರು ಅಲ್ಗೋರಿದಮ್ (ಕಂಪ್ಯೂಟರ್ ಪ್ರೋಗ್ರಾಂ)ಗಳನ್ನು ಬರೆಯುತ್ತಾರೆ ಹಾಗೂ ನಿಮ್ಮ ಬದುಕನ್ನು ನಿಯಂತ್ರಿಸುತ್ತಾರೆ’’ ಎಂದಿದ್ದಾರೆ.

2016ರ ಅಮೆರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ರ ಪ್ರಚಾರ ತಂಡದೊಂದಿಗೆ ಕೆಲಸ ಮಾಡಿದ್ದ ಕೇಂಬ್ರಿಜ್ ಎನಾಲಿಟಿಕ ಸಂಸ್ಥೆಯು, ಅಮೆರಿಕದ ಕೋಟ್ಯಂತರ ಮತದಾರರ ಫೇಸ್‌ಬುಕ್ ಮಾಹಿತಿಗಳನ್ನು ಪಡೆದುಕೊಂಡಿದೆ ಎಂದು ಆರೋಪಿಸಲಾಗಿದೆ.