ಗೋರಕ್ಷಕರಿಂದ ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿಯಿಂದ ಹಣಕ್ಕಾಗಿ ಪೀಡಿಸುತ್ತಿರುವ ಆಸ್ಪತ್ರೆ ಸಿಬ್ಬಂದಿ

ಭೋಪಾಲ್, ಮೇ 23: ಕಸಾಯಿಖಾನೆ ನಡೆಸುತ್ತಿದ್ದಾರೆ ಎಂಬ ಶಂಕೆಯಿಂದ ಗೋರಕ್ಷಕರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರಿಗೆ ಹಣ ನೀಡುವಂತೆ ಆಸ್ಪತ್ರೆ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ಗಾಯಾಳುವಿನ ಪತ್ನಿ ಆಪಾದಿಸಿದ್ದಾರೆ.

ಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಬಲವಂತವಾಗಿ ಆಸ್ಪತ್ರೆಯಿಂದ ಹೊರಗೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸನ್ನಾವೊ ಆಪಾದಿಸಿದ್ದಾರೆ. ಈಕೆಯ ಪತಿ ಮುಹಮ್ಮದ್ ಶಕೀಲ್(38) ಎಂಬಾತನ ಮೇಲೆ ಮಧ್ಯ ಪ್ರದೇಶದ ಮೈಹಾರ್ ಪಟ್ಟಣದಲ್ಲಿ ಹಲ್ಲೆ ನಡೆದಿತ್ತು. ಇದರಿಂದ ಗಂಭೀರ ಗಾಯಗೊಂಡಿರುವ ಶಕೀಲ್ ಶುಕ್ರವಾರದಿಂದ ಜಬಲ್ಪುರದ ಮೆಟ್ರೊ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಕೀಲ್ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಾತ್ನಾ ಜಿಲ್ಲಾಸ್ಪತ್ರೆಯಿಂದ ಜಬಲ್ಪುರದ ಮೆಟ್ರೊ ಆಸ್ಪತ್ರೆಗೆ ಕರೆತರಲಾಗಿತ್ತು.

ಶುಕ್ರವಾರ ಮುಂಜಾನೆ ಶಕೀಲ್ ಹಾಗೂ ನೆರೆಮನೆಯ ರಿಯಾಝ್ ಮೇಲೆ ಗೋರಕ್ಷಕರ ಗುಂಪು ಹಲ್ಲೆ ಮಾಡಿತ್ತು. ರಿಯಾಝ್ ಜಿಲ್ಲಾಸ್ಪತ್ರೆಯಲ್ಲಿ ಕೆಲವೇ ಗಂಟೆಗಳಲ್ಲಿ ಮೃತಪಟ್ಟರೆ, ಶಕೀಲ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ರಿಯಾಝ್ ಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. ಶಕೀಲ್ ಟ್ಯಾಕ್ಸಿ ಚಾಲಕ. ಮರದ ದೊಣ್ಣೆಗಳಿಂದ ರಿಯಾಝ್ ಹಾಗೂ ತನ್ನ ಮೇಲೆ ಗೋರಕ್ಷಕರ ಗುಂಪು ಹಲ್ಲೆ ನಡೆಸಿದ್ದಾಗಿ ಶಕೀಲ್ ದೂರು ನೀಡಿದ್ದಾರೆ.

ಶಕೀಲ್ ಚಿಕಿತ್ಸೆಗೆ ಹಣ ಪಾವತಿಸುವ ಸ್ಥಿತಿಯಲ್ಲಿ ಸನ್ನೊ ಈಗ ಇಲ್ಲ. ಇದರಿಂದ ಆಸ್ಪತ್ರೆ ಸಿಬ್ಬಂದಿ, ಡಿಸ್ಚಾರ್ಜ್ ಫಾರ್ಮ್‌ಗೆ ಸಹಿ ಮಾಡುವಂತೆ ಮಹಿಳೆ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಶಕೀಲ್‌ನ ಚಿಕಿತ್ಸೆ ಮುಂದುವರಿಸಬೇಕಾದರೆ, ತಕ್ಷಣ 25 ಸಾವಿರ ರೂ. ಪಾವತಿಸುವಂತೆ ಸೂಚಿಸಿದ್ದಾಗಿ ಮಹಿಳೆ ಆಪಾದಿಸಿದ್ದಾರೆ.

ಆದರೆ ಆಸ್ಪತ್ರೆ ಈ ಆರೋಪವನ್ನು ನಿರಾಕರಿಸಿದೆ. ಹಣ ಪಾವತಿಸುವಂತೆ ರೋಗಿಯ ಪತ್ನಿ ಮೇಲೆ ಒತ್ತಡ ತಂದಿಲ್ಲ. ನಮ್ಮದು ಖಾಸಗಿ ಆಸ್ಪತ್ರೆಯಾಗಿದ್ದರಿಂದ ಚಿಕಿತ್ಸಾ ವೆಚ್ಚವನ್ನು ಭರಿಸುವಂತೆ ಸೂಚಿಸಲಾಗಿದೆ ಎಂದು ಆಸ್ಪತ್ರೆ ವೈದ್ಯ ಸುನೀಲ್ ಅಸ್ತಿ ಹೇಳಿದ್ದಾರೆ.

Please follow and like us:
error