Breaking News
Home / Crime_news_karnataka / ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆ
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆ

ಬೆಂಗಳೂರು, ಅ.14: ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಇಬ್ಬರು ಆರೋಪಿಗಳ ರೇಖಾಚಿತ್ರವನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ.)ಬಿಡುಗಡೆಗೊಳಿಸಿದೆ.

ನಗರದ ಪ್ಯಾಲೇಸ್ ರಸ್ತೆಯಲ್ಲಿರುವ ಸಿಐಡಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಎಸ್.ಐ.ಟಿ. ಮುಖ್ಯಸ್ಥ ಬಿ.ಕೆ.ಸಿಂಗ್, ತನಿಖಾಧಿಕಾರಿ ಎಂ.ಎನ್.ಅಮನುಚೇತ್ ಅವರು ಗೌರಿ ಹಂತಕರ ಶಂಕಿತರ ರೇಖಾಚಿತ್ರವನ್ನು ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆಗೊಳಿಸಿದರು.

ತನಿಖಾ ತಂಡವು ಇಲ್ಲಿಯವರೆಗಿನ ತನಿಖೆಯಲ್ಲಿ ಲಭಿಸಿರುವ ಮಾಹಿತಿಯ ಆಧಾರದಲ್ಲಿ ಈ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದೆ. ರೇಖಾಚಿತ್ರದಲ್ಲಿರುವವರ ಬಗ್ಗೆ ಹಾಗೂ ಈ ಸಂಬಂಧದ ಸಿಸಿಟಿವಿ ದೃಶ್ಯಾವಳಿಯಲ್ಲಿರುವವರ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಮೊ.ಸಂ. 9480800202, ಇಮೇಲ್: sit.glankesh@ksp.gov.in, ವಾಟ್ಸಾಪ್ ಸಂ.: 9480800304, 9480801701 ಅನ್ನು ಸಂಪರ್ಕಿಸಬಹುದು. ಮಾಹಿತಿ ನೀಡುವವರ ವಿವರವನ್ನು ಗುಪ್ತವಾಗಿ ಇಡಲಾಗುವುದು ಎಂದು ಎಸ್.ಐ.ಟಿ. ಮುಖ್ಯಸ್ಥ ಬಿ.ಕೆ.ಸಿಂಗ್ ತಿಳಿಸಿದರು.

*ವಿಚಾರವಾದಿಗಳ ಹತ್ಯೆಗಳಿಗೆ ಸಾಮತ್ಯೆ
ರೇಖಾಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ತನಿಖಾಧಿಕಾರಿಗಳು, ಗೌರಿ ಲಂಕೇಶ್ ಅವರ ಹತ್ಯೆಯು ಇದಕ್ಕೂ ಮೊದಲು ನಡೆದಿರುವ ವಿಚಾರವಾದಿಗಳಾದ ಡಾ.ಎಂ.ಎಂ.ಕಲ್ಬುರ್ಗಿ, ಪನ್ಸಾರೆ ಹಾಗೂ ದಾಭೋಲ್ಕರ್‌ರ ಹತ್ಯೆಗೂ ಸಾಮ್ಯತೆ ಇದೆ. ಇದು ವೃತ್ತಿ ವೈಷಮ್ಯದಿಂದ ನಡೆದಿರುವ ಹತ್ಯೆಯಲ್ಲ. ಇದು ವಿಚಾರಗಳಿಗೆ ಸಂಬಂಧಿಸಿ ಆಗಿರುವ ಪೂರ್ವನಿರ್ಧರಿತ ಕೊಲೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಹಂತಕರು 7 ದಿನಗಳ ಮುಂಚಿತವಾಗಿಯೇ ನಗರದಲ್ಲಿ ವಾಸ್ತವ್ಯ ಹೂಡಿ ಸಮಯ ಸಂದರ್ಭ ನೋಡಿ ಗೌರಿಯವರನ್ನು ಹತ್ಯೆ ಮಾಡಲಾಗಿದೆ. ಹಂತಕರು ಬೈಕಿನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಇದಕ್ಕಾಗಿ ದೇಶಿ ಗನ್ ಬಳಸಿದ್ದಾರೆ ಎಂದು ತನಿಖಾಧಿಕಾರಿಗಳು ವಿವರಿಸಿದರು.

ಈ ಹತ್ಯೆ ಸಂಬಂಧ ಹಲವು ಸಂಘಸಂಸ್ಥೆಗಳನ್ನು ವಿಚಾರಣೆಗೊಳಪಡಿಸಿದ್ದೇವೆ. ನಕ್ಸಲರ ಬಗ್ಗೆ ವಿಚಾರಣೆ ನಡೆದಿದೆ. ಇಲ್ಲಿಯವರೆಗೆ ಸುಮಾರು 250 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಎಸ್.ಐ.ಟಿ. ಮುಖ್ಯಸ್ಥ ಬಿ.ಕೆ.ಸಿಂಗ್ ತಿಳಿಸಿದರು.

About admin

Comments are closed.

Scroll To Top