ಗಟ್ಟಿ ವಿಮರ್ಶೆಯಿಂದ ಬರಹಗಾರ ಬೆಳೆಯುತ್ತಾನೆ-ಬಿಸರಳ್ಳಿ


ಕೊಪ್ಪಳ : ಯಾವುದೇ ಬರಹಗಾರ,ಕವಿ ಬೆಳೆಯಬೇಕಾದರೆ ವಿಮರ್ಶೆಗಳು ಅತೀ ಅವಶ್ಯ. ಗಟ್ಟಿಯಾದ ಸತ್ವಯುತ ವಿಮರ್ಶೆ ಉತ್ತಮ ಕವಿ,ಬರಹಗಾರರನ್ನು ರೂಪಿಸುತ್ತದೆ.  ಆ ನಿಟ್ಟಿನಲ್ಲಿ ಕವಿಸಮಯ ನಿರಂತರ ಪ್ರಯತ್ನ ಮಾಡುತ್ತದೆ ಎಂದು ಪತ್ರಕರ್ತ, ಕವಿಸಮಯ ಸಂಚಾಲಕ ಸಿರಾಜ್ ಬಿಸರಳ್ಳಿ ಹೇಳಿದರು.  ಅವರಿಂದು ಕೊಪ್ಪಳದ ಕಾವ್ಯಾನಂದ ಉದ್ಯಾನವನದಲ್ಲಿ ಬಹುತ್ವ ಭಾರತ ಬಳಗ, ಕನ್ನಡನೆಟ್.ಕಾಂ ಕವಿಸಮೂಹ ದೀಪಾವಳಿ ನಿಮಿತ್ಯ ಹಮ್ಮಿಕೊಂಡಿದ್ದ ೧೯೬ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಹಿಂದೆ ಕವಿಸಮಯದ ಕಾರ್‍ಯಕ್ರಮದಲ್ಲಿ ಸಾಕಷ್ಟು ವಿಮರ್ಶೆಗೊಳಗಾಗಿದ್ದ ಹಲವಾರು ಕವಿಗಳು, ಬರಹಗಾರರು ಇಂದು ಸಾಕಷ್ಟು ಬೆಳೆದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ನಿಂತು ಹೋಗಿದ್ದ ಕವಿಸಮಯ ಕಾರ್‍ಯಕ್ರಮ ಪುನಃ ಆರಂಭಿಸಲಾಗಿದೆ. ಕವಿಸಮಯದ ಆರಂಭದ ದಿನಗಳಲ್ಲಿ ಭಾಗಹಿಸುತ್ತಿದ್ದ ಬಹಳಷ್ಟು ಜನ ಇಂದು ಸಾಕಷ್ಟು ಕೃತಿಗಳನ್ನು ಹೊರತಂದಿದ್ದಾರೆ.  ಕಳೆದ ಕೆಲವು ವರ್ಷಗಳಲ್ಲಿ  ಕವಿಗೋಷ್ಠಿಗಳಿಗೆ, ಚರ್ಚೆ, ಸಂವಾದಗಳಿಗೆ ಸಾಹಿತ್ಯಿಕ ಕಾರ್‍ಯಕ್ರಮಗಳಿಗೆ ಸಾಕಷ್ಟು ವೇದಿಕೆಗಳೂ ಸಿದ್ದವಾಗಿವೆ. ಇದರಿಂದ ಬಹಳಷ್ಟು ಕವಿ,ಕವಯತ್ರಿಯ್ರರಿಗೆ ಅನುಕೂಲವೂ ಆಗಿದೆ. ನಮ್ಮ ಭಾಗದ ಸಾಹಿತ್ಯದ ಗಂಭೀರ ಚರ್ಚೆಗಳಾಗಬೇಕಿದೆ. ಕವಿಸಮಯ ಕಾರ್ಯಕ್ರಮವನ್ನು ಎಲ್ಲರ ಸಲಹೆಗಳ ಮೇರೆಗೆ ಮತ್ತಷ್ಟು ಹೊಸ ರೂಪದೊಂದಿಗೆ ಮುಂದುವರೆಸೋಣ. ಕಾವ್ಯವನ್ನು, ಬರಹಗಳನ್ನು ಹೊಸ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸೋಣ ಎಂದು ಹೇಳಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಶಿವಪ್ರಸಾದ ಹಾದಿಮನಿ- ಕನ್ನಡನುಡಿ ಕನ್ನಡಗುಡಿ, ವಿಜಯ ಅಮೃತರಾಜ್ ಯಾಕೋ ಏನೋ ಎಲ್ಲವೂ ಸರಿಯಿಲ್ಲ ಎನಿಸುತ್ತಿದೆ, ವೀರಣ್ಣ ಹುರಕಡ್ಲಿ-ದೀಪದ ಸಾಲು, ಕುರುವತ್ತಿಗೌಡ-ಪರಮಾತ್ಮ, ಎ.ಪಿ.ಅಂಗಡಿ- ಅತ್ತೆಗೊಂದು ಕಾಲ,ಸೊಸೆಗೊಂದು ಕಾಲ, ಬಾಳಪ್ಪ ವೀರಾಪೂರ ಕಾಮಾಗ್ನಿ, ಮಂಜು ಟಿ-ದೀಪ ಸಾಲು, ಮಹಾಂತೇಶ ಮಲ್ಲನಗೌಡರ ಕರ್ನಾಟಕದ ಕುವರಿ, ಸಿರಾಜ್ ಬಿಸರಳ್ಳಿ -ಮಣ್ಣಿನ ಹಣತೆಯ ಸ್ವಗತ ಕವಿತೆಗಳನ್ನು ವಾಚನ ಮಾಡಿದರು.
ಕವಿತೆಗಳ ವಾಚನದ ನಂತರ ಮಾತನಾಡಿದ ಡಾ.ಮಹಾಂತೇಶ ಮಲ್ಲನಗೌಡರ ಕವಿಸಮಯ ಒಂದು ದೊಡ್ಡ ಪ್ರಯತ್ನ. ಮತ್ತೊಮ್ಮೆ ಪ್ರಾರಂಭವಾಗಿದ್ದು ಸಂತಸದ ಸಂಗತಿ. ಇಂದಿನ ಕವಿಸಮಯದಲ್ಲಿ ಮಾರ್ಮಿಕವಾದ ಕವಿತೆಗಳು , ಗಂಭೀರವಾದ ಕವಿತೆಗಳು ವಾಚನಗೊಂಡಿವೆ. ಇಂದು ಹೊರಗಿನ ಬೆಳಕಿಗಿಂತ ಅಂತರಂಗದ ಬೆಳಕು ಬೇಕಾಗಿದೆ. ಇಂದಿನ ಸಾಮಾಜಿಕ ಪರಸ್ಥಿತಿ ಬಂಗಾರಕ್ಕೆ ತುಕ್ಕು ಹಿಡಿದರೆ ಕಬ್ಬಿಣದ ಗತಿ ಏನು ಎಂಬಂತಾಗಿದೆ ಎಂದು ವಿಷಾಧಿಸಿದರು. ಹಿರಿಯ ಕವಿ ವೀರಣ್ಣ ಹುರಕಡ್ಲಿ ಮಾತನಾಡಿ ಮಾನವನ ಅಂತರಂಗವೊಂದು ರಣರಂಗದಂತೆ. ಎಲ್ಲರೊಳಗೆ ಎಲ್ಲ ದುಷ್ಟತನಗಳನ್ನು ಮೀರುವ ಅಂತಃಶಕ್ತಿ ಇದೆ ಅದನ್ನು ಕಂಡುಕೊಂಡಾಗ ಸಾಮಾಜಿಕ ದುಷ್ಟತನಗಳು ದೂರವಾಗುತ್ತವೆ. ಕಾವ್ಯದ ಬೆಳಕಿನಲ್ಲಿ ಬದುಕು ನಡೆಯಬೇಕಿದೆ. ಅಜ್ಞಾನವನ್ನು ಹೋಗಲಾಡಿಸಬೇಕಿದೆ ಎಂದು ಹೇಳಿದರು. ಹಿರಿಯ ಕವಿ ಶಿವಪ್ರಸಾದ ಹಾದಿಮನಿ ಸ್ವಾಗತಿಸಿದರೆ, ವಂದನಾರ್ಪಣೆಗೈದ ಕವಿ ವಿಜಯ ಅಮೃತರಾಜ್ ನಮ್ಮ ಭಾಗದ ಬರಹಗಾರರ ಕೃತಿಗಳ ಕುರಿತು ಗಂಭೀರ ಚರ್ಚೆ, ವಿಮರ್ಶೆ ನಡೆಯಬೇಕಿದೆ ಎಂದು ಹೇಳಿದರು.

Please follow and like us: