ನನ್ನನ್ನೂ ಅತ್ಯಾಚಾರ ಮಾಡಿ ಹತ್ಯೆ ಮಾಡಬಹುದು: ಕಥುವಾ ಸಂತ್ರಸ್ತೆ ಪರ ವಕೀಲೆ

ಹೊಸದಿಲ್ಲಿ, ಎ.15: ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬದ ಪರ ನ್ಯಾಯಾಲಯದಲ್ಲಿ ವಾದಿಸುತ್ತಿರುವ ವಕೀಲೆ ದೀಪಿಕಾ ಎಸ್. ರಜಾವತ್ ತನಗೆ ಪ್ರಾಣ ಬೆದರಿಕೆಯಿದ್ದು ತನ್ನನ್ನೂ ಅತ್ಯಾಚಾರ ನಡೆಸಿ ಹತ್ಯೆ ಮಾಡುವ ಅಪಾಯವಿದೆ ಎಂದು ಭಯ ತೋಡಿಕೊಂಡಿದ್ದಾರೆ.

ನಾನು ಎಷ್ಟು ಸಮಯ ಬದುಕಿರುತ್ತೇನೆ ಎಂದು ನನಗೆ ತಿಳಿದಿಲ್ಲ. ನಿನ್ನೆ ನನಗೆ ಬೆದರಿಕೆ ಹಾಕಲಾಗಿದೆ. ನನ್ನ ಪ್ರಾಣ ಅಪಾಯದಲ್ಲಿದೆ ಎಂದು ನಾನು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸುತ್ತೇನೆ ಎಂದು ದೀಪಿಕಾ ತಿಳಿಸಿದ್ದಾರೆ. 

ಕೆಲ ದಿನಗಳ ಹಿಂದೆ ಸ್ಥಳೀಯ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ದೀಪಿಕಾ, ಜಮ್ಮು ವಕೀಲರ ಸಂಘದ ಅಧ್ಯಕ್ಷ ಬಿ.ಎಸ್ ಸ್ಲಾತಿಯಾ ತನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ನಾನು ಜಮ್ಮು ವಕೀಲರ ಸಂಘದ ಸದಸ್ಯೆಯಲ್ಲ. ಆದರೆ ಬುಧವಾರದಂದು ನಾನು ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ನನ್ನನ್ನು ಭೇಟಿ ಮಾಡಿದ ಸ್ಲಾತಿಯಾ ಈ ಪ್ರಕರಣದಿಂದ ದೂರವಿರುವಂತೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ದೀಪಿಕಾ ಆರೋಪಿಸಿದ್ದಾರೆ.

ಈ ಎಲ್ಲ ಘಟನೆಗಳಿಂದ ನನಗೆ ಭಯವಾಗಿಲ್ಲ. ಆದರೆ ನಾನು ಇಲ್ಲಿ ಸುರಕ್ಷಿತವಾಗಿಲ್ಲ ಎಂದೆನಿಸುತ್ತದೆ. ಪ್ರತಿಭಟನೆ ನಡೆಸುವ ವಕೀಲರು ನಾನು ನ್ಯಾಯಕ್ಕಾಗಿ ಹೋರಾಟ ಮಾಡಬಾರದು ಎಂದು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ನಾನು ಆಸಿಫಾ ಪ್ರಕರಣದಲ್ಲಿ ಹೋರಾಟ ಮುಂದುವರಿಸುತ್ತೇನೆ. ನನಗೆ ಪೊಲೀಸ್ ತನಿಖೆಯಲ್ಲಿ ಸಂಪೂರ್ಣ ನಂಬಿಕೆಯಿದೆ ಎಂದು ದೀಪಿಕಾ ತಿಳಿಸಿದ್ದಾರೆ