ಕೊಪ್ಪಳ, ಕೊಪ್ಪಳ ರೈಲು ನಿಲ್ದಾಣದ ಹತ್ತಿರದ ರಸ್ತೆ ಮೇಲೆ ನಿಂತುಕೊAಡಿದ್ದ ಗಂಗಾವತಿ ನಿವಾಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ವೇಶ್ಯಾವಾಟಿಕೆಗೆ ಬಳಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರ(ಪೋಕ್ಸೋ) ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
2014 ರ ನವೆಂಬರ್ 18 ರಂದು ಸಂಜೆ 06 ಗಂಟೆಗೆ ಕೊಪ್ಪಳ ರೈಲು ನಿಲ್ದಾಣದ ಮುಂದೆ ರಸ್ತೆ ಮೇಲೆ ನಿಂತಿದ್ದ ಅಪ್ರಾಪ್ತ ಬಾಲಕಿಯನ್ನು ಆಂಧ್ರಪ್ರದೇಶದ ಪರವೀನ್ ಗಂ.ಜಯರಾಮ ಎಂಬ ಮಹಿಳೆ ಅಪಹರಿಸಿ, ಆಂಧ್ರಪ್ರದೇಶದ ಪೆನಗೊಂಡ ನಗರದಲ್ಲಿನ ತನ್ನ ಮನೆಗೆ ಕರೆದೊಯ್ದು, ಬಾಲಕಿಯನ್ನು ಕೂಡಿ ಹಾಕಿ ರಾಮು ತಂ. ಬಾಬು ಮತ್ತು ಇತರರಿಂದ ಹಣ ಪಡೆದು ಬಾಲಕಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಕೊಪ್ಪಳ ಪೊಲೀಸ್ ಉಪಾಧೀಕ್ಷಕರು ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಆರೋಪಿತರ ಮೇಲಿನ ಆರೋಪಗಳು ಸಾಬೀತಾಗಿದ್ದು, ಬಾಲಕಿಯನ್ನು ಅಪಹರಿಸಿ, ಬಲವಂತವಾಗಿ ವೇಶ್ಯಾವಾಟಿಕೆಗೆ ಪ್ರಚೋದಿಸಿದ್ದ ಆರೋಪಕ್ಕಾಗಿ ಪರವೀನ್ ಗಂ.ಜಯರಾಮ ಎಂಬ ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 45,000 ದಂಡ ಮತ್ತು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕಾಗಿ ರಾಮು ತಂ. ಬಾಬು ಎಂಬ ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.25,000 ಗಳ ದಂಡವನ್ನು ವಿಧಿಸಿ ಶಂಕರ ಎಂ.ಜಾಲವಾದಿ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು(ಪೋಕ್ಸೋ), ಕೊಪ್ಪಳ ಇವರು ತೀರ್ಪು ಹೊರಡಿಸಿರುತ್ತಾರೆ.
ಸರ್ಕಾರದ ಪರವಾಗಿ ಎಂ.ಎ ಪಾಟೀಲ, ಕೆ. ನಾಗರಾಜ ಆಚಾರ್, ಸವಿತಾ ಎಂ.ಶಿಗ್ಲಿ ಹಾಗೂ ಅಂಬಣ್ಣ ಸರ್ಕಾರಿ ಅಭಿಯೋಜಕರು ಕೊಪ್ಪಳ ಇವರು ಪ್ರಕರಣ ನಡೆಸಿದ್ದು, ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣ ಮನೋಹರ ಇವರು ವಾದ ಮಂಡಿಸಿದ್ದರು ಎಂದು ಸರ್ಕಾರಿ ಅಭಿಯೋಜಕರ ಕಚೇರಿ ಪ್ರಕಟಣೆ ತಿಳಿಸಿದೆ.
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ವೇಶ್ಯಾವಾಟಿಕೆಗೆ ಬಳಸಿದ ಆರೋಪಿತರಿಗೆ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ
Please follow and like us: