ಹಸಿರು ವಿದ್ಯುತ್ ಕಡೆ ಹೆಚ್ಚು ಆದ್ಯತೆಗೆ ಕ್ರಮ : ವಿ.ಸುನೀಲ್ ಕುಮಾರ್

ಪರಿಸರ ಸ್ನೇಹಿ ಹಸಿರು ವಿದ್ಯುತ್ ಕಡೆ ಹೆಚ್ಚು ಆದ್ಯತೆಗೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಇಂಧನ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನೀಲ್ ಕುಮಾರ್ ಅವರು ಹೇಳಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಬೆಂಗಳೂರು ಮತ್ತು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಲಬುರಗಿ ಇವರ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಸುಳೇಕಲ್ ಗ್ರಾಮದ 220/110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಫೆಬ್ರವರಿ 05 ರಂದು ಹಮ್ಮಿಕೊಳ್ಳಲಾಗಿದ್ದ “ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ.ವಿ.ಪ್ರ.ನಿ.ನಿ ಮತ್ತು ಗು.ವಿ.ಸ.ಕಂ.ನಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ” ಕಾರ್ಯಕ್ರಮವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂಧನ ಇಲಾಖೆಯು 2030ಕ್ಕೆ ಬೇಕಾಗಿರುವ ಕಾರ್ಯಕ್ರಮ, ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಲಾಗುತ್ತಿದೆ. ಪರಿಸರ ಸ್ನೇಹಿ ಸೌರಶಕ್ತಿ ಮತ್ತು ಪವನ ಶಕ್ತಿ ಉತ್ಪಾದನಾ ಘಟಕಗಳನ್ನು ಹೆಚ್ಚಿಸಲು ಮುಂದಾಗಿದ್ದೇವೆ. ಇಂಧನ ಇಲಾಖೆಯಲ್ಲಿ ಹೊಸ ರೀತಿಯ ಬದಲಾವಣೆಯಾಗಿದೆ. ಎಲ್ಲರಿಗೂ ಅವಶ್ಯವಿರುವ ಇಲಾಖೆಯನ್ನು ಜನಸ್ನೇಹಿಯನ್ನಾಗಿಸುವ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ನೀಡಿದೆ. ರೈತರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ನೀಡುವುದು ನಮ್ಮ ಸರ್ಕಾರದ ಆಶಯವಾಗಿದೆ. ಎರಡು ವರ್ಷಗಳ ಅವಧಿಯೊಳಗೆ ರಾಜ್ಯದಲ್ಲಿ 250 ಕ್ಕೂ ಅಧಿಕ ಹೊಸ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ ಮತ್ತು ಉನ್ನತೀಕರಣವನ್ನು ವ್ಯಾಪಕವಾಗಿ ಮಾಡಿದ್ದೇವೆ. ಇದರ ಭಾಗವಾಗಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 150 ಕೊಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ಮಾಡಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ “ಹೊಸ ಬೆಳಕು” ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಪ್ರತಿ ಮನೆಗಳಿ ವಿದ್ಯುತ್ ಸೌಲಭ್ಯ ನೀಡುವುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ. ಸುಟ್ಟು ಹೋದ ಟಿಸಿಗಳನ್ಮು ಬದಲಾವಣೆ ಮಾಡಿಸಿಕೊಳ್ಳಲು ರೈತರು ಒಂದು ವಾರದಿಂದ 15 ದಿನಗಳ ಕಾಲ ಕಾಯುವುದಲ್ಲದೇ, ತುಂಬಾ ತೊಂದರೆ ಅನುಭವಿಸಬೇಕಾಗಿತ್ತು. ಈ ನಿಟ್ಟಿನಲ್ಲಿ 24 ಗಂಟೆಯೊಳಗೆ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದ್ದು, ರೈತರ ಬೇಡಿಕೆಗಳನ್ನು ಸಹಕಾರಗೊಳಿಸಿದ್ದೇವೆ ಎಂದು ಹೇಳಿದರು
ನಮ್ಮ ಸರ್ಕಾರವು ಅಮೃತ ಜೋತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ರಾಜ್ಯದಲ್ಲಿ 6 ಸಾವಿರ ಕಿ.ಮೀ ವಿದ್ಯುತ್ ಲೈನ್ ಹಾಕಲಾಗಿದೆ. ಕೃಷಿಕರ ಪಂಪ್ಸೆಟ್ ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದ್ದು, ಇದಕ್ಕಾಗಿ 16 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಮಾಡಲಾಗುತ್ತದೆ ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಕನಕಗಿರಿ ಶಾಸಕರಾದ ಬಸವರಾಜ ದಢೇಸೂಗೂರು ಅವರು ಮಾತನಾಡಿ, ನಮ್ಮ ಭಾಗದಲ್ಲಿ ವಿದ್ಯುತ್ ಸಮಸ್ಯೆ ತುಂಬಾ ಇದ್ದು, ಇಲ್ಲಿನ ಜನರಿಗೆ ಹಾಗೂ ವಿಶೇಷವಾಗಿ ರೈತರು ಸಾಕಷ್ಟು ತೊಂದರೆ ಅನುಭವಿಸಬೇಕಿತ್ತು. ರೈತರು ಸಂಕಷ್ಟಕ್ಕೆ ನಮ್ಮ ಸರ್ಕಾರವು ಸ್ಪಂದಿಸಿ, ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನೂತನ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸುವದಲ್ಲದೇ ಕೆಲವು ವಿದ್ಯುತ್ ಪರಿವರ್ತಕಗಳನ್ನು ಉನ್ನತೀಕರಿಸಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ರೈತರ ಪಂಪ್ಸೆಟ್ ಗಳಿಗೆ 10 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಎಂದು ಸಚಿವರಿಗೆ ಈ ಮೂಲಕ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸುಳೇಕಲ್ ಗ್ರಾ.ಪಂ ಅಧ್ಯಕ್ಷರಾದ ಗುಂಡಮ್ಮ ನಿಂಗಪ್ಪ, ಉಪಾಧ್ಯಕ್ಷರಾದ ಈಶಮ್ಮ ಈಶಪ್ಪ ಹುಲಿಯಾಪುರ, ಕಲಬುರಗಿಯ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ರಾಹುಲ್ ಪಾಂಡ್ವೆ, ಜೆಸ್ಕಾಂ ತಾಂತ್ರಿಕ ನಿರ್ದೇಶಕರಾದ ಆರ್.ಡಿ.ಚಂದ್ರಶೇಖರ, ಕೆಪಿಟಿಸಿಎಲ್ ಪ್ರಸರಣ ವಲಯದ ಮುಖ್ಯ ಎಂಜಿನಿಯರ್ ಸುಭಾಷ್ ಭೋಸ್ಲೆ, ಬಳ್ಳಾರಿಯ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಲಯದ ಮುಖ್ಯ ಎಂಜಿನಿಯರ್ ಲಕ್ಷ್ಮಣ್ ಚವ್ಹಾಣ್, ಕೊಪ್ಪಳದ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಮೊಹಮ್ಮದ್ ಷರೀಫ್ ವೈ., ಮುನಿರಾಬಾದ್ ಕೆಪಿಟಿಸಿಎಲ್ ಪ್ರಸರಣ ವೃತ್ತದ ಅಧೀಕ್ಷಕ ಎಂಜಿನಿಯರ್ ಎಸ್.ಎಚ್.ಬಸವರಾಜ್,
ಇಇಗಳಾದ ರಿಯಾಜ್ ಅಹ್ಮದ್, ರಾಜೇಶ್ ವರ್ಮಾ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬೆಳಕು ಯೋಜನೆಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಸೇವಾ ಪತ್ರ ವಿತರಣೆ ಮಾಡಲಾಯಿತು.
*ವಿದ್ಯುತ್ ಉಪಕೇಂದ್ರಗಳ ಉದ್ಘಾಟನೆ, ಕಾಮಗಾರಿಗಳಿಗೆ ಚಾಲನೆ:* ಕಾರ್ಯಕ್ರಮಕ್ಕೂ ಮುನ್ನ ಗಂಗಾವತಿ ತಾಲ್ಲೂಕಿನ 110/11 ಕೆ.ವಿ ಹಣವಾಳ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ, ಕಾರಟಗಿ ತಾಲ್ಲೂಕಿನ 110/11 ಕೆ.ವಿ ಮುಸ್ಟೂರು ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ, 110/11 ಕೆ.ವಿ ಶ್ರೀರಾಮನಗರ ಉಪಕೇಂದ್ರದ 10 ಎಂ.ವಿ.ಎ ಯಿಂದ 20 ಎಂ.ವಿ.ಎ ಗೆ ಉನ್ನತೀಕರಣಗೊಂಡ ವಿದ್ಯುತ್ ಪರಿವರ್ತಕದ ಉದ್ಘಾಟನೆ, 110/33/11 ಕೆ.ವಿ ಕನಕಗಿರಿ ಉಪಕೇಂದ್ರದ 10 ಎಂ.ವಿ.ಎ ಯಿಂದ 20 ಎಂ.ವಿ.ಎ ಗೆ ಉನ್ನತೀಕರಣಗೊಂಡ ವಿದ್ಯುತ್ ಪರಿವರ್ತಕದ ಉದ್ಘಾಟನೆ ಹಾಗೂ ಕನಕಗಿರಿ ತಾಲ್ಲೂಕಿನ 220/110/11 ಕೆ.ವಿ ಸುಳೆಕಲ್ ವಿದ್ಯುತ್ ಉಪಕೇಂದ್ರದ ಉದ್ಘಾಟನೆಗೆ ಸಚಿವರು ಚಾಲನೆ ನೀಡಿದರು.

Please follow and like us: