ಉತ್ತರ ಪ್ರದೇಶದಲ್ಲಿ ಮತ್ತೊಂದು ಅಂಬೇಡ್ಕರ್ ಪ್ರತಿಮೆ ಧ್ವಂಸ

ನೊಯ್ಡ, ಎ.14: ಉತ್ತರ ಪ್ರದೇಶದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸ ಮಾಡುವ ಘಟನೆಗಳು ಕೊನೆಯಾಗುವಂತೆ ಕಾಣುತ್ತಿಲ್ಲ. ಇಲ್ಲಿನ ಗ್ರೇಟರ್ ನೊಯ್ಡಾದ ಬಿಸ್ರಕ್‌ನ ರಿಚ್ಪಲ್ ಗಡಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿಯ ಮತ್ತೊಂದು ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.

ಗುರುವಾರ ಮುಂಜಾನೆ ಸ್ಥಳೀಯರು ಪ್ರತಿಮೆಗೆ ಹಾನಿಯಾಗಿರುವುದನ್ನು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಅಪರಿಚಿತ ವ್ಯಕ್ತಿಗಳ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸುನೀತಿ ಸಿಂಗ್ ತಿಳಿಸಿದ್ದಾರೆ. ಘಟನೆಯ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲ ಪ್ರದೇಶದಿಂದ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಸ್ಥಳದಲ್ಲಿ ಜಮಾಯಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಮನಗಂಡ ಪೊಲೀಸರು ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಹಾನಿಗೀಡಾದ ಪ್ರತಿಮೆಯ ಸ್ಥಾನದಲ್ಲಿ ಹೊಸ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಶಾದ್ಯಂತ ಡಾ. ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಉತ್ತರ ಪ್ರದೇಶದಲ್ಲಿ ಇಂಥ ಘಟನೆಗಳು ಹೆಚ್ಚಾಗಿ ಸುದ್ದಿಯಾಗುತ್ತಿದ್ದು ರಾಜ್ಯಾದ್ಯಂತ ಪೊಲೀಸರು ಅಂಬೇಡ್ಕರ್ ಪ್ರತಿಮೆಗಳಿಗೆ ಭದ್ರತೆ ಒದಗಿಸುತ್ತಿದ್ದಾರೆ.

Please follow and like us:
error