ನಕಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದ ಇಬ್ಬರ ಬಂಧನ; 56 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

ಬೆಂಗಳೂರು, ಮಾ.20: ಕೊರೋನ ವೈರಸ್ ಅನ್ನೇ ಬಂಡವಾಳ ಮಾಡಿಕೊಂಡು ನಕಲಿ ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ರಬ್‌ಗಳನ್ನು ಸಿದ್ಧಪಡಿಸುತ್ತಿದ್ದ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು, 56 ಲಕ್ಷ ರೂ. ಮೌಲ್ಯದ ನಕಲಿ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಗರದ ಜ್ಯೋತಿ ಕೆಮಿಕಲ್ಸ್ ಹಾಗೂ ಕಸ್ತೂರಬಾ ನಗರದ 3ನೆ ಕ್ರಾಸ್‌ನ ಸ್ವಾತಿ ಅಂಡ್ ಕೋ ಗೋಡೌನ್‌ಗಳ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದರು.

ಪ್ರಕರಣ ಸಂಬಂಧ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಕಸ್ತೂರಬಾ ನಗರದ ರಾಜು(43), ಚಾಮರಾಜಪೇಟೆಯ ಎಸ್‌ಎಲ್ ರೆಸಿಡೆನ್ಸಿಯ ಚಂದನ್(64) ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಂಧಿತರು, 50 ಲೀ.ನ ಆಲ್ಕೋಹಾಲ್‌ಗೆ ಒಂದೂವರೆ ಸ್ಪೂನ್‌ನಷ್ಟು ಬ್ರಿಲಿಯಂಟ್ ಬ್ಲೂ ಕಲರ್ ಅನ್ನು ಹಾಗೂ ಒಂದು ಸ್ಪೂನ್‌ನಷ್ಟು ಸುಗಂಧ ದ್ರವ್ಯವನ್ನು ಮಿಶ್ರ ಮಾಡಿ 50 ಲೀ. ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್‌ಗಳನ್ನು ತಯಾರಿಸುತ್ತಿದ್ದರು. ಅದನ್ನು 100, 200 ಹಾಗೂ 500 ಎಂಎಲ್ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ತುಂಬಿಸಿ 170, 325 ಹಾಗೂ 620 ರೂ.ಗಳ ದರದಲ್ಲಿ ಕಂಪೆನಿಯ ಸ್ಟಿಕರ್‌ಗಳನ್ನು ಹಾಕಿ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾರೆ ಎಂದರು.

ಆರೋಪಿಗಳು ಸಿದ್ಧಪಡಿಸಿದ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್‌ಗಳನ್ನು ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಪರಿಶೀಲನೆಯಲ್ಲಿ ಕಂಡು ಬಂದಿದೆ. ಇವುಗಳನ್ನು ಮಾರಾಟ ಮಾಡಿದ ಮೆಡಿಕಲ್ ಸ್ಟೋರ್‌ಗಳು, ಕಿರಾಣಿ ಅಂಗಡಿಗಳ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು. ಕಳೆದ ಒಂದು ವಾರದಿಂದ ಆರೋಪಿಗಳು ಈ ದಂಧೆಯಲ್ಲಿ ತೊಡಗಿದ್ದು, ಗದಗ, ಬಳ್ಳಾರಿ ಇನ್ನಿತರ ನಗರಗಳಿಗೆ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್‌ಗಳನ್ನು ಕಳುಹಿಸಿರುವ ಮಾಹಿತಿ ಇದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದ ಅವರು, ನಕಲಿ ವಸ್ತುಗಳಿಗೆ ವೈಜ್ಞಾನಿಕ ಅಂಶಗಳನ್ನು ಅಳವಡಿಸಿಲ್ಲ ಎಂದು ತಿಳಿಸಿದರು. ಬಂಧಿತ ಆರೋಪಿಗಳ ವಿರುದ್ಧ ವಿವಿಪುರಂ ಹಾಗೂ ಚಾಮರಾಜಪೇಟೆಯಲ್ಲಿ ಕಲಂ 420 ಐಪಿಸಿ ಇನ್ನಿತರ ಕಾಯ್ದೆಗಳನ್ವಯ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಭಾಸ್ಕರ್ ರಾವ್ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಕುಲ್‌ದೀಪ್ ಕುಮಾರ್‌ಜೈನ್, ರವಿಕುಮಾರ್ ಸೇರಿ ಪ್ರಮುಖ ರಿದ್ದರು.

Please follow and like us:
error