ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ವಿವಿಧ ಸಂಘಟನೆಗಳಿಂದ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ

ಕೊಪ್ಪಳ :

ಇದೇ ಫೆ.14 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾದಿಗ, ಛಲವಾದಿ, ತ್ರಿಮತಸ್ಥ,ಚರ್ಮಕಾರ, ಅಲೆಮಾರಿ ಸೇರಿದಂತೆ 101 ಶೋಷಿತ ಸಮುದಾಯಗಳಿಗೆ ವರ್ಗೀಕರಣ ಮೀಸಲಾತಿಗೆ ಅನುಗುಣವಾಗಿ, ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕೆಂದು ಒತ್ತಾಯಿಸಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಹಿರಿಯ ಸಂಘಟಕ ಕರಿಯಪ್ಪ ಕುಡ್ತಿನಿ ಹೇಳಿದರು.

ಕೊಪ್ಪಳ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಸುಮಾರು ಎರಡು ದಶಕವಾಯಿತು ಈ ಆಯೋಗವನ್ನು ರಚಿಸಿ, ಆಯೋಗದ ವರದಿಯಲ್ಲಿರುವ ಅಂಶಗಳನ್ನು ರಾಜ್ಯದಲ್ಲಿ ಒಪ್ಪಿಯಾಗಿದೆ. ಕೇಂದ್ರ ಸರ್ಕಾರದ ಅನುಷ್ಟಾನಕ್ಕೆ ರಾಜ್ಯ ಶಿಪಾರಸ್ಸು ಮಾಡಲು ಮೀನಾಮೇಷ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಹಿಂದುಳಿದ ವರ್ಗಗಳ ಕಾಂತರಾಜ ವರದಿಯನ್ನು ಸಹ ಯತಾವತ್ತಾಗಿ ಜಾರಿಗೊಳಿಸಬೇಕು. ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳಿಗೆ ರಾಜಕೀಯವಾಗಿ ಶೇಕಡ 15ರಷ್ಟು ಪ್ರಾತಿನಿಧ್ಯ ನೀಡಬೇಕು. ಇದರೆಲ್ಲದರ ಭಾಗವಾಗಿ ಈ ಹಿಂದೆ ಈ ಕುರಿತು ಹೋರಾಟಗಾರರ ಮೇಲೆ ಪೊಲೀಸರ ಮುಖಾಂತರ ಲಾಟಿ ಪ್ರವಾರ, ರೌಡಿಶೀಟರ್ ಪ್ರಕರಣಗಳನ್ನು ಹಾಕಿಸುವ ಮುಖಾಂತರ ಹೋರಾಟಗರರನ್ನು ಸದೆಬಡೆಯಲು ಯತ್ನಿಸುತ್ತಿರುವದು ಸರಿಯಾದ ಕ್ರಮವಲ್ಲ. ಕೂಡಲೇ ಈ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಈ ಸಮಾವೇಶದಿಂದ ಬಿಜೆಪಿ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡುತ್ತಿದೆ ಎಂದು ಹೇಳಿದರು. ನೌಕರರು, ಯುವಕರು, ಬುದ್ಧಿಜೀವಿಗಳು, ಪ್ರಗತಿಪರ ಸಂಘಟನೆಗಳು, ಪೌರ ಕಾರ್ಮಿಕರು, ಹಿಂದುಳಿದ ವರ್ಗಗಳು ಸೇರಿದಂತೆ ಇತರೆ ಸಂಘಟನೆಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಮೈಲಾರಪ್ಪ, ಮಲ್ಲಿಕಾರ್ಜುನ ಪೂಜಾರ, ಡೆವಿಡ್, ಎಲ್.ವಿ ಸುರೇಶ, ಮರಿಯಪ್ಪ ಗಾದಿಗನೂರ, ಮೌಲಪ್ಪ ಐಹೊಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us: