ಶ್ರೀ ವಿಜಯ ದಾಸರು ಸಿನೆಮಾ ಚಿತ್ರಿಕರಣ : ಗವಿಮಠದ ಸ್ವಾಮೀಜಿ, ಸಂಸದ ಸಂಗಣ್ಣ, ಸಿವಿಸಿ ಅವರಿಂದ ಚಾಲನೆ

 • ಕೊಪ್ಪಳ, ಆನೆಗೊಂದಿ, ಹಂಪಿಯಲ್ಲಿ ಚಿತ್ರಿಕರಣ
  ಕೊಪ್ಪಳ:
  ಎಸ್‌ಪಿಜೆ ಮೂವೀಸ್ ರಾಯಚೂರು ಇವರ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ದಾಸವರೇಣ್ಯ ಶ್ರೀ ವಿಜಯ ದಾಸರು ಕನ್ನಡ ಚಲನಚಿತ್ರದ ಚಿತ್ರಿಕರಣ ಕೊಪ್ಪಳ ನಗರದ ಶ್ರೀ ಗವಿಮಠದಲ್ಲಿ ಶುಕ್ರವಾರ ನಡೆಯಿತು.
  ಚಿತ್ರಿಕರಣಕ್ಕೆ ಗವಿಮಠದ ಶ್ರೀ ಅಭಿವನ ಗವಿಸಿದ್ದೇಶ್ವರ ಸ್ವಾಮೀಜಿ ಶುಭಾಶಿರ್ವಾದ
  ಮಾಡುವ ಮೂಲಕ ಚಾಲನೆ ನೀಡಿದರು. ಸಂಸದ ಸಂಗಣ್ಣ ಕರಡಿ, ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್ ಅವರು ಹಾಜರಿದ್ದು, ಚಿತ್ರಕರಣಕ್ಕೆ ಶುಭಹಾರೈಸಿದರು.
  ಈ ವೇಳೆ ಮಾತನಾಡಿದ ಸಂಸದ ಸಂಗಣ ಕರಡಿ ಅವರು, ಇಂದಿನ ಆಧುನಿಕ ಯುಗದಲ್ಲಿ ಜನರಲ್ಲಿ
  ಧಾರ್ಮಿಕ ಭಾವನೆ ಮೂಡಿಸುವಂತ ಸಿನೆಮಾಗಳ ಅಗತ್ಯವಿದೆ. ದಾಸ ಪರಂಪರೆ ಬೆಳೆದ ನಾಡು
  ನಮ್ಮದು. ವಿಜಯನಗರ ಕಾಲದಲ್ಲಿ ದಾಸ ಪರಂಪರೆ ಹೆಚ್ಚು ಉತ್ತುಂಗದಲ್ಲಿತ್ತು. ಹಂಪಿ,
  ಆನೆಗೊಂದಿ ಭಾಗದಲ್ಲಿ ಹೆಚ್ಚಾಗಿ ದಾಸಶ್ರೇಷ್ಠರು ಇದ್ದು ಅಂದಿನ ಕಾಲದಲ್ಲಿ ಸಮಾಜಕ್ಕೆ
  ದಾರಿ ತೋರಿದ್ದರು. ಅವರ ಮಾರ್ಗದರ್ಶನದಲ್ಲಿ ಅನೇಕ ಅರಸರು ಉತ್ತಮ ಆಡಳಿತ ನೀಡಿದ್ದರು.
  ಶ್ರೀ ವಿಜಯ ದಾಸರು ಸಿನೆಮಾ ನಮ್ಮ ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯ, ಧಾರ್ಮಿಕ
  ಭಾವನೆ ಹೆಚ್ಚಿಸಲಿದೆ. ಇಂತಹ ಧಾರ್ಮಿಕ ಚಿತ್ರಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ
  ಮೂಡಿಬರಬೇಕಿದೆ. ನಮ್ಮ ಭಾಗದವರೇ ಆದ ತ್ರಿವಿಕ್ರಮ ಜೋಶಿಯವರು ಈ ಸಿನೆಮಾದ ನಿರ್ಮಾಣ
  ಮಾಡುತ್ತಿರುವುದು ಸಂತಸದ ಸಂಗತಿ. ಇಡೀ ಸಿನೆಮಾ ತಂಡಕ್ಕೆ ಶುಭ ಹಾರೈಸುತ್ತೇನೆ ಎಂದು
  ಹೇಳಿದರು.
  ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್ ಅವರು ಮಾತನಾಡಿ, ನಮ್ಮ ಭಾಗದಲ್ಲೇ ನಡೆದಾಡಿ
  ಅಂದಿನ ಸಮಾಜಕ್ಕೆ ಮತ್ತು ಅರಸರಿಗೆ ಮಾರ್ಗದರ್ಶನ ಮಾಡಿದ್ದ ದಾಸಶ್ರೇಷ್ಠರಾದ ಶ್ರೀ
  ವಿಜಯ ದಾಸರ ಕುರಿತ ಸಿನೆಮಾ ನಿರ್ಮಾಣವಾಗುತ್ತಿರುವುದು ಬಹಳ ಸಂತೋಷದ ವಿಷಯ. ನಾಡಿಗೆ
  ದಾಸ ಪರಂಪರೆಯ ಕೊಡುಗೆ ಅಪಾರವಾಗಿದೆ. ಇಡೀ ದೇಶದಲ್ಲೇ ದಾಸ ಪರಂಪರೆ ಬೆಳೆದುಬಂದಿದ್ದು
  ನಮ್ಮ ರಾಜ್ಯದಲ್ಲಿ ಎನ್ನುವುದು ಹೆಮ್ಮೆಯ ಸಂಗತಿ. ಅಂತಹ ಶ್ರೇಷ್ಠ ಧಾರ್ಮಿಕ ಸಾಧಕರ
  ಕುರಿತು ಸಿನೆಮಾ ಮಾಡಿ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡುವುದು ಅಗತ್ಯವಾಗಿದೆ.
  ತ್ರಿವಿಕ್ರಮ ಜೋಶಿಯವರ ಈ ನಿರ್ಧಾರ ಉತ್ತಮವಾಗಿದೆ. ಈ ಸಿನೆಮಾ ಎಲ್ಲ ಕಡೆ ಉತ್ತಮವಾಗಿ
  ಪ್ರದರ್ಶನ ಕಂಡು ಯಶಸ್ವಿಯಾಗಲಿ ಎಂದು ಹರಸಿದರು.
  ಈ ಸಂದರ್ಭದಲ್ಲಿ ಸಿನೆಮಾದ ನಿರ್ಮಾಪಕ, ನಟರೂ ಆದ ತ್ರಿವಿಕ್ರಮ ಜೋಶಿ, ಸಿನೆಮಾದ
  ನಿರ್ದೇಶಕ ಡಾ. ಮಧುಸೂದನ ಹವಾಲ್ದಾರ್, ಸಾಹಿತಿ ಮಹಾಂತೇಶ್ ಮಲ್ಲನಗೌಡರ್, ಬಿಜೆಪಿ ಮುಖಂಡ ಪ್ರಾಣೇಶ ಮಾದಿನೂರ, ಶ್ರೀನಿವಾಸ ಜೋಶಿ, ಕ್ಯಾಮೆರಾಮನ್ ನಾರಾಯಣ ಸಿ. ಸೇರಿದಂತೆ
  ಅನೇಕರು ಇದ್ದರು.
  ಈ ಚಲನಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ತ್ರಿವಿಕ್ರಮ ಜೋಶಿ, ಶರತ್ ಜೋಶಿ, ಪ್ರಭಂಜನ
  ದೇಶಪಾಂಡೆ, ವಿಷ್ಣುತೀರ್ಥ ಜೋಶಿ ಗಂಗಾವತಿ, ಇಂಗಳಗಿ ನಾಗರಾಜ, ರಾಮಮೂರ್ತಿ ನವಲಿ, ಶರತ್‌ಕುಮಾರ್ ದಂಡೀನ್, ಕೆ.ಎಸ್. ಪುರುಷೋತ್ತಮ ರಡ್ಡಿ, ಪದ್ಮಕಲ ಕೆ. ಹಾಗೂ ನಿಶ್ಚಿತರಾವ್ ಕಲಾವಿದರಾಗಿ ಬಣ್ಣ ಹಚ್ಚಿದ್ದಾರೆ.
  ಕೊಪ್ಪಳ, ಹುಲಿಗಿ, ಆನೆಗೊಂದಿ, ಹೊಸಪೇಟೆ ತಾಲೂಕಿನ ಅನಂತಶಯನಗುಡಿ, ಹಂಪಿ ಸೇರಿದಂತೆ ಹಂಪಿ ಸುತ್ತಮುತ್ತಲ ಸ್ಥಳಗಳಲ್ಲಿ ಈ ಸಿನೆಮಾದ ಚಿತ್ರಿಕರಣ ನಡೆಯಲಿದೆ ಎಂದು ನಿರ್ಮಾಪಕ ತ್ರಿವಿಕ್ರಮ ಜೋಶಿ ತಿಳಿಸಿದ್ದಾರೆ.
Please follow and like us: