ವಿಶ್ವ ಏಡ್ಸ್ ದಿನಾಚರಣೆ : ಜಾಥಾ ಕಾರ್ಯಕ್ರಮಕ್ಕೆ ಚಾಲನೆ

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕೊಪ್ಪಳ ನಗರದಲ್ಲಿ ಡಿಸೆಂಬರ್ 01 ರಂದು ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ತಾಲ್ಲೂಕ ಆರೋಗ್ಯ ಅಧಿಕಾರಿಗಳ ಕಛೇರಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ-2022ರ ಜಾಥಾ ಕಾರ್ಯಕ್ರಮಕ್ಕೆ ನಗರದ ಹಳೇ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಡಿಸೆಂಬರ್ 01 ರಂದು ವಿಶ್ವದ ಎಲ್ಲೆಡೆ ಏಡ್ಸ್ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಹೆಚ್.ಐ.ವಿ ಸೋಂಕನ್ನು ಶೂನ್ಯಕ್ಕೆ ತರುವ ಗುರಿ ಹೊಂದಾಗಿದೆ. ಹೆಚ್.ಐ.ವಿ ಸೋಂಕಿತರ ಸಂಖ್ಯೆ ಕೆಲವು ಜಿಲ್ಲೆಗಳಲ್ಲಿ ಇಳಿಮುಖವಾದರೂ ಇನ್ನು ಕೆಲವು ಜಿಲ್ಲೆಗಳಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಸೋಂಕಿತರಲ್ಲಿ ಬಹಳಷ್ಟು ಮಂತಿ ಚಿಕಿತ್ಸೆ ಮತ್ತು ಔಷಧಿ ಪಡೆಯಲು ಹಿಂದೆಟು ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನೂ ಕೆಲವರು ಸೋಂಕು ಪರೀಕ್ಷೆ ಮತ್ತು ಚಿಕಿತ್ಸೆಯಿಂದಲೂ ದೂರ ಉಳಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಇಂತಹ ಸವಾಲುಗಳನ್ನು ಈಗ ಎದುರಿಸುವಂತಾಗಿದೆ. ಸೋಂಕು ಹೆಚ್ಚಲು ವಲಸೆ ಹಾಗೂ ಅಸುರಕ್ಷಿತ ಲೈಂಗಿಕತೆ ಕಾರಣವಾಗಿದೆ. ಈ ಬಗ್ಗೆ ಹೆಚ್ಚಿನ ಜಾಗೃತಿಯ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಅಲಕನಂದಾ ಮಳಿಗಿ, ಜಿಲ್ಲಾ ಏಡ್ಸ್ ಹಾಗೂ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ. ಶಶಿಧರ ಎ., ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ರಾಮಾಂಜನೇಯ, ವೈದ್ಯಾಧಿಕಾರಿ ಡಾ. ಸಲಿಂ, ಕ್ಷ-ಕಿರಣ ಉಪನಿರ್ದೇಶಕರಾದ ಡಾ.ರಾಜೇಶ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಸಂಘ-ಸಂಸ್ಥೆಯವರು ಉಪಸ್ಥಿತರಿದ್ದರು.
Please follow and like us: