ಮುಂಬೈ ಪೊಲೀಸರು ಬಾರ್ಕ್(ರೇಟಿಂಗ್ ಏಜೆನ್ಸಿ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್)ನ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಅವರ ಬಂಧನದ ನಂತರ ಪ್ರಕರಣದಲ್ಲಿ ಹಲವು ಮಹತ್ವದ ಸುಳಿವುಗಳನ್ನು ಪಡೆದಿದ್ದಾರೆ. ಟಿಆರ್ಪಿ ತಿರುಚುವಿಕೆಯು 2016 ರಿಂದಲೇ ನಡೆಯುತ್ತಿದ್ದು, ಒಂದನೇ ಸ್ಥಾನದಲ್ಲಿದ್ದ ಟೈಮ್ಸ್ ನೌ ಚಾನೆಲ್ ಅನ್ನು ಎರಡನೇ ಸ್ಥಾನಕ್ಕೆ ತಳ್ಳಿ ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿಯನ್ನು ಒಂದನೇ ಸ್ಥಾನಕ್ಕೆ ತರಲಾಗಿದೆ ಎಂದು ಮುಂಬೈ ಜಂಟಿ ಪೊಲೀಸ್ ಆಯುಕ್ತ ಮಿಲಿಂದ್ ಭರಂಬೆ ತಿಳಿಸಿದ್ದಾರೆ.
ವಿಧಿವಿಜ್ಞಾನ ವದಿಯ ಪ್ರಕಾರ 2017 ರ ಮಧ್ಯಭಾಗದಿಂದ ಒಂದನೇ ಸ್ಥಾನದಲ್ಲಿರುವ ಟೈಮ್ಸ್ ನೌ ಚಾನೆಲ್ ಅನ್ನು 2 ನೇ ಸ್ಥಾನಕ್ಕೆ, ಹಾಗೂ 2 ನೇ ಸ್ಥಾನದಲ್ಲಿದ್ದ ಸಿಎನ್ಎನ್- ನ್ಯೂಸ್ 18 ಚಾನೆಲ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿ ರಿಪಬ್ಲಿಕ್ ಚಾನೆಲನ್ನು ಒಂದನೇ ಸ್ಥಾನಕ್ಕೆ ತರಲಾಯಿತು. ಕೆಲವು ಸಂದರ್ಭಗಳಲ್ಲಿ ಬಾರ್ಕ್ನ ಕೆಲವು ಉನ್ನತ ಅಧಿಕಾರಿಗಳೇ ನೇರವಾಗಿ ಭಾಗಿಯಾಗಿ ಈ ರೇಟಿಂಗ್ಗಳನ್ನು ಮೊದಲೇ ನಿರ್ಧರಿಸಿದಂತೆ ಕಾಣುತ್ತದೆ ಎಂದು ಪೊಲೀಸ್ ಆಯುಕ್ತ ಮಿಲಿಂದ್ ಹೇಳಿದ್ದಾರೆ.
2016 ಮತ್ತು 2019 ರ ನಡುವೆ ಈ ತಿರುಚುವಿಕೆ ಹೆಚ್ಚಾಗಿ ನಡೆದಿದೆ. ವಿಧಿವಿಜ್ಞಾನ ಲೆಕ್ಕ ಪರಿಶೋಧಕರು ತಮ್ಮ ಲೆಕ್ಕಪರಿಶೋಧನೆಯಲ್ಲಿ 44 ವಾರಗಳ ಮಾಹಿತಿಯನ್ನು ವಿಶ್ಲೇಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ’ಬಾರ್ಕ್’ ಭಾರತದ ಟಿವಿ ಚಾನಲ್ಗಳ ವೀಕ್ಷಕ ಸಂಖ್ಯೆಯನ್ನು ಅಳೆಯುತ್ತದೆ, ಈ ಅಳತೆಯ ಮೇಲೆ ಟಿವಿ ಚಾನೆಲ್ಗಳ ಜಾಹಿರಾತಿನ ದರ ನಿರ್ಧಾರವಾಗುತ್ತದೆ.
ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಗುರುವಾರ ಬಾರ್ಕ್ನ ಮಾಜಿ ಮುಖ್ಯ ನಿರ್ವಹಣಾಧಿಕಾರಿ ಪಾರ್ಥೋ ದಾಸ್ಗುಪ್ತಾ ಅವರನ್ನು ಬಂಧಿಸಿದ್ದರು. ಈ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 15 ಜನರನ್ನು ಬಂಧಿಸಲಾಗಿದೆ. ಈ ಹಿಂದೆ ಬಾರ್ಕ್ನ ಮತ್ತೋರ್ವ ಮಾಜಿ ಮುಖ್ಯಸ್ಥ ರೊಮಿಲ್ ರಾಮ್ಗರ್ಹಿಯಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.