‘ಅವರ ತಲೆ, ಕಣ್ಣಿಗೆ ಗುಂಡಿಕ್ಕಿದೆ’: ದಾಭೋಲ್ಕರ್ ಹತ್ಯೆ ಆರೋಪಿಯ ತಪ್ಪೊಪ್ಪಿಗೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು

ಹೊಸದಿಲ್ಲಿ, ಜೂ.27: ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಆರು ವರ್ಷಗಳ ಹಿಂದೆ ಪುಣೆಯಲ್ಲಿ ಹತ್ಯೆಗೈದ ಆರೋಪದ ಮೇಲೆ ಬಂಧಿತನಾಗಿರುವ ಶರದ್ ಕಲಸ್ಕರ್ ತಾನು 67 ವರ್ಷದ ದಾಭೋಲ್ಕರ್ ಅವರ ತಲೆಗೆ ಒಮ್ಮೆ ಹಿಂದಿನಿಂದ ಹಾಗೂ ಅವರು ನೆಲಕ್ಕೆ ಕುಸಿದಾಗ ಅವರ ಬಲಗಣ್ಣಿನ ಮೇಲೆ ಗುಂಡಿಕ್ಕಿದ್ದಾಗಿ ವಿಚಾರಣಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ndtv.com ವರದಿ ಮಾಡಿದೆ.

ಒಟ್ಟು 14 ಪುಟಗಳ ಆತನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಾನು ವಿಚಾರವಾದಿ ಗೋವಿಂದ ಪನ್ಸಾರೆ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳಲ್ಲೂ ಶಾಮೀಲಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಕಳೆದ ವರ್ಷ ಬಂಧಿತನಾದ ಶರದ್ ಕಲಸ್ಕರ್ ವಿರುದ್ಧ ಕೊಲೆ ಹಾಗೂ ಕೊಲೆ ಸಂಚಿನ ಆರೋಪವಿದೆ. ಪುಣೆಯಲ್ಲಿ ಆಗಸ್ಟ್ 2013ರಲ್ಲಿ ದಾಭೋಲ್ಕರ್ ಹತ್ಯೆ ನಡೆದರೆ ಫೆಬ್ರವರಿ 2015ರಲ್ಲಿ ಗೋವಿಂದ್ ಪನ್ಸಾರೆ ಹಾಗೂ  ಅದೇ ವರ್ಷದ ಆಗಸ್ಟ್ ತಿಂಗಳಲ್ಲಿ ವಿದ್ವಾಂಸ ಎಂ ಎಂ ಕಲಬುರ್ಗಿಯವರ ಹತ್ಯೆ ನಡೆದಿತ್ತು.

ತನ್ನನ್ನು ಹಲವಾರು ಬಲಪಂಥೀಯ ಸಂಘಟನೆಗಳ ಸದಸ್ಯರು ಸಂಪರ್ಕಿಸಿದ್ದರು, ಅವರ ಸಿದ್ಧಾಂತದ ಬಗ್ಗೆ ಮಾಹಿತಿ, ಬಂದೂಕು ಬಳಕೆ ಹಾಗೂ ಬಾಂಬ್ ತಯಾರಿ ತರಬೇತಿಯನ್ನೂ ನೀಡಲಾಗಿತ್ತು ಎಂದು ಕಲಸ್ಕರ್ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾನೆಂಬ ಮಾಹಿತಿಯಿದೆ.

ಕೊಲೆ ಮಾಡಬೇಕಾಗಿದೆ ಎಂದು ತನಗೆ ಹೇಳಲಾಗಿತ್ತು ಎಂದು ಆತ ತಿಳಿಸಿದ್ದಾನೆ. “ನಾವು ಕೆಲವೊಂದು ಕೆಟ್ಟ ಜನರನ್ನು ಮುಗಿಸಬೇಕಾಗಿದೆ” ಎಂದು ತನಗೆ  ವೀರೇಂದ್ರ ತಾವ್ಡೆ ಹೇಳಿದ್ದನೆಂದು ಕಲಸ್ಕರ್ ಬಾಯ್ಬಿಟ್ಟಿದ್ದಾನೆ. ತಾವ್ಡೆ ಪ್ರಮುಖ  ಸಂಚುಕೋರನೆಂದು ಗುರುತಿಸಲಾಗಿದ್ದು, ಆತ ಈ ಕೊಲೆಗಳನ್ನು ನಡೆಸುವ ಸಲುವಾಗಿ ಹಲವರ ಮನಃಪರಿವರ್ತನೆ ನಡೆಸಿದ್ದನೆಂಬ ಆರೋಪವಿದೆ.

ಆತನನ್ನು ಕೂಡ ಸಿಬಿಐ ಈಗಾಗಲೇ ಬಂಧಿಸಿದೆ. ಕಲಸ್ಕರ್ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಪ್ರಕಾರ ತಾವ್ಡೆ ಆತನಿಗೆ ಅಮೋಲ್ ಕಾಳೆಯ ಪರಿಚಯ ಮಾಡಿಸಿದ್ದ. ಕಾಳೆಯನ್ನು ಪೊಲೀಸರು ಗೌರಿ ಲಂಕೇಶ್ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಗೌರಿ ಹತ್ಯೆ ಸಂಚು ಹೂಡಲು ಸಂಘಟಿಸಲಾದ ಹಲವು ಸಭೆಗಳಲ್ಲಿ ತಾನು ಭಾಗವಹಿಸಿದ್ದಾಗಿಯೂ ಕಲಸ್ಕರ್ ಹೇಳಿದ್ದಾನೆ. “ಆಗಸ್ಟ್ 2016ರಲ್ಲಿ ಬೆಳಗಾವಿಯಲ್ಲಿ ಸಭೆಯೊಂದು ನಡೆದಿತ್ತು ಹಾಗೂ ಇಲ್ಲಿ ಹಿಂದು ಧರ್ಮದ ವಿರುದ್ಧ ಕೆಲಸ ಮಾಡುವ ಜನರ ಹೆಸರುಗಳನ್ನು ಕೇಳಲಾಯಿತು. ಆ ಸಭೆಯಲ್ಲಿ ಗೌರಿ ಲಂಕೇಶ್ ಆವರ ಹೆಸರು ಕೇಳಿ ಬಂದು ಅವರ ಹತ್ಯೆಗೈಯ್ಯುವ ನಿರ್ಧಾರ ಕೈಗೊಳ್ಳಲಾಯಿತು,” ಎಂದು ಆತ ತನಿಖಾಧಿಕಾರಿಗಳಿಗೆ ಹೇಳಿದ್ದಾನೆನ್ನಲಾಗಿದೆ. ಮುಂದೆ ಆಗಸ್ಟ್ 2017ರಲ್ಲಿ ಭರತ್ ಕುರ್ನೆ ನಿವಾಸವಿರುವ ಶಾಸ್ತ್ರಿನಗರದಲ್ಲಿ ಸಭೆ ನಡೆದು  ಅಂತಿಮ ನಿರ್ಧಾರ ಕೈಗೊಂಡು ಈ ಕಾರ್ಯದ ಜವಾಬ್ದಾರಿಯನ್ನು ಕೆಲವರಿಗೆ ವಹಿಸಲಾಗಿತ್ತೆಂಬ ಮಾಹಿತಿಯಿದೆ.

Please follow and like us:
error