ಕೊಪ್ಪಳ: ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗ ಯುವ ಪ್ರತಿಭೆಗಳ ಆಗರ ಎಂದು ಸಾಹಿತಿ ಈಶ್ವರ ಹತ್ತಿ ಬಣ್ಣಿಸಿದರು.
ಅವರು ಸಿವಿಸಿ ಸದನದಲ್ಲಿ ಸಿವಿಸಿ ಫೌಂಡೇಶನ್ ವತಿಯಿಂದ ರವಿವಾರ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ನಗರ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳಿಗೆ ಸಹಜವಾಗಿಯೇ ಅನೇಕ ಅವಕಾಶಗಳು ಹಾಗೂ ಸೌಲಭ್ಯಗಳು ಸಿಗುತ್ತವೆ. ಹೀಗಿದ್ದರೂ ಸಹ ಅವರು ಅನೇಕ ಸಂದರ್ಭಗಳಲ್ಲಿ ಯಶಸ್ಸಿನ ತುದಿ ತಲುಪಲು ಸಾಧ್ಯವಾಗುವುದಿಲ್ಲ. ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶ ಪ್ರತಿಭೆಗಳ ಆಗರವೇ ಆಗಿದೆ. ಯಾವ ಸೌಲಭ್ಯವೂ ಇಲ್ಲದೆ ಅನೇಕ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ ಉದಾಹರಣೆಗಳಿವೆ. ಇಂತಹ ಪ್ರತಿಭಾವಂತರಿಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ಸಿಕ್ಕರೆ ನಮ್ಮ ಗ್ರಾಮೀಣ ಭಾಗದ ಚಹರೆಯೇ ಬದಲಾಗಲಿದೆ,” ಎಂದರು.
‘ಸಿವಿಸಿ ಫೌಂಡೇಶನ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಸ್ತುತ್ಯಾರ್ಹ. ಅದರಲ್ಲೂ ಶಿಕ್ಷಣ ಕ್ಷೇತ್ರ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ಹಾಗೂ ವೇದಿಕೆ ಒದಗಿಸುತ್ತಿರುವುದು ಶ್ಲಾಘನೀಯ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಉನ್ನತ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಮಯೋಚಿತ,” ಎಂದರು.
ಎಸ್ ಜಿ ಕಾಲೇಜಿನ ಪ್ರಾಧ್ಯಾಪಕರಾದ ಶರಣಬಸಪ್ಪ ಬೀಳೆಯಲಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಆದರೇ ಪುರಸ್ಕಾರಕ್ಕೆ ಕೊರತೆಯಿದೆ. ಪ್ರತಿಭೆ ಹಾಗೂ ಪುರಸ್ಕಾರ ಸಮ್ಮಿಳಿತಗೊಂಡರೆ ಯಶಸ್ಸು ಶತ:ಸಿದ್ಧ ಎಂದರು.
“ಗ್ರಾಮೀಣ ಭಾಗದಲ್ಲಿ ಬಡತನ ಪ್ರತಿಭೆಯನ್ನು ಕೊಂದಿದೆ. ಪ್ರತಿಭೆಯನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಸಿವಿಸಿ ಫೌಂಡೇಶನ್ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ,” ಎಂದು ಹೇಳಿದರು.
ಸಿವಿಸಿ ಫೌಂಡೇಶನ್ ಮುಖ್ಯಸ್ಥರಾದ ಬಸವರಾಜ ಚಂದ್ರಶೇಖರ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸಿವಿಸಿ ಫೌಂಡೇಶನ್ ಅನೇಕ ಸೇವೆ ಮಾಡುವ ಕನಸು ಹೊತ್ತಿದೆ. ಪ್ರಥಮ ಬಾರಿಗೆ ವಿದ್ಯಾರ್ಥಿ ವೇತನ ಕೊಡಲಾಗುತ್ತಿದೆ. ಫೌಂಡೇಶನ್ ಮಾರ್ಗದರ್ಶಕರು ಸುಮಾರು 200ಕ್ಕೂ ಹೆಚ್ಚು ಸಂಖ್ಯೆಯ ಅರ್ಜಿಗಳನ್ನು ಪರಿಶೀಲಿಸಿ ಕೆಲವೊಂದು ಮಾನದಂಡಗಳನ್ನು ಅನುಸರಿಸಿ ವಿವಿಧ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ವಿದ್ಯಾರ್ಥಿ ವೇತನ ಹಾಗೂ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತಿಭಾ ಪುರಸ್ಕಾರ ನೀಡಲು ಸಲಹೆ ನೀಡಿದರು. ಆ ಸಲಹೆಯಂತೆ ಮೊದಲ ಹಂತದಲ್ಲಿ ಕೊಪ್ಪಳ ನಗರ ಹಾಗೂ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದರು.
ಸಮಾಜ ಸೇವಕರಾದ ಸಿ ವಿ ಚಂದ್ರಶೇಖರ ಅವರು ಮಾತನಾಡಿ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು.
“ಶಿಕ್ಷಣ ಹಾಗೂ ಸಂಸ್ಕಾರ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿಷಯ ಸಂಗ್ರಹಕ್ಕಿಂತ ಜ್ಞಾನ ಮುಖ್ಯ. ಜ್ಞಾನಕ್ಕಿಂತ ಪ್ರಬುದ್ಧತೆ ಮುಖ್ಯ. ವಿದ್ಯಾರ್ಥಿಗಳು ಪ್ರಬುದ್ಧರಾಗಿ ಮುನ್ನಡೆದಾಗ ಉತ್ತಮ ಸಮಾಜ ತಾನಾಗಿಯೇ ರೂಪಗೊಳ್ಳುತ್ತದೆ,” ಎಂದರು.
ಶಿಕ್ಷಕ-ಸಾಹಿತಿಗಳಾದ ಮಹೇಶ್ ಬಳ್ಳಾರಿ, ಪತ್ರಕರ್ತರಾದ ರಮೇಶ್ ಸುರ್ವೆ ಹಾಗೂ ಸಾವಿತ್ರಿ ಮಜುಮದಾರ ಮಾತನಾಡಿದರು.
ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಗಾಯತ್ರಿ ಬಿ, ದ್ವಿತೀಯ ಪಿಯೂಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅಶ್ವಿನಿ, ಪದವಿಯಲ್ಲಿ ಹೆಚ್ಚು ಅಂಕ ಪಡೆದ ವೈಷ್ಣವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಹನುಮೇಶ್ ಅವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ ಎಸ್ ಸಿ ಹಿರೇಮಠ, ನಿವೃತ್ತ ಶಿಕ್ಷಕರಾದ ಪ್ರಭಣ್ಣ ಡೊಳ್ಳಿನ್, ಎಮ್ ಎಮ್ ಮುಜಗೊಂಡ, ದಾಕ್ಷಾಯಣಿ ಹಾಗೂ ಕಳೆದ ವರ್ಷ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಹೆಚ್‍ಡಿ ಪದವಿ ಪಡೆದ ಶಿಲ್ಪಾ ವೆಂಕಟೇಶ ಚನ್ನದಾಸರ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಚೇತನಾ ನಂದಗೌಡ ಪ್ರಾರ್ಥನಾ ಗೀತೆಯನ್ನು ಹಾಡಿದರು. ಸಿವಿಸಿ ಫೌಂಡೇಶನ್ ಸಂಚಾಲಕರಾದ ಮೌನೇಶ ಕಿನ್ನಾಳ ಅವರು ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಡೆಸಿಕೊಟ್ಟರು.
Please follow and like us: