ಕಾಲೇಜು ನಿರ್ದೇಶಕರನ್ನು ಇರಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಉದಯಪುರ(ರಾಜಸ್ಥಾನ),ಸೆ.13: ಇಲ್ಲಿಯ ಇಂಜಿನಿಯರಿಂಗ್ ಕಾಲೇಜೊಂದರ ನಿರ್ದೇಶಕರನ್ನು ಚೂರಿಯಿಂದ ಇರಿದ ಅದೇ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿ ಭವಿಕ್ ಜೈನ್(22) ಎಂಬಾತ ಬಳಿಕ ಪಿಚೋಲಾ ಸರೋವರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗಾಯಗೊಂಡಿರುವ ಕಾಲೇಜು ನಿರ್ದೇಶಕ ರಾಜೇಂದ್ರ ಶೇಖರ ವ್ಯಾಸ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ನಡೆದ ಇಡೀ ಘಟನೆ ಕಾಲೇಜು ಕ್ಯಾಂಪಸ್‌ಲ್ಲಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದರು.

ಮೃತ ಜೈನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಇದೇ ವೇಳೆ ಜೈನ್ ಕುಟುಂಬದ ದೂರಿನ ಮೇರೆಗೆ ವ್ಯಾಸ ವಿರುದ್ಧ ಮಾನಸಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವೂ ದಾಖಲಾಗಿದೆ.

ಜೈನ್ ಕೆಲವು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದು, ಖಿನ್ನತೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.