ಎಸ್ಸಿಪಿ, ಟಿಎಸ್ಪಿ ಅನುದಾನವು ಆದ್ಯತೆಯಮೇರೆಗೆ ಬಳಕೆಯಾಗಲಿ:ಎಂ.ಸುಂದರೇಶಬಾಬು

  2022-23ನೇ ಸಾಲಿನ ವಿಶೇಷ ಘಟಕ ಯೋಜನೆ (ಎಸ್ಸಿಪಿ) ಮತ್ತು ಗಿರಿಜನ ಉಪ ಯೋಜನೆ (ಟಿಎಸ್ಪಿ)ಗಳಡಿ ಬಿಡುಗಡೆಯಾಗುವ ಅನುದಾನವನ್ನು ಆದ್ಯತೆಯ ಮೇರೆಗೆ ಬಳಸಲು ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ವಿವಿಧ ಇಲಾಖೆಯ ಯೋಜನಾ ಅನುಷ್ಠಾನಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳ ಅಧಿನಿಯಮ 2013ರನ್ವಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನವೆಂಬರ್ 30ರಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2023 ಚುನಾವಣೆ ಚುನಾವಣೆಯ ವರ್ಷವಾಗಿದೆ. ಆದ್ದರಿಂದ ಬಾಕಿ ಇರುವ ಟೆಂಡರ್ ಪ್ರಕ್ರಿಯೆಗಳನ್ನು ಬೇಗನೆ ಪೂರ್ಣಗೊಳಿಸಿ ಅನುದಾನ ಬಳಕೆಗೆ ಹೆಚ್ಚಿನ ಒತ್ತು ಕೊಡಬೇಕು. ಯೋಜನೆಯ ಅನುಷ್ಠಾನಕ್ಕಾಗಿ ಕಾರ್ಯಾದೇಶ ನೀಡಿಲ್ಲ. ಅನುಮೋದನೆ ಸಿಕ್ಕಿಲ್ಲ ಎನ್ನುವಂತಹ ಕಾರಣಗಳನ್ನು ಹೇಳಿ ವಿಳಂಬ ಮಾಡಿ ಅನುದಾನ ಬಳಸದೇ ಇದ್ದಲ್ಲಿ ಮತ್ತು ಕಾಲಮಿತಿಯೊಳಗೆ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಗಳನ್ನು ಅನುಷ್ಠಾನ ಮಾಡದೇ ಇದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿಯ ಕಾಮಗಾರಿಗಳು ಸಹ ಗುಣಮಟ್ಟದಿಂದ ನಡೆಯುವಂತೆ ನೋಡಿಕೊಳ್ಳಬೇಕು. ಎಸ್ಸಿಪಿ ಟಿಎಸ್ಪಿ ಯೋಜನೆಗಳು ಮಾರ್ಗಸೂಚಿಯಂತೆ ಆ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿಯೇ ಅನುಷ್ಠಾನವಾಗುವ ಬಗ್ಗೆ ನಿಗಾ ವಹಿಸಬೇಕು. ಎಸ್ಸಿಪಿ, ಟಿಎಸ್ಪಿ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆ ಸಹ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಾನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಗತಿ ಮಾಹಿತಿಯನ್ನು ಪೋರ್ಟಲನಲ್ಲಿ ಅಳವಡಿಸಿ: ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಒದಗಿಸಿದ ಅನುದಾನ, ಬಿಡುಗಡೆ ಮಾಡಿದ ಅನುದಾನ ಮತ್ತು ಖರ್ಚಾದ ಅನುದಾನಕ್ಕೆ ಸಂಬಂಧಿಸಿದಂತೆ ಭೌತಿಕ ಮತ್ತು ಅರ್ಥಿಕ ಪ್ರಗತಿ ಮಾಹಿತಿಯನ್ನು ಆಯಾ ಇಲಾಖೆಗಳು ಸಂಬಂಧಿಸಿದ ಪೋರ್ಟಲನಲ್ಲಿ ಕೂಡಲೇ ಅಳವಡಿಸಲು ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳು, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉಪ ನಿರ್ದೇಶಕರಿಗೆ ಸೂಚನೆ: ಪ್ರತಿ ಮಾಹೆ, ಆಯಾ ಇಲಾಖೆಗಳ ಒದಗಿಸುವ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಗಳ ಪ್ರಗತಿ ಮಾಹಿತಿಯನ್ನು ತಾವುಗಳು ಮೊದಲ ಹಂತದಲ್ಲಿ ಸರಿಯಾಗಿ ಪರಿಶೀಲಿಸಬೇಕು. ಸರಿಯಾಗಿ ಪ್ರಗತಿ ತೋರದ ಇಲಾಖೆಗಳನ್ನು ಪಟ್ಟಿ ಮಾಡಿ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
ಗಿರಿಜನ ಉಪ ಯೋಜನೆಯಡಿ ಅಕ್ಟೋಬರ್ 31ರ ಅಂತ್ಯದವರೆಗೆ ಕೃಷಿ ಇಲಾಖೆಯಿಂದ 11,644 ಫಲಾನುಭವಿಗಳಿಗೆ 1626 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ವಿವರಿಸಿದರು. ಸೆಪ್ಟೆಂಬರ್ 2022ರ ಅಂತ್ಯದವರೆಗೆ ವಿಶೇಷ ಘಟಕ ಯೋಜನೆಯಡಿ ಬಿಡುಗಡೆಯಾದ 75.72 ಲಕ್ಷ ರೂ ಅನುದಾನ ಪೈಕಿ 23.24 ಲಕ್ಷ ರೂ. ಅನುದಾನ ಖರ್ಚಾಗಿದೆ. ಗಿರಿಜನ ಉಪಯೋಜನೆಯಡಿ ಬಿಡುಗಡೆಯಾದ 41.47 ಲಕ್ಷ ರೂ. ಪೈಕಿ 9.60 ಲಕ್ಷ ರೂ. ಖರ್ಚಾಗಿದೆ. ಬಾಕಿ ಉಳಿದ ಅನುದಾನವನ್ನು ನಿಯಮಾನುಸಾರ ವೆಚ್ಚ ಮಾಡಲಾಗುವುದು ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕರು ಸಭೆಗೆ ತಿಳಿಸಿದರು.
ಎಸ್ಸಿಎಸ್ಟಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಕಾಲೋನಿಗಳಲ್ಲಿ ಮಕ್ಕಳನ್ನು ದುಡಿಮೆಗೆ ಕಳುಹಿಸದೇ ಶಾಲೆಗೆ ಕಳುಹಿಸುವ ಬಗ್ಗೆ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರುನ್ನುಮ್ ಹಾಗು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.