ರೆಡ್ ಕ್ರಾಸ್ ಸೇವೆ ಶ್ಲಾಘನೀಯ ಃ ಸಂಗಣ್ಣ ಕರಡಿ

ಕೊಪ್ಪಳ  :ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಉತ್ತಮ ಸೇವೆ ಮಾಡುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಶ್ಲಾಘಿಸಿದ್ದಾರೆ.
ಕೊಪ್ಪಳ ನಗರದ ಗವಿಮಠ ಆವರಣದಲ್ಲಿ ಗುರುವಾರ ನೂತನ ರಕ್ತ ಸಂಗ್ರಹ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯಾವುದೇ ಪಲಾಪೇಕ್ಷ ಇಲ್ಲದೆ ಸೇವೆ ಮಾಡುತ್ತಿರುವ ರೆಡ್ ಕ್ರಾಸ್ ತಂಡದಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆ ಉತ್ತಮಗೊಳ್ಳಲು ಪರೋಕ್ಷವಾಗಿ ಕಾರಣವಾಗಿದೆ .
ರಕ್ತದ ಸಮಸ್ಯೆ ಇದ್ದಾಗ ೨೦೧೩-೧೪ ರಲ್ಲಿ ಪ್ರಾರಂಭವಾಗಿರುವ ರೆಡ್ ಕ್ರಾಸ್ ನ ಬ್ಲಡ್ ಬ್ಯಾಂಕ್ ಇದುವರೆಗೂ ಬಹುದೊಡ್ಡ ಕೊಡುಗೆಯನ್ನು ನಿಗಿಸಿದೆ. ವೈದ್ಯಕೀಯ ಕ್ಷೇತ್ರದ ತುರ್ತು ಸಂದರ್ಭದಲ್ಲಿ ಸ್ಥಳೀಯವಾಗಿಯೇ ರಕ್ತ ದೊರೆಯುವಂತೆ ಆಗಿರುವುದರಿಂದ ಜೀವ ಉಳಿಯಲು ಕಾರಣವಾಗಿದೆ ಎಂದರು.
ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ ರಕ್ತ ಸಂಗ್ರಹ ಸಂಚಾರಿ ವಾಹನಕ್ಕೆ ಚಾಲನೆ ನೀಡಿರುವುದು. ಭಾರತೀಯ ರೆಡ್ ಕ್ರಾಸ್ ಕೇಂದ್ರ ಸಂಸ್ಥೆ ರಾಜ್ಯಕ್ಕೆ ೫ ಇಂಥ ವಾಹನಗಳನ್ನು ನೀಡಿದ್ದು, ಅದರಲ್ಲಿ ಕೊಪ್ಪಳ ಜಿಲ್ಲೆಗೂ ಒಂದು ವಾಹನ ದೊರೆತಿರುವುದು ಶ್ಲಾಘನೀಯ ಎಂದರು. ಇದರಿಂದ ಮತ್ತಷ್ಟು ರಕ್ತ ಸಂಗ್ರಹಕ್ಕೆ ದಾರಿಯಾಗುತ್ತದೆ. ಈ ದಿಸೆಯಲ್ಲಿ ಇನ್ನು ಹೆಚ್ಚು ಹೆಚ್ಚು ಒಳ್ಳೆ ಕಾರ್ಯಗಳು ಆಗಲಿ ಎಂದರು.
ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನೂತನ ರಕ್ತ ಸಂಗ್ರಹಣ ಸಂಚಾರಿ ವಾಹನದಲ್ಲಿ ಪ್ರಥಮ ಬಾರಿಗೆ ರಕ್ತದಾನಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕ್ ಕೊಪ್ಪಳಕ್ಕೊಂದು ಬಹುದೊಡ್ಡ ಆಸ್ತಿ ಎಂದರು.
ಇಂಥ ಸೇವೆಗೆ ಎಲ್ಲರೂ ಕೈಜೋಡಿಸಬೇಕು, ಜೀವ ಉಳಿಸುವ ಈ ಮಹಾನ್ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಸುಂದರೇಶ ಬಾಬು, ಜಿಲ್ಲಾ ಪಂಚಾಯಿತಿ ಸಿ.ಇ.ಓ. ಫೌಜಿಯಾ ತರುನ್ನಮ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧಕ್ಷ ಮಹಾಂತೇಶ ಪಾಟೀಲ್, ಕೊಪ್ಪಳ ನಗರಸಭೆ ಅಧ್ಯಕ್ಷೆ ಶಿವಗಂಗ ಶಿವರಡ್ಡಿ ಭೂಮಕ್ಕನವರ, ರೆಡ್ ಕ್ರಾಸ್ ಸಂಸ್ಥೆಯ ಡಾ. ಶ್ರೀನಿವಾಸ ಹ್ಯಾಟಿ, ಡಾ. ಗವಿಸಿದ್ದನಗೌಡ, ಸುದೀರ ಅವರಾಧಿ, ಡಾ. ಶಿವನಗೌಡ, ಡಾ. ಮಂಜುನಾಥ ಸಜ್ಜನ್ , ಡಾ. ರವಿಕುಮಾರ ದಾಣಿ ಮೊದಲಾದವರು ಇದ್ದರು.
೧ಕೆಪಿಎಲ್೧೦೧ ಕೊಪ್ಪಳ ನಗರದ ಗವಿಮಠ ಆವರಣದಲ್ಲಿ ರಕ್ತ ಸಂಗ್ರಹ ಸಂಚಾರಿ ವಾಹನಕ್ಕೆ ಸಂಸದ ಸಂಗಣ್ಣ ಕರಡಿ ಅವರು ಚಾಲನೆ ನೀಡಿದರು.

Please follow and like us: