ದಲಿತ,ಮುಸ್ಲಿಂರ ಕಗ್ಗೊಲೆ ತಡೆಗಟ್ಟಲು ವಿಶೇಷ ಕಾನೂನು ರೂಪಿಸಿ- ಎಸ್.ಅಸೀಪ್ ಅಲಿ

ಕೊಪ್ಪಳ : ದೇಶದ ವಿವಿದೆಡೆ ಧರ್ಮದ ಹೆಸರಿನಲ್ಲಿ ಅಮಾಯಕ ದಲಿತ, ಮುಸ್ಲಿಂರ ಮೇಲೆ ಹಲ್ಲೆಗಳನ್ನು ಮಾಡಲಾಗುತ್ತಿದೆ. ಹತ್ಯೆ ಮಾಡಲಾಗುತ್ತಿದೆ. ಈ ಕೃತ್ಯಕ್ಕೆ ಹೊಣೆಗಾರರಾದವರನ್ನು ಗಲ್ಲಿಗೇರಿಸುವ ಶಿಕ್ಷೆಯಾಗಬೇಕು, ಅವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಗುಂಪು ಹತ್ಯೆಗಳಲ್ಲಿ ಬಲಿಯಾಗುತ್ತಿರುವ ದಲಿತರು ಮತ್ತು ಮುಸ್ಲಿಂರ ರಕ್ಷಣೆಗಾಗಿ ವಿಶೇಷ ಕಾಯ್ದೆ ಜಾರಿ ಮಾಡಬೇಕು, ತಬ್ರೇಜ್ ಅನ್ಸಾರಿಯ ಕಗ್ಗೊಲೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಹಾಗೂ ಗುಂಪು ಹತ್ಯೆಯಲ್ಲಿ ( ಮಾಬ್ ಲಿಂಚಿಂಗ್) ಪ್ರಾಣ ಕಳೆದುಕೊಂಡವರಿಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ಹಿರಿಯ ವಕೀಲರಾದ ಎಸ್.ಅಸೀಪ್ ಅಲಿ ಆಗ್ರಹಿಸಿದರು.
ಅವರು ಇಂದು ಕೊಪ್ಪಳದ ತಹಶೀಲ್ದಾರ್ ಕಚೇರಿಯಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳನ್ನು ಖಂಡಿಸಿ ಮುಸ್ಲಿಂ ಸಮುದಾಯ ಹಾಗೂ ಪ್ರಗತಿಪರ ಸಂಘಟನೆಗಳವತಿಯಿಂದ ನಡೆದ ಪ್ರತಿಭಟನಾ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ದೇಶದಲ್ಲಿ ನಾವು ಬದುಕುವುದಕ್ಕೆ ಯಾರ ಬಿಕ್ಷೆಯೂ ಬೇಕಿಲ್ಲ. ಸಂವಿಧಾನಾತ್ಮಕವಾಗಿ ಜವಾಬ್ದಾರಿಯುತವಾಗಿ ಬದುಕುತ್ತಿದ್ದೆವೆ. ಯಾರದೋ ಕರುಣೆಯಿಂದ ನಾವು ಜೀವಿಸುತ್ತಿಲ್ಲ. ನಾವು ನಿಸ್ಸಾಯಕರಲ್ಲ, ಎರಡನೇ ದರ್ಜೆ ಪ್ರಜೆಗಳೂ ಅಲ್ಲ. ಆದರೆ ನಡೆಯುತ್ತಿರುವ ಘಟನೆಗಳನ್ನು ನೋಡಿ ಸುಮ್ಮನೆ ಕೂಡುವುದಕ್ಕಾಗುವುದಿಲ್ಲ. ಇದರ ಬಗ್ಗೆ ಧ್ವನಿ ಎತ್ತಲೇಬೇಕಿದೆ. ಇದು ಸಂವೀದಾನದ ವಿರೋಧಿ ಕೃತ್ಯ ಎನ್ನುವದನ್ನು ನಮ್ಮನ್ನಾಳುವರಿಗೆ ಮನವರಿಕೆ ಮಾಡಿಕೊಡಬೇಕಿದೆ. ಸಂವಿಧಾನದ ವಿರುದ್ದ ನಡೆಯುವ ಯಾವುದೇ ಕೃತ್ಯವನ್ನು ನಾವು ಸಹಿಸುವುದಿಲ್ಲ. ಸಂವಿಧಾನ ಬಾಹಿರ ಇಂತಹ ಕೃತ್ಯಗಳ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಮಂತ್ರಿಗಳು ಸೂಕ್ತ ಪ್ರತಿಕ್ರಿಯೆ ನೀಡಬೇಕು ಮತ್ತು ಕ್ರಮ ಜರುಗಿಸಬೇಕು ತಬ್ರೇಜ್ ಅನ್ಸಾರಿ ಹತ್ಯೆಯಲ್ಲಿ ಭಾಗಿಯಾದವರ ವಿರುದ್ದ ತೀವ್ರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮೊದಲು ಮಾತನಾಡಿದ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ನಮ್ಮ ದೇಶದಲ್ಲಿ ಹೋರಾಟದ ಧ್ವನಿಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ದಲಿತರು, ಮುಸ್ಲಿಂರ ವಿರುದ್ದ ನಡೆಯುತ್ತಿರುವ ಇಂತಹ ಕುಕೃತ್ಯಗಳನ್ನು ತೀವ್ರವಾಗಿ ಖಂಡಿಸಬೇಕು ಮತ್ತು ಅದರ ವಿರುದ್ದ ಪ್ರತಿಭಟನೆಗಿಳಿಯಬೇಕು. ನಮ್ಮ ದೇಶ ಶಾಂತಿ ಸೌಹಾರ್ಧತೆಗೆ ಹೆಸರಾಗಿರುವಂಥಹದ್ದು . ಆದರೆ ಈಗ ಕೋಮುವಾದಿಗಳೇ ವಿಜೃಂಭಿಸುತ್ತಿದ್ದಾರೆ. ಕೋಮುವಾದಿ ಹಾಗು ವಿಚ್ಛಿದ್ರಕಾರಿ ಶಕ್ತಿಗಳು ಭಾರತದ ಕೋಮು ಸೌಹಾರ್ಧತೆಯನ್ನು ಕದಡುವುದಕ್ಕಾಗಿ, ಶಾಂತಿ ಭಂಗ ಮಾಡಲು ಇಲ್ಲ ಸಲ್ಲದ ನೆಪಗಳನಿಟ್ಟುಕೊಂಡು ಅಮಾಯಕರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುತ್ತಿದ್ದಾರೆ ಇದರ ವಿರುದ್ದ ಎಲ್ಲರೂ ಒಂದಾಗಿ ಹೋರಾಡಬೇಕು ಎಂದು ಕರೆ ನೀಡಿದರು. ಹೋರಾಟಗಾರರಾದ ಬಸವರಾಜ್ ಶೀಲವಂತರ, ಮುಪ್ತಿ ನಜೀರ್ ಅಹ್ಮದ್ , ಮುಖಂಡರಾದ ಕಾಟನ್ ಪಾಷಾ, ಗಿರೀಶ ಕಣವಿ, ಪೀರಾಹುಸೇನ್ ಹೊಸಳ್ಳಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಮ್ಜದ್ ಪಟೇಲ್, ಲಾಯಕ್ ಅಲಿ, ಕೆ.ಎಂ.ಸಯ್ಯದ್ ಸೇರಿದಂತೆ ಇತರರು ಉಪಸ್ತಿತರಿದ್ದರು. ಮುಸ್ಲಿಂ ಮತ್ತು ದಲಿತ ಸಮುದಾಯದ ನೂರಾರು ಮುಖಂಡರು ಕಾರ್‍ಯಕರ್ತರು ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಜ್ಜಿಗೆಯವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಅರ್ಪಿಸಲಾಯಿತು. ಸಲಿಂ ಮಂಡಲಗೇರಿ ಕಾರ್‍ಯಕ್ರಮ ನಿರೂಪಿಸಿದರೆ ಮಾನ್ವಿ ಪಾಷಾ ವಂದನಾರ್ಪಣೆ ಮಾಡಿದರು.

Please follow and like us:
error