ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಮಕ್ಕಳು ಮುಂದೆ ಬರಬೇಕು : ಶಿವಗಂಗಾ

ಪ್ರತಿಭೆ ಎನ್ನುವದು ಯಾರದೋ ಸ್ವತ್ತಲ್ಲ, ಎಲ್ಲರಲ್ಲೂ ಒಂದೊಂದು ಗುಣಗಳು ಇರುತ್ತವೆ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಮಕ್ಕಳು ಮುಂದೆ ಬರಬೇಕು ಎಂದು ನಗರಸಭೆ ಅಧ್ಯಕ್ಷೆ ಶಿವಗಂಗಮ್ಮ ಶಿವರಡ್ಡಿ ಭೂಮಕ್ಕನವರ ಹೇಳಿದರು.
ಅವರು ನಗರದ ಸರಕಾರಿ ಪದವಿ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಬ್ಲ್ಯೂ ಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ಸರಕಾರಿ ಪದವಿ ಕಾಲೇಜಿನ ಆಶ್ರಯದಲ್ಲಿ ಜರುಗಿದ ಸಂವಿಧಾನ ಸಮರ್ಪಣಾ ದಿನವನ್ನು ಬಾಬಾ ಸಾಹೇಬರಿಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮಗುವು ಸಹ ಅಂಬೇಡ್ಕರ್, ಇಂದಿರಾ ರಂತೆ ಎತ್ತರಕ್ಕೆ ಬೆಳೆಯುವ ನಿಟ್ಟಿನಲ್ಲಿ ಶ್ರಮಿಸಬೇಕು, ನಾವು ನೋಡಿ ಕಲಿಯುತ್ತೇವೆ ಅದರಂತೆ ಪ್ರಕೃತಿ ನಮಗೆ ಸಾಕಷ್ಟು ಕಲಿಸುತ್ತದೆ, ಬಾಬಾ ಸಾಹೇಬ್ ಅವರು ಕೊಟ್ಟ ಕೊಡುಗೆ ಅವಿಸ್ಮರಣೀಯ ಎಂದರು.
ಕಾರ್ಯಕ್ರಮವನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ಸಮರ್ಪಿಸಿದ ಸುಸಂದರ್ಭವಾದ ನವೆಂಬರ್ ೨೬ ರಂದು ಕಾಲೇಜಿನ ಆಡಿಟೋರಿಯಂ ಹಾಲ್‌ನಲ್ಲಿ ಡಾ. ಪ್ರಭುರಾಜ ನಾಯಕ್ ಅವರು ಸಂವಿಧಾನ ಪೀಠಿಕೆ ಓದಿಸಿ, ಉಪನ್ಯಾಸ ನೀಡಿ ಮಾತನಾಡಿ, ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಲು ಬಾಬಾಸಾಹೇಬರು ಪಟ್ಟಶ್ರಮಕ್ಕೆ ಸರಿಸಾಟಿಯಿಲ್ಲವಾಗಿದೆ, ವಿಶ್ವದ ಹಲವು ಸಂವಿಧಾನವನ್ನು, ಹಲವು ಶಾಸ್ತ್ರಗಳನ್ನು ಅಧ್ಯಯನ ಮಾಡಿ ೩೬೦೦ ಜಾತಿಗಳೂ ನಮ್ಮದೇ ಸಂವಿಧಾನ ಎಂದು ಪ್ರೀತಿಸುವಂತೆ ಮಾಡಿದ ಅರ್ಥಪೂರ್ಣ, ಜ್ಞಾನಪೂರ್ಣವಾದ ವೈಜ್ಞಾನಿಕ ವಿಶ್ವದ ಬೃಹತ್ ಲಿಖಿತ ಸಂವಿಧಾನವನ್ನು ಭಾರತಕ್ಕೆ ಕೊಟ್ಟಿದ್ದು ದೇಶದ ಹೆಮ್ಮೆ ಎಂದರು.
ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ತಿಮ್ಮಾರಡ್ಡಿ ಮೇಟಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿಶ್ವದಲ್ಲಿ ಶ್ರೇಷ್ಟ ಮೇಧಾವಿಯಾಗಿದ್ದ ಅಂಬೇಡ್ಕರ್ ಅವರ ಜ್ಞಾನ ಬಳಸಿಕೊಳ್ಳಲು ಭಾರತ ವಿಫಲವಾಯಿತು ಎಂದರೆ ಅತಿಶಯೋಕ್ತಿಯಲ್ಲ ಅವರು ಹಾಕಿಕೊಟ್ಟ ದಾರಿಯಲ್ಲಿ ದೇಶವನ್ನು ಉತ್ತಮವಾಗಿ ಮುನ್ನಡೆಸಲು ಎಲ್ಲರೂ ಸನ್ಣದ್ಧರಾಗೋಣ ಎಂದು ಕರೆ ನೀಡಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಂಘಟಕ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆ ಸಬಲಳಾಗಲು ಪುರುಷನಂತೆ ಬದುಕಲು ಅವಕಾಶ ಮಾಡಿಕೊಟ್ಟಿದ್ದೇ ಬಾಬಾಸಾಹೇಬ್ ಎಂಬ ಆಧುನಿಕ ಬುದ್ಧ ಬಸವ ಮಹಾವೀರ ಅಲ್ಲದೇ ಶೋಷಿತರಿಗಾಗಿ ತನ್ನ ಸರ್ವಸ್ವ ಕಳೆದುಕೊಂಡ ಪುಣ್ಯಾತ್ಮ ಎಂದರು.
ಸುಮಾರು ೩೦೦ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು, ಹಲವರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. ಈ ವೇಳೆ ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಶಿವರಡ್ಡಿ ಭೂಮಕ್ಕನವರ, ನೆಹರು ಯುವ ಕೇಂದ್ರದ ಶರಣು ವಿವೇಕಿ, ಉಪನ್ಯಾಸಕರಾದ ಡಾ. ಶುಭ, ಡಾ. ಗಾಯತ್ರಿ, ಡಾ. ವಾರುಣಿ, ಡಾ. ಸಂತೋಷಕುಮಾರಿ, ಡಾ. ರಶ್ಮಿ, ಡಾ. ಶಿವನಾಥ ಇ.ಜಿ., ಭೀಮೇಶ, ಅನಿತಾ ಇತರರು ಇದ್ದರು. ಸಾಹಿತ್ಯ ಎಂ. ಗೊಂಡಬಾಳ ಪ್ರಾರ್ಥಿಸಿದರು, ಡಾ. ಪ್ರಕಾಶ ಬಳ್ಳಾರಿ ವಂದಿಸಿದರು.

Please follow and like us: