ಅಸ್ಪೃಶ್ಯತೆ ಆಚರಣೆ ಪ್ರಕರಣ: ಜಿಲ್ಲಾಡಳಿತದಿಂದ ಅಗತ್ಯ ಕ್ರಮ

: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮೀಯಾಪೂರ ಗ್ರಾಮದಲ್ಲಿ ದೇವಸ್ಥಾನವನ್ನು ಪ್ರವೇಶ ಮಾಡಿದ್ದಕ್ಕೆ ಅಸ್ಪೃಶ್ಯತೆ ಆಚರಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಕುಷ್ಟಗಿ ತಾಲೂಕು ಮೀಯಾಪೂರ ಗ್ರಾಮದಲ್ಲಿ 4 ವರ್ಷದ ಮಗು ದೇವಸ್ಥಾನವನ್ನು ಪ್ರವೇಶ ಮಾಡಿದ್ದಕ್ಕೆ ಅಸ್ಪೃಶ್ಯತೆ ಆಚರಣೆ ಮಾಡಿದ್ದು, ಪ್ರಕರಣದಲ್ಲಿ ನೊಂದ ಚಂದ್ರಶೇಖರ ತಂದೆ ಶಿವಪ್ಪ ದಾಸರ ಅವರ ಕುಟುಂಬಕ್ಕೆ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ನೀಡಲಾಗಿದೆ.
ಅಸ್ಪೃಶ್ಯತೆ ಆಚರಣೆಯು ಅಮಾನವೀಯ ಸಾಮಾಜಿಕ ಪಿಡುಗಾಗಿರುವುದರಿಂದ, ಇಂತಹ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಕುಷ್ಟಗಿಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು 2021ರ ಸೆಪ್ಟೆಂಬರ್ 21 ರಂದು ಕುಷ್ಟಗಿ ಠಾಣೆಯಲ್ಲಿ ಎಫ್‌ಐಆರ್ ಮಾಡಿದ್ದು, ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೌರ್ಜನ್ಯದಲ್ಲಿ ನೊಂದ ಚಂದ್ರಶೇಖರ ತಂದೆ ಶಿವಪ್ಪ ದಾಸರ ಅವರಿಗೆ ಜಿಲ್ಲಾಧಿಕಾರಿಗಳ ಆದೇಶ 2021ರ ಸೆಪ್ಟೆಂಬರ್ 24 ರನ್ವಯ ಎಫ್.ಐ.ಆರ್ ಹಂತದ 25,000 ರೂ.ಗಳನ್ನು ಹಾಗೂ ಆದೇಶ 2021ರ ಡಿಸೆಂಬರ್ 23ರನ್ವಯ ದೋಷಾರೋಪಣ ಪಟ್ಟಿ ಹಂತದ 50,000 ರೂ.ಗಳನ್ನು ಮಂಜೂರಿ ಮಾಡಲಾಗಿದೆ.
ಈ ಪ್ರಕರಣದಲ್ಲಿ ನೋಂದವರಿಗೆ 5 ಲಕ್ಷ ರೂ.ಗಳ ಪೈಕಿ ಘಟಕ ವೆಚ್ಚದಲ್ಲಿ ಸ್ವಯಂ ಉದ್ಯೋಗಕ್ಕಾಗಿ ಕಾರ್ ವಾಷಿಂಗ್ ಶೆಡ್ ಕಲ್ಪಿಸಿಕೊಳ್ಳಲು ಕೊಪ್ಪಳ ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ 1 ಲಕ್ಷ ರೂ. ಸಹಾಯಧನ ಮಂಜೂರಿ ಮಾಡಿದ್ದು, ಇನ್ನುಳಿದ 4 ಲಕ್ಷ ರೂ.ಗಳನ್ನು ಬ್ಯಾಂಕ್ ಲೋನ್‌ಗೆ ಮಂಜೂರಿ ಎಂದು ಕ್ರಮ ವಹಿಸಲಾಗಿದೆ. ವಿಶೇಷ ಪ್ರಕರಣವೆಂದು ಹೆಚ್ಚುವರಿ ಸಹಾಯಧನ ಮಂಜೂರಾತಿಗಾಗಿ ನಿಗಮದ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಚಂದ್ರಶೇಖರ ತಂದೆ ಶಿವಪ್ಪ ದಾಸರ ಅವರಿಗೆ ಮಿಯಾಪೂರ ಗ್ರಾಮದಲ್ಲಿ ಸ್ವಂತ ಮನೆಯಿದ್ದು, ಕುಷ್ಟಗಿ ನಗರದಲ್ಲಿ ವಾಸಿಸಲು ಇಚ್ಛಿಸಿದ್ದರಿಂದ ಕುಷ್ಟಗಿ ಪುರಸಭೆಯವರ ಮೂಲಕ ನಿವೇಶನ ಹಂಚಿಕೆಗೆ ಕ್ರಮವಹಿಸಲಾಗುತ್ತಿದ್ದು, ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿದೆ.
ಚಂದ್ರಶೇಖರ ತಂದೆ ಶಿವಪ್ಪ ದಾಸರ ಅವರ ಪುತ್ರ `ವಿನಯ’ ಗೆ ಸರ್ಕಾರದ ಆದೇಶ 2022ರ ಮೇ 16 ರನ್ವಯ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲು ಆದೇಶವಾಗಿದ್ದು, ಪ್ರಸ್ತುತ ಕುಷ್ಟಗಿ ನಗರದಲ್ಲಿನ ಪ್ರತಿಷ್ಟಿತ ವಿಜಯ ಚಂದ್ರಶೇಖರ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ.ಗೆ ದಾಖಲು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us: