ಅತ್ಯಾಚಾರಿಯ ಕಿವಿಯೊಂದಿಗೆ ಎಸ್ಪಿ ಕಚೇರಿಗೆ ಬಂದ ಸಂತ್ರಸ್ತೆ

ದುಷ್ಕರ್ಮಿಗಳ ವಿರುದ್ಧ ಎಫ್ ಐಆರ್ ದಾಖಲಿಸದ ಪೊಲೀಸರು

ಲಕ್ನೋ, ಅ. : ಪ್ರಥಮ ಮಾಹಿತಿ ವರದಿ ದಾಖಲಿಸಲು ವಿಫಲವಾದ ಅತ್ಯಾಚಾರ ಸಂತ್ರಸ್ತೆಯೋರ್ವರು, ಅತ್ಯಾಚಾರ ಎಸಗಿದ ವ್ಯಕ್ತಿಯ ಕಿವಿಯ ತುಂಡಿನೊಂದಿಗೆ ಗುರುವಾರ ಆಲಿಗಢ ಎಸ್ಪಿ ಕಚೇರಿಗೆ ಆಗಮಿಸಿದ್ದರು.

ಈ ಸಂದರ್ಭ ಹಿರಿಯ ಅಧಿಕಾರಿ ಉಪಸ್ಥಿತರಿರಲಿಲ್ಲ. ಮಹಿಳೆ ಕಿವಿಯ ತುಂಡನ್ನು ಪೊಲೀಸ್ ಅಧೀಕ್ಷಕ (ಗ್ರಾಮೀಣ) ಯಶ್ವೀರ್ ಸಿಂಗ್ ಅವರ ಮುಂದಿರಿಸಿದರು ಹಾಗೂ ಎರಡು ದಿನಗಳಾದರೂ ಪೊಲೀಸರು ತನ್ನ ಪ್ರಕರಣದ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು. ಅನಂತರ ಸಿಂಗ್ ಅವರು ಈ ಪ್ರಕರಣದಲ್ಲಿ ಭಾಗಿಯಾದ ಎರಡೂ ಗುಂಪುಗಳ ವಿರುದ್ಧ ಪ್ರಥಮ ಮಾಹಿತಿ ದಾಖಲಿಸಲು ಆದೇಶಿಸಿದರು.

“ಸೋಮವಾರ ರಾತ್ರಿ ನಾನು ಮಕ್ಕಳೊಂದಿಗೆ ಮಲಗಿದ್ದ ಸಂದರ್ಭ ನೆರೆಯ ನಾಲ್ವರು ಮನೆ ಪ್ರವೇಶಿಸಿ ಅತ್ಯಾಚಾರ ಎಸಗಿದ್ದಾರೆ. ಈ ಸಂದರ್ಭ ಪತಿ ಸಮೀಪದ ಗುಡಿಸಲಿನಲ್ಲಿ ಮಲಗಿದ್ದರು. ಕೂಗು ಕೇಳಿ ಅವರು ಓಡಿ ಬಂದರು. ಅದರೆ, ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ಗಲಾಟೆಯಲ್ಲಿ ನಾನು ದುಷ್ಕರ್ಮಿಯ ಕಿವಿ ಕಚ್ಚಿದ್ದೆ. ಅತ್ಯಾಚಾರ ಎಸಗಿದ ನಾಲ್ವರು ನಮಗೆ ಬೆದರಿಕೆ ಒಡ್ಡಿ ತೆರಳಿದ್ದರು” ಎಂದು ಮಹಿಳೆ ಮಾಹಿತಿ ನೀಡಿದ್ದಾರೆ.

“ನಾವು ಪೊಲೀಸರಿಗೆ ಮಾಹಿತಿ ನೀಡಿದೆವು. ಆದರೆ, ಪೊಲೀಸರು ಕೇವಲ ಮಾಹಿತಿ ಮಾತ್ರ ಸಂಗ್ರಹಿಸಿದರು. ಮರು ದಿನ ನಾವು ಪೊಲೀಸ್ ಠಾಣೆಗೆ ಭೇಟಿ ನೀಡಿದೆವು. ಪೊಲೀಸರು ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಿದರು. ಆದರೆ, ಪ್ರಥಮ ಮಾಹಿತಿ ವರದಿ ದಾಖಲಿಸಿಕೊಳ್ಳಲಿಲ್ಲ” ಎಂದು ಮಹಿಳೆ ಆರೋಪಿಸಿದ್ದಾರೆ.

ಈಗ ಗೊಂಡಾ ಪೊಲೀಸರು ಮಹಿಳೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಧಾಟೌಲಿ ಗ್ರಾಮದ ರವಿ ಸೇರಿದಂತೆ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಿವಿಯ ತುಂಡು ರವಿಯದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಆರೋಪಿಗಳ ದೂರಿನ ಆಧಾರದಲ್ಲಿ ಮಹಿಳೆಯ ಪತಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆ ನಡೆಸುವಂತೆ ನಾನು ಗೋಂಡಾ ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ಪೊಲೀಸ್ ಅಧೀಕ್ಷಕ (ಅಲಿಘಡ) ರಾಜೇಶ್ ಪಾಂಡೆ ತಿಳಿಸಿದ್ದಾರೆ

Please follow and like us:
error

Related posts