ಶ್ರೀದೇವಿ ಹೆಸರಿನ ಮಟಕಾ ದಂಧೆಗೆ ಪೊಲೀಸ್ ಅಧಿಕಾರಿಯ ಕುಮ್ಮಕ್ಕು:  ಶಿವರಾಜ್ ತಂಗಡಗಿ ಆರೋಪ

ಹದಿನೈದು ದಿನ ಕಾದು ನೋಡಿದ ಬಳಿಕ ಆಡಿಯೊ ಬಿಡುಗಡೆ: ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಎಸ್ಪಿ

ಕೊಪ್ಪಳ:  ಮಟ್ಕಾ ಆಡಿದರೆ ಪೋಲಿಸರು ಹಿಡಿದು ಕೊಂಡು ಹೋಗ್ತಾರೆ, ಆಡಿಸುವವರನ್ನು ಅರೆಸ್ಟ್ ಮಾಡಿ ಬಹಳ ಕಿರಿಕಿರಿಯಾದರೆ ಗಡಿಪಾರು ಮಾಡ್ತಾರೆ. ಆದರೆ  ಜಿಲ್ಲೆಯಲ್ಲಿ ವಿಶೇಷವಾಗಿ ಕನಕಗಿರಿ ಕ್ಷೇತ್ರದಲ್ಲಿ ನಾನಾ ಹೆಸರಿನಲ್ಲಿ‌ ಮಟಕಾ ಆಡಿದರೆ ಪೊಲೀಸ್ ಅತಿಥಿಯಾಗುವುದು‌ ನಿಶ್ಚಿತ. ಆದರೆ ಶ್ರೀದೇವಿ ಹೆಸರಿನ ಮಟಕಾ ಆಡಿದರೆ ಯಾವ ಪೊಲೀಸರು ಏನೂ ಮಾಡಲ್ಲ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಪೋಲಿಸ್ ವರಿಷ್ಠಾಧಿಕಾರಿಗೆ ದೂರು ನೀಡಿದರು.

ಶ್ರೀದೇವಿ ಹೆಸರಿನಲ್ಲಿ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ಆಡಿಸುತ್ತಿದ್ದಾರೆ. ಇದು ಶೇಕಡಾ ನೂರರಷ್ಟು ಸತ್ಯ. ಮೊದಲ ಹಂತವಾಗಿ ದೂರು ದಾಖಲಿಸುತ್ತಿದ್ದೇವೆ. ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿಯವರು, ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಟಿ.ಶ್ರೀಧರ್ ಅವರಿಗೆ ದೂರು   ಸಲ್ಲಿಸಿದರು.

ಮಟಕಾ ದಂಧೆ, ಮರಳು ಅಕ್ರಮ ನಾನು ಮಂತ್ರಿಯಾದಾಗಲೂ ಕನಕಗಿರಿ ಕ್ಷೇತ್ರದಲ್ಲಿ ಇತ್ತು. ಸಾಧ್ಯವಾದಷ್ಟು ಅಕ್ರಮ ನಿಯಂತ್ರಣಕ್ಕೆ ಶ್ರಮಿಸಿದ್ದೇನೆ. ಪೋಲಿಸರು ಇಂತಹ ಅಕ್ರಮ ದಂದೆಗಳನ್ನು ನಿಯಂತ್ರಣ ಮಾಡುತ್ತಾರೆ. ಆದರೆ  ಈಗ ಕ್ಷೇತ್ರದಲ್ಲೇ  ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ದಂಧೆ ನಡೆಸಲು ಕುಮ್ಮಕ್ಕು ನಡೆಸುತ್ತಿದ್ದಾರೆ ಅವರೇ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸತ್ಯಾಂಶ ಇಲ್ಲದ, ಸಮರ್ಪಕ ಸಾಕ್ಷಿಗಳಲ್ಲದ ಯಾವ ಸಂಗತಿಯ ಬೆನ್ನ ಹಿಂದೆ ಬೀಳಲ್ಲ. ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ತನಿಖೆ ಸರಿಯಾಗಿದ್ದರೆ ತಪ್ಪಿತಸ್ಥರು ಖಂಡಿತವಾಗಿ ಬಲೆಗೆ ಬೀಳ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ತಂಗಡಗಿ, ಒಂದೊಮ್ಮೆ ಈ ಪ್ರಕರಣವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಉದಾಸೀನ ಮಾಡಿದರೆ ಶ್ರೀದೇವಿ ಹೆಸರಿನ ಮಟಕಾ ದಂಧೆಗೆ ಪೊಲೀಸ್ ಅಧಿಕಾರಿ ಕುಮ್ಮಕ್ಕು ನೀಡುತ್ತಿರುವ ಆಡಿಯೊವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು. ಆನಂತರ ಬೀದಿಗಿಳಿದು ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಈ ಬಗ್ಗೆ ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಶ್ರೀದೇವಿ ಹೆಸರಿನ ಮಟ್ಕಾ ದಂದೆ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು. ಅದರಲ್ಲೂ ಪೋಲಿಸರೇ ಭಾಗೀಯಾಗಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿದ್ದವು. ಈಗ ಮಾಜಿ ಸಚಿವರೊಬ್ಬರು ಅಧಿಕೃತವಾಗಿ ದೂರು ನೀಡುವ ಮೂಲಕ ಆ ಪೋಲಿಸರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿರುವುದರಿಂದ  ಅಕ್ರಮದಲ್ಲಿ ಭಾಗಿಯಾಗಿರುವ ಪೋಲಿಸ್ ಅಧಿಕಾರಿ ವಿರುದ್ದ ಕ್ರಮಕೈಗೊಳ್ಳುತ್ತಾ ಪೋಲಿಸ್ ಇಲಾಖೆ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.

ದೂರು ನೀಡುವ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಟಿ.ಶ್ರೀಧರ “ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಸುಮಾರು 21 ಜನರನ್ನು ಗಡಿ ಪಾರು ಮಾಡಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಬಂದಿದ್ದು, ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಎಂದು ಹೇಳಿದರು.

Please follow and like us:
error