‘ನೆಲೆ’ ಕಾಣದ ಸ್ತುತಿ


ಪ್ರಾಚೀನ ಕಾಲದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನ-ಮಾನ ನೀಡುತ್ತಿರಲಿಲ್ಲ. ಅವಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಇದ್ದು ಮನೆಯ ಕೆಲಸಗಳನ್ನು ಮಾತ್ರ ಮಾಡಬೇಕು. ಅವಳಿಗೆ ಉದ್ಯೋಗ ಮಾಡುವ ಹಕ್ಕು ಇರುತ್ತಿರಲಿಲ್ಲ. ಹೆಣ್ಣು ಕೇವಲ ಮಕ್ಕಳನ್ನು ಹಡೆಯುವುದಕ್ಕೆ ಮಾತ್ರ ಅರ್ಹಳು ಎಂದು ಭಾವಿಸಲಾಗಿತ್ತು. ಚಿಕ್ಕಂದಿನಲ್ಲಿ ತಂದೆ-ತಾಯಿಗಳ ಆಶ್ರಯದಲ್ಲಿ, ಮದುವೆಯಾದ ನಂತರ ಗಂಡನ ಆಶ್ರಯದಲ್ಲಿ, ಕೊನೆಗೆ ವೃದ್ದಾವಸ್ಥೆಯಲ್ಲಿ ಮಕ್ಕಳ ಆಶ್ರಯದಲ್ಲಿ ಬದುಕುತ್ತಾಳೆ. ಅವಳಿಗೆ ಸ್ವತಂತ್ರವಾಗಿ ಬದುಕುವ ವ್ಯವಸ್ಥೆಯನ್ನು ಈ ಆಧುನಿಕ ಯುಗದಲ್ಲಿಯೂ ಸಿಗದಿರುವುದು ಬೇಜಾರದ ಸಂಗತಿಯಲ್ಲದೇ ಮತ್ತೇನೂ ಅಲ್ಲ. “ಎಂದು ಒಬ್ಬ ಸ್ತ್ರೀ ಮಧ್ಯರಾತ್ರಿ ಹನ್ನೆರಡು ಗಂಟೆಯಲ್ಲಿ ಸ್ವತಂತ್ರವಾಗಿ ಓಡಾಡುವಳೋ ಅಂದೇ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ” ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆಯೋ ಅದು ಮಾತಿಗೆ ಮಾತ್ರ ಸೀಮಿತವಾದಂತೆ ತೋರುತ್ತದೆ. ಪ್ರಾಚೀನ ಕಾಲದಿಂದಲೂ ಅವಳಿಗೆ ಯೋಗ್ಯವಾದ ಸ್ಥಾನ-ಮಾನ ಕೊಡುವುದರಲ್ಲಿ ಈ ಸಮಾಜ ವಿಫಲವಾಗಿದೆ. ಅವಳಿಗೆ ಸರಿಯಾದ ನೆಲೆ ಕೊಡುವಲ್ಲಿ ನಾವು ಸಫಲರಾಗಿದ್ದೇವೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಒಬ್ಬ ಸ್ತ್ರೀ ಈ ಸಮಾಜದಲ್ಲಿ ತನಗೆ ಸರಿಯಾದ ಸ್ಥಾನ-ಮಾನ ದೊರೆಯದಿದ್ದಾಗ, ಬದುಕಿಗೊಂದು ಚೂರು ನೆಲೆ ಸಿಗದಿದ್ದಾಗ ಆ ಅಬಲೆ ಏನು ಮಾಡಿಯಾಳು ಎಂಬುದನ್ನು ಅನಾವರಣ ಮಾಡುವುದೇ ಶ್ರೀಮತಿ ಎ.ಜಿ.ರತ್ನ ಕಾಳೇಗೌಡರವರ ‘ನೆಲೆ’ ಕಾದಂಬರಿ ಓದಿದಾಗ ಅದು ನಿಜವೆನಿಸುತ್ತದೆ.
ಶ್ರೀಮತಿ ರತ್ನ ಕಾಳೇಗೌಡರವರು ಮೂಲತಃ ಹಾಸನ ಜಿಲ್ಲೆಯವರಾಗಿದ್ದರೂ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಸಾಹಿತ್ಯದ ಸೇವೆ ಸಾಮಾನ್ಯವಾದುದಲ್ಲ. ಸುಮಾರು ನೂರಕ್ಕೂ ಅಧಿಕ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆಂದರೆ ಇದನ್ನು ಅಮೋಘ ಸೇವೆಯಲ್ಲದೇ ಮತ್ತೇನೂ ಅನ್ನಲಾಗದು. ಕಥೆ, ಸಣ್ಣಕಥೆ, ಕಾದಂಬರಿ, ನಾಟಕ, ಕಾವ್ಯ, ಆಧುನಿಕವಚನ, ಚುಟುಕು, ಪ್ರವಾಸಕಥೆ ಹೀಗೆ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯದ ಕೃಷಿ ಮಾಡಿದ್ದಾರೆ. ಅಲ್ಲದೇ ಮಕ್ಕಳ ಕಥೆ, ಕಾವ್ಯಗಳನ್ನೂ ಸಹ ಬರೆದು ಸೈ ಎನಿಸಿಕೊಂಡಿದ್ದಾರೆ. ರತ್ನ ಕಾಳೇಗೌಡರು ರಚಿಸಿರುವ ‘ನೆಲೆ’ ಕಾದಂಬರಿಯಲ್ಲಿ ಒಬ್ಬ ಮಹಿಳೆ ತನ್ನ ಬದುಕಿನಲ್ಲಿ ‘ನೆಲೆ’ ಕಂಡುಕೊಳ್ಳಬೇಕೆAಬ ಮಹದಾಶಯದೊಂದಿಗೆ ನಡೆಸುವ ಹೋರಾಟವನ್ನು ನೋಡಿದಾಗ ಎಂತಹವರ ಮನಸ್ಸು ಒಮ್ಮೆ ಮರುಗದೇ ಇರಲಾರದು.
‘ನೆಲೆ’ ಕಾದಂಬರಿಯೊಳಗೆ ‘ಸ್ತುತಿ’ ಎನ್ನುವ ಪಾತ್ರವು ನತದೃಷ್ಟ ಸ್ತಿçÃಯಾಗಿ ಕಾಣುತ್ತಾಳೆ. ಚನ್ನೇಗೌಡ ಮತ್ತು ಸುನಂದರವರ ಮುದ್ದಿನ ಮಗಳು. ಸ್ತುತಿಗೆ ಜನ್ಮ ನೀಡುವ ಸಂದರ್ಭದಲ್ಲೇ ತಾಯಿ ಸುನಂದಮ್ಮ ಮರಣ ಹೊಂದುತ್ತಾಳೆ. ನಂತರ ಚನ್ನೇಗೌಡರ ಮನೆಯಲ್ಲಿ ಕೆಲಸ ಮಾಡುವ ಶಾರದಮ್ಮ ಆ ಮಗುವನ್ನು ಸಾಕಿ-ಸಲುಹಿ ಬೆಳೆಸುತ್ತಾಳೆ. ಶಾರದಮ್ಮಳಿಗೆ ಮೊದಲೇ ಗಂಡ ಮರಣ ಹೊಂದಿದ್ದರಿಂದ ಸ್ತುತಿಯ ಹಾರೈಕೆಗಾಗಿ ಚನ್ನೇಗೌಡರ ಮನೆಯಲ್ಲೇ ಉಳಿದುಕೊಳ್ಳುತ್ತಾಳೆ. ಅವಳಿಗೆ ಉದಯ ಎಂಬ ಮಗನಿರುತ್ತಾನೆ. ಅವನು ಬಹಳ ಸಭ್ಯ ಮತ್ತು ಪ್ರಾಮಾಣಿಕವಾದ ವ್ಯಕ್ತಿ. ಸ್ತುತಿ ಮತ್ತು ಉದಯ ಇಬ್ಬರೂ ಒಂದೇ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಕೊನೆಗೆ ಮೆಡಿಕಲ್ ಸಹ ಒಂದೇ ಕಡೆಯಲ್ಲಿ ಅಭ್ಯಾಸ ಮಾಡುತ್ತಾರೆ. ಸ್ತುತಿಗೆ ಉದಯನ ಮೇಲೆ ವ್ಯಾಮೋಹವಿರುತ್ತದೆ. ಅವನನ್ನು ಮದುವೆಯಾಬೇಕೆಂದೂ ಸಹ ನಿರ್ಧರಿಸಿರುತ್ತಾಳೆ. ಅದಕ್ಕೆ ಇಬ್ಬರಲ್ಲಿ ಸಮ್ಮತಿ ಸೂಚಿಸಿದಂತೆ ಇದ್ದರೂ ಅದನ್ನು ಸ್ತುತಿಯಾಗಲಿ ಇಲ್ಲವೇ ಉದಯನಾಗಲಿ ಎಲ್ಲಿಯೂ ವ್ಯಕ್ತಪಡಿಸುವುದಿಲ್ಲ. ಇಬ್ಬರೂ ಒಂದೇ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಒಳ್ಳೆಯ ವ್ಯಕ್ತಿಗಳಾಗಿ ಉತ್ತಮ ಅಂಕಗಳೊಂದಿಗೆ ಎಂ.ಬಿ.ಬಿ.ಎಸ್ ಉತ್ತೀರ್ಣರಾಗುತ್ತಾರೆ. ಅದೇ ಕಾಲೇಜಿನಲ್ಲಿ ಅಭ್ಯಾಸ ಮಾಡುವ ದೀಪಕ್ ಎನ್ನುವ ಕೆಟ್ಟ ವ್ಯಕ್ತಿಯೂ ಸಹ ಅಭ್ಯಾಸ ಮಾಡುತ್ತಿರುತ್ತಾನೆ. ಈ ದೀಪಕ್ ಚನ್ನೇಗೌಡರ ತಂಗಿ ವನಜಾಳ ಮಗ. ವನಜಾ ಮತ್ತು ಅವಳ ಮಗ ದೀಪಕ್‌ನಿಂದ ಚನ್ನೇಗೌಡ ಮತ್ತು ವಿಶೇಷವಾಗಿ ಸ್ತುತಿ ಅನುಭವಿಸುವ ತೊಂದರೆಗಳು ಅಷ್ಟಿಷ್ಟಲ್ಲ. ಒಂದರ್ಥದಲ್ಲಿ ಈ ಕಾದಂಬರಿ ತುಂಬಾ ಅವರು ಕೊಡುವ ತೊಂದರೆಗಳೇ ಎದ್ದು ಕಾಣುವಂತೆ ಕಾದಂಬರಿಕಾರರು ಚಿತ್ರಿಸಿದಂತೆ ಭಾಸವಾಗುತ್ತದೆ. ಈ ತೊಂದರೆಗಳೇ ಚನ್ನೇಗೌಡನ ಕನಸಿನ ಆಸ್ಪತ್ರೆ ಬೆಂಕಿಗಾಹುತಿಯಾಗಿ ಕೊನೆಗೆ ಅವನ ಸಾವಿಗೆ ಕಾರಣವಾದರೆ, ಇತ್ತ ಸ್ತುತಿಯ ಬದುಕಿನಲ್ಲಿ ಕೊನೆಯವರೆಗೂ ‘ನೆಲೆ’ ಕಾಣದೇ ಎಲ್ಲೋ ಮರೆಯಾಗಿ ಹೋಗುವ ಪ್ರಸಂಗ ಎದುರಾಗುತ್ತದೆ. ವನಜಾಳ ಗಂಡ ಹೊನ್ನೇಗೌಡ ಬಹಳ ಒಳ್ಳೆಯ ವ್ಯಕ್ತಿ. ಆದರೆ ವನಜಾ ಮಾತ್ರ ಬಹಳ ದುಷ್ಟಗುಣಗಳನ್ನು ಹೊಂದಿರುವ ಸ್ತಿçÃ. ಅಣ್ಣ ಎಂಬ ಬಾಂಧವ್ಯವನ್ನೂ ಲೆಕ್ಕಿಸದೆ ಆಸ್ತಿಗಾಗಿ ಪೀಡಿಸುವ ಹೆಣ್ಣು. ಅವಳಂತೆ ದುರ್ಗುಣವನ್ನು ಹೊಂದಿರುವ ಅವಳ ಮಗ ದೀಪಕ್‌ನೂ ಸಹ ಚನ್ನೇಗೌಡರ ಕುಟುಂಬಕ್ಕೆ ವಿಲನ್ ಆಗಿ ಕಾಡುತ್ತಾನೆ. ಕೊನೆಗೆ ಸ್ತುತಿಯ ಬದುಕಿನಲ್ಲಿ ಬಹುದೊಡ್ಡ ದುರಂತವೇ ನಡೆದುಹೋಗುತ್ತದೆ. ದೀಪಕ್‌ನ ದುಷ್ಕೃತ್ಯದಿಂದ ಸ್ತುತಿಯ ಬಾಳಿನಲ್ಲಿ ಬಿರುಗಾಳಿಯಂತೆ ಅವಳ ಬದುಕಿಗೆ ನೆಲೆ ಕಾಣದೇ ಹೋಗುವುದನ್ನು ಈ ಕಾದಂಬರಿಯಲ್ಲಿ ರತ್ನ ಮರುಕ ಹುಟ್ಟುವಂತೆ ಚಿತ್ರಿಸಿದ್ದಾರೆ.
ಮೊದಲಿನಿಂದಲೂ ದೀಪಕ್‌ನ ಮೇಲೆ ಅಸಹ್ಯ ಮತ್ತು ತಿರಸ್ಕಾರ ಮನೋಭಾವನೆಯನ್ನು ಹೊಂದಿದ್ದಳು. ಮೊದಲಿನಿಂದಲೂ ಹೊಂಚುಹಾಕುತ್ತಿದ್ದ ದೀಪಕ್‌ನಿಗೆ ಒಂದು ಸಂದರ್ಭ ಒದಗಿ ಬಂದಿತು. ಸ್ತುತಿ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಪ್ರವಾಸಕ್ಕೆ ಹೋಗಿದ್ದಳು. ಜೊತೆಗೆ ಉದಯನೂ ಸಹ ಹೋಗಿರುತ್ತಾನೆ. ಆಗ ಅನಾರೋಗ್ಯದಿಂದ ಒಬ್ಬಳೇ ರೂಮಿನಲ್ಲಿ ಮಲಗಿದಾಗ ದೀಪಕ್ ಅವಳ ಮೇಲೆ ಅತ್ಯಾಚಾರ ಎಸಗುತ್ತಾನೆ. ಅವಳು ಎಷ್ಟೇ ಕಾಡಿ-ಬೇಡಿದರೂ ಅಲ್ಲದೆ ತನ್ನ ಸಹೋದರಮಾವನ ಮಗಳು ಎಂಬ ಬಾಂಧವ್ಯವನ್ನೂ ಲೆಕ್ಕಿಸದೇ ಅತ್ಯಚಾರ ಮಾಡುತ್ತಾನೆ. ಇದು ಸ್ತುತಿಯ ಬದುಕಿನಲ್ಲಿ ನಡೆದ ಘನಘೋರ ಕೃತ್ಯ. ಈ ಘಟನೆಯಿಂದ ಅವಳು ಮಾನಸಿಕವಾಗಿ ಕುಗ್ಗಿಹೋದಳು. ಸ್ತುತಿಗೆ ಅವಳ ಮೇಲೆ ದೀಪಕ್‌ನಿಂದ ಅತ್ಯಾಚಾರ ನಡೆದ ಮೇಲಂತೂ ಅವಳ ನಡೆಯೇ ಬದಲಾಗುತ್ತದೆ. ದೀಪಕ್‌ನು ಸ್ತುತಿಯನ್ನು ಮದುವೆಯಾಗಲು ಒಪ್ಪಿದರೂ ಕೂಡ ಅವಳು ನಿರಾಕರಿಸುತ್ತಾಳೆ. ಉದಯನನ್ನು ಒಪ್ಪುವುದೋ ಅಥವಾ ದುಷ್ಟ ದೀಪಕ್‌ನನ್ನು ಒಪ್ಪಬೇಕೋ ಎಂಬುವುದು ತಿಳಿಯದೆ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಇತ್ತ ಉದಯನೂ ಸಹ ದೀಪಕ್‌ನ ದುಷ್ಕೃತ್ಯವನ್ನು ಸ್ತುತಿಯ ಮೊಬೈಲಿನಲ್ಲಿ ಮಾತನಾಡಿರುವುದನ್ನು ಗಮನಿಸಿ ಅವನೂ ಸಹ ಅವಳಿಂದ ದೂರ ಉಳಿಯಲು ಪ್ರಯತ್ನಿಸುತ್ತಾನೆ. ಈ ಮಧ್ಯೆ ಗಣೇಶ ಎನ್ನುವ ಪಾತ್ರದ ಪ್ರವೇಶದಿಂದಾಗಿ ಸ್ತುತಿಯಲ್ಲಿ ಪ್ರೀತಿಯ ಭಾವನೆಗಳನ್ನು ಹುಟ್ಟುಹಾಕಿದರೂ ಅದು ಕ್ಷಣ ಮಾತ್ರ. ಗಣೇಶನು ಚನ್ನೇಗೌಡರ ಕನಸಿನ ಆಸ್ಪತ್ರೆಯ ಕಟ್ಟಡ ನಿರ್ಮಾಣದ ಇಂಜಿನಿಯರ್. ಅವನು ಆಗಾಗ ಸ್ತುತಿಯ ಜೊತೆ ಮಾತನಾಡುತ್ತಾ ಅವಳಲ್ಲಿರುವ ನೋವನ್ನು ಕೊಂಚಮಟ್ಟಿಗೆ ಕಡಿಮೆ ಮಾಡುತ್ತಾನೆ. ಅವನು ಸ್ತುತಿಯ ಮುಖವನ್ನು ನೋಡಿ ಎಲ್ಲವನ್ನು ಹೇಳುವವನು ಆಗಿರುತ್ತಾನೆ. ಹೀಗಾಗಿ ಅವಳ ಬದುಕಿನಲ್ಲಿ ನಡೆದ ದುರಂತವನ್ನೂ ಬಲ್ಲವನಾಗಿರುತ್ತಾನೆ. ಸ್ತುತಿಯ ದುರಂತದ ಕಥೆ ಎಲ್ಲವೂ ಅವನಿಗೆ ಗೊತ್ತಿದ್ದರೂ ಅವಳನ್ನು ಮದುವೆಯಾಗಲು ಒಪ್ಪಿರುತ್ತಾನೆ. ಆದರೆ ಸ್ತುತಿಯ ಬದುಕು ಆ ನಿಟ್ಟಿನಲ್ಲಿ ನಡೆಯುವುದಿಲ್ಲ. ಇಲ್ಲಿ ಒಂದು ದುರಂತವೇ ನಡೆದುಹೋಗುತ್ತದೆ. ಗಣೇಶನು ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಮರಣಹೊಂದುತ್ತಾನೆ. ಇದು ಸ್ತುತಿಯ ಬದುಕನ್ನು ಮತ್ತಷ್ಟು ಘಾಸಿಗೊಳಿಸುತ್ತದೆ. ಆದರೂ ಶತ ಪ್ರಯತ್ನದಿಂದ ಚನ್ನೇಗೌಡರು ಆಸ್ಪತ್ರೆಯನ್ನು ಪೂರ್ಣಗೊಳಿಸುತ್ತಾರೆ. ಇಲ್ಲಿ ಮತ್ತೊಂದು ದುರಂತ ನಡೆಯುತ್ತದೆ. ಆಸ್ಪತ್ರೆ ಬೆಂಕಿಗಾಹುತಿಯಾಗಿ ಧಗ-ಧಗ ಉರಿದು ಬೂದಿಯಾಗುತ್ತದೆ. ಇದಕ್ಕೆ ವನಜಾ ಮತ್ತು ಅವಳ ಮಗ ದೀಪಕ್‌ನು ಸೇಡಿನಿಂದ ಈ ಕೃತ್ಯ ಎಸಗಿದ್ದಾರೆಂದು ಜನ ಅಂದುಕೊಂಡರೂ ಏನೂ ಮಾಡಲಾಗದ ಅಸಾಹಯಕ ಸ್ಥಿತಿಯಲ್ಲಿ ಚನ್ನೇಗೌಡ ಮತ್ತು ಸ್ತುತಿ ಉರಿಯುತ್ತಿರುವ ಆಸ್ಪತ್ರೆಯನ್ನು ನೋಡುತ್ತಾ ನಿಲ್ಲುತ್ತಾರೆ. ಈ ದುರಂತ ಚನ್ನೇಗೌಡರಿಗೆ ತನ್ನ ಹೆಂಡತಿ ಸತ್ತುದಕಿಂತಲೂ ಘಾಸಿಮಾಡುತ್ತದೆ. ಇದರಿಂದ ಬಹಳ ನೊಂದುಕೊAಡ ಚನ್ನೇಗೌಡ ಮರಣಹೊಂದುತ್ತಾನೆ. ಇತ್ತ ಸ್ತುತಿಯ ಬದುಕಂತೂ ದಿಕ್ಕು ತೋಚದೆ ಕಂಗಲಾಗಿಬಿಡುತ್ತಾಳೆ. ಈ ಮಧ್ಯೆ ಉದಯನೂ ಸಹ ತನ್ನ ತಾಯಿ ಶಾರದಮ್ಮಳನ್ನೂ ಇತ್ತ ಸಾಕಿ ಸಲುಹಿದ ಚನ್ನೇಗೌಡ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿ ಬಿಡುತ್ತಾನೆ. ಕೊನೆಗೆ ಸ್ತುತಿ ಮತ್ತು ಉದಯ ಇಬ್ಬರೂ ಈ ಊರನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿ ದೂರದ ಊರು ಹೈದರಾಬಾದಿನಲ್ಲಿ ಉದಯನು ತನ್ನ ಹಳೆಯ ಗೆಳತಿ ರೂಪಳ ಮನೆಯಲ್ಲಿ ಸ್ತುತಿಯೊಂದಿಗೆ ವಾಸ ಮಾಡುತ್ತಾನೆ. ಅಲ್ಲಿಯೂ ಒಂದು ದುರಂತ ನಡೆದು ರೂಪಳ ಗಂಡ ರೋಹಿತ್‌ನು ವಿಮಾನ ಅಪಘಾತದಲ್ಲಿ ಮರಣಹೊಂದುತ್ತಾನೆ. ಸ್ತುತಿ ತಾನೇ ನಿರ್ಧರಿಸಿಕೊಂಡಂತೆ ನಾನು ನತದೃಷ್ಟ ಹೆಣ್ಣು, ನಾನು ಕಾಲಿಟ್ಟ ಕಡೆಯೆಲ್ಲೆಲ್ಲಾ ದುರಂತಗಳೇ ನಡೆದುಹೋಗುತ್ತವೆ ಎಂದು ಅಂದುಕೊಳ್ಳುತ್ತಾಳೆ. ತಾನು ಕೆಲಸ ಮಾಡುವ ಕಾರ್ಖಾನೆಯಲ್ಲಿ ಮಹೇಶ ಎನ್ನುವ ಸೂಪರವೈಸರ್ ತನ್ನನ್ನು ಇಷ್ಟಪಡುತಿದ್ದಾನೆಂದು ತಿಳಿದಿದ್ದರೂ ಮುಂದೆ ತನ್ನಿಂದ ಯಾರಿಗೂ ಕೆಟ್ಟದ್ದು ಆಗಬಾರದೆಂದು ನಿರ್ಧರಿಸುತ್ತಾಳೆ. ದೀಪಕ್‌ನ ದುಷ್ಕೃತ್ಯದಿಂದಾಗಿ ಸ್ತುತಿ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಕೊನೆಗೆ ಉದಯನನ್ನು ತನ್ನ ಮಗಳನ್ನೂ ಬಿಟ್ಟು ಯಾರಿಗೂ ಹೇಳದೇ-ಕೇಳದೇ ಎಲ್ಲೋ ನಡೆದು ಹೋಗಿ ಮರೆಯಾಗುತ್ತಾಳೆ.
ಒಂದರ್ಥದಲ್ಲಿ ಶ್ರೀಮತಿ ರತ್ನರವರ ‘ನೆಲೆ’ ಕಾದಂಬರಿಯು ಕುಟುಂಬಗಳ ಮಧ್ಯೆ ಇರುವ ಸಂಬAಧ ಮತ್ತು ಸಂಘರ್ಷಗಳ ಅನಾವರಣ ಮಾಡುವುದೇ ಆಗಿದೆ. ಈ ಕಾದಂಬರಿಯನ್ನು ಮಾನವೀಯ ಸಂಬAಧಗಳ ಹಿನ್ನೆಲೆಯಲ್ಲಿ ನೋಡುವುದಾರೆ ಅನೇಕ ಸಂಗತಿಗಳು ಗೋಚರವಾಗುತ್ತವೆ. ಒಂದುಕಡೆ ಸಂಬಂಧಗಳು ಒಂದಕ್ಕೊಂದು ಕಟ್ಟಿಕೊಂಡರೆ, ಇನ್ನೊಂದುಕಡೆ ಸಂಘರ್ಷ ಮಾಡುತ್ತವೆ. ಸಂಬಂಧಗಳನ್ನು ಒಬ್ಬರಿಗೊಬ್ಬರು ಪೋಷಿಸುವ ಸಂಬಂಧಗಳು ಒಂದುಕಡೆಯಾದರೆ, ಕೆಟ್ಟದ್ದನ್ನು ಮಾಡಿ ಅವರ ಬದುಕನ್ನೇ ನಾಶಮಾಡುವವರು ಇನ್ನೊಂದುಕಡೆ. ಹೀಗೆ ಎಲ್ಲಾ ಸಂಬಂಧಗಳೂ ಈ ಕಾದಂಬರಿಯಲ್ಲಿ ಎದ್ದು ಕಾಣುವಂತೆ ಕಾದಂಬರಿಕಾರರು ಚಿತ್ರಿಸಿದ್ದಾರೆ. ಹೀಗಾಗಿ ಸಂಬಂಧಗಳಿಗೆ ಒಂದು ಕಡೆ ಬೆಲೆ ಸಿಕ್ಕರೆ, ಮತ್ತೊಂದು ಕಡೆ ಅಂತಹ ಬೆಲೆ ಸಿಗದೇ ನಲುಗುವ ಸ್ಥಿತಿಗಳು ಈ ಕಾದಂಬರಿಯಲ್ಲಿವೆ.
ಈ ಕಾದಂಬರಿಯಲ್ಲಿ ವನಜಾ ಮತ್ತವಳ ಮಗ ದೀಪಕ್ ಇಬ್ಬರನ್ನೂ ಮಾನವೀಯ ಸಂಬಂಧಗಳ ಬೆಲೆ ತಿಳಿಯದ ದುಷ್ಟ ವ್ಯಕ್ತಿಗಳನ್ನಾಗಿ ಚಿತ್ರಿಸಲಾಗಿದೆ. ತಾಯಿಯ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು ಮಗನಲ್ಲಿಯೂ ಕೂಡ ಕಾಣುತ್ತವೆ. ಅವನಿಗೆ ತಾನು ಬಯಸಿದ್ದು ಪಡೆಯಲೇಬೇಕೆಂಬ ಹಠ. ಅದಕ್ಕಾಗಿ ಏನು ಮಾಡಲೂ ಹೇಸದ ವ್ಯಕ್ತಿ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಇವನ ದುರ್ನಡತೆಗಳು ಪ್ರಾರಂಭವಾಗುತ್ತವೆ. ಕಲಿಸುವ ಶಿಕ್ಷಕರು ಏನು ಹೇಳಿದರೂ ಕೇಳದೇ ಹಠಮಾರಿ ಧೋರಣೆಯನ್ನು ಹೊಂದಿರುತ್ತಾನೆ. ಇತ್ತ ತಾಯಿಯೂ ಸಹ ಅವನ ತಾಳಕ್ಕೆ ತಕ್ಕಂತೆ ಕುಣಿಯುವುದರಿಂದ ಅವನು ದುಷ್ಟ ವ್ಯಕ್ತಿಯಾಗುತ್ತಾನೆ. ಈ ದುಷ್ಟಗುಣವೇ ಸ್ತುತಿಯನ್ನು ಅತ್ಯಾಚಾರಗೈಯಲು ಉದಯನ್ನು ಪ್ರೇರೇಪಿಸುತ್ತದೆ. ಅವಳು ತನ್ನ ಸೋದರಮಾವನ ಮಗಳೂ ಎಂಬ ಸಂಬಂಧವನ್ನೂ ಅವನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅತ್ತ ದೀಪಕ್‌ನ ತಾಯಿಯೂ ಸಹ ತನ್ನ ಅಣ್ಣ ಎಂಬ ಸಂಬಂಧವನ್ನು ಮರೆತು ಆಸ್ತಿಗಾಗಿ ಕಾಡಿ-ಬೇಡಿ ಬಡಿದಾಡುವ ಮನೋಭಾವನೆಯನ್ನು ಹೊಂದಿದವಳಾಗಿರುತ್ತಾಳೆ. ಸ್ತುತಿ ದೀಪಕ್‌ನನ್ನು ಮದುವೆಯಾಗಲು ನಿರಾಕರಿಸಿದರೂ ಅವರ ಕುಟುಂಬದ ಮೇಲೆ ವಿಷಕಾರುವ ಹಂತಕ್ಕೆ ಬಂದು ಅಣ್ಣ ಚನ್ನೇಗೌಡನ ಕನಸಿನ ಆಸ್ಪತ್ರೆಗೆ ಬೆಂಕಿಹಚ್ಚಿ ಸೇಡು ತೀರಿಸಿಕೊಳ್ಳುತ್ತಾಳೆ. ಇಡೀ ಕಾದಂಬರಿ ತುಂಬಾ ಇವರ ವಿರಾಟರೂಪವೇ ತುಂಬಿಕೊಂಡಿದೆ.
ಹೊನ್ನೇಗೌಡ, ಚನ್ನೇಗೌಡ, ಸ್ತುತಿ, ಉದಯ, ಶಾರದಮ್ಮ, ಗಣೇಶ ಎಂಬ ಪಾತ್ರಗಳು ಮಾನವೀಯತೆಗೆ ಬೆಲೆಕೊಡುವ ವ್ಯಕ್ತಿಗಳಾಗಿ ಕಾಣುತ್ತಾರೆ. ಇದರಲ್ಲಿ ಬಹಳಷ್ಟು ಪಾತ್ರಗಳು ದುರಂತಕ್ಕೀಡಾಗುತ್ತವೆ. ಹೊನ್ನೇಗೌಡ ವನಜಾಳ ಗಂಡ. ಆದರೂ ಇವನ ವ್ಯಕ್ತಿತ್ವ ಹೆಂಡತಿಗಿಂತ ಭಿನ್ನವಾಗಿಯೇ ಇರುತ್ತದೆ. ಹೆಂಡತಿಗೆ ಏನು ಹೇಳಿದರೂ ಕೇಳದ ಮನಸ್ಥಿತಿ ಇರುವುದರಿಂದ ಮತ್ತು ಮುಖ್ಯವಾಗಿ ಅವಳ ಮತ್ತು ಮಗನ ದುರ್ನಡತೆ ಕಂಡು ಮನನೊಂದು ಹೆಂಡತಿ ಮಗನನ್ನೇ ಬಿಟ್ಟುಹೋಗುವ ವಿದ್ರಾವಕ ಸ್ಥಿತಿಯು ಹೊನ್ನೇಗೌಡನದಾಗುತ್ತದೆ. ಚನ್ನೇಗೌಡ ಮತ್ತು ಸ್ತುತಿ ಇಬ್ಬರೂ ದುರಂತಕ್ಕೀಡಾಗುವ ಪಾತ್ರಗಳು. ಇವರು ಸ್ಥಿತಿವಂತರಾಗಿದ್ದರೂ ನೆಮ್ಮದಿ ಇಲ್ಲವರು. ಸ್ತುತಿಗೆ ಜನ್ಮ ನೀಡುವಾಗಲೇ ಹೆಂಡತಿ ಸುನಂದಳನ್ನು ಕಳೆದುಕೊಂಡ ಚನ್ನೇಗೌಡ ಅನಾಥಪ್ರಜ್ಞೆಯಿಂದ ಬದುಕುತ್ತಾನೆ. ತಂಗಿ ವನಜಾ ಮತ್ತವಳ ಮಗ ದೀಪಕ್‌ನಿಂದ ನಲುಗಿ ಚನ್ನೇಗೌಡ ಸತ್ತುಹೋದರೆ, ಮಗಳು ಸ್ತುತಿ ತನ್ನ ಶೀಲವನ್ನೇ ಕಳೆದುಕೊಂಡು ಬದುವ ಸ್ಥಿತಿ ನಿರ್ಮಾಣವಾಗುತ್ತದೆ. ಉದಯನ ಸ್ಥಿತಿಯೂ ಇದಕ್ಕಿಂತ ಬೇರೇನಲ್ಲ. ತನ್ನ ತಾಯಿ ಮತ್ತು ಸಾಕಿ-ಸಲುಹಿದ ಚನ್ನೇಗೌಡ ಇಬ್ಬರನ್ನೂ ಕಳೆದುಕೊಂಡು ಅನಾಥನಾಗುತ್ತಾನೆ. ಅದಕ್ಕಿಂತಲೂ ಮುಖ್ಯವಾಗಿ ತಾನು ಇಷ್ಟಪಟ್ಟ ಸ್ತುತಿಯು ದೀಪಕ್‌ನಿಂದ ಅತ್ಯಾಚಾರಕ್ಕೆ ಒಳಗಾಗಿದ್ದರೂ ಅದನ್ನು ಸ್ತುತಿ ಅವನಿಂದ ಮುಚ್ಚಿಟ್ಟಿದ್ದು ನಲುಗಿಹೋಗುವಂತೆ ಮಾಡುತ್ತದೆ. ಆದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಾನೆ. ಶಾರದಮ್ಮಳೂ ಸಹ ತನ್ನ ಗಂಡನನ್ನು ಕಳೆದುಕೊಂಡು ತನ್ನ ಉಪಜೀವನಕ್ಕಾಗಿ ಚನ್ನೇಗೌಡರ ಮನೆಯಲ್ಲೇ ಉಳಿದುಕೊಳ್ಳುತ್ತಾಳೆ. ಜನರ ಇಲ್ಲ-ಸಲ್ಲದ ಆರೋಪಗಳಿಂದ ನಲುಗಿ ಕೊನೆಗೆ ಸಾಯುತ್ತಾಳೆ. ಸ್ತುತಿಯ ಬಗ್ಗೆ ಪ್ರೀತಿ ಹಾಗೂ ಅನುಕಂಪ ಹೊಂದಿದ್ದ ಸಹೃದಯಿ ಗಣೇಶನು ಅವಳ ಕೈಹಿಡಿದು ಜೀವನ ಪಯಣ ಸಾಗಿಸದೇ ಸಾವಿಗೀಡಾಗುವುದು ಓದುಗರಿಗೆ ಮರುಕ ಹುಟ್ಟಿಸದೇ ಇರಲಾರದು.
ಹೀಗೆ ಶ್ರೀಮತಿ ರತ್ನ ಕಾಳೇಗೌಡರ ನೆಲೆ ಈ ಕಾದಂಬರಿಯು ಮೇಲ್ನೋಟದಲ್ಲಿ ಅದು ಕುಟುಂಬದ ಮಧ್ಯೆ ನಡೆದ ಘಟನಾವಳಿಗಳು ಎನಿಸಿದರೂ ಅದು ಅಷ್ಟಕ್ಕೆ ಸೀಮಿತದಂತೆ ಕಾಣುವುದಿಲ್ಲ. ಕಾದಂಬರಿಕಾರರು ಒಂದೇ ಕುಟುಂಬದಲ್ಲಿ ನಡೆದ ಸಂಬAಧ ಮತ್ತು ಸಂಘರ್ಷಗಳನ್ನು ಒಂದೇ ಚೌಕಟ್ಟಿನಲ್ಲಿ ತಂದಂತೆ ತೋರಿದರೂ, ಒಬ್ಬ ಸ್ತ್ರೀ ತನ್ನ ಬದುಕು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾಳೆ ಎನ್ನುವುದು ಇಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಅವಳಿಗೆ ಒಂದೆಡೆ ನೆಲೆ ಸಿಗದೇ ಇದ್ದಾಗ ನಡೆಯುವ ದುರಂತವೇ ಈ ಕಾದಂಬರಿ.

ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊಬೈಲ್: ೯೪೪೮೫೭೦೩೪೦
E-mail:-skotnekal@gmail.com

Please follow and like us: