ಗಾಂಧಿಯವರನ್ನ ಮತ್ತೆ ನಮ್ಮೊಳಗೆ ಪ್ರತಿಷ್ಠಾಪಿಸಿಕೊಳ್ಳಬೇಕಿದೆ-ವಿಜಯ್ ಅಮೃತರಾಜ್

ಕೊಪ್ಪಳ : ಅಹಿಂಸಾತ್ಮಕ ಹೋರಾಟದ ಮೂಲಕ ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಗಾಂಧಿಜಿ.  ಗಾಂಧಿಜಿಯವರನ್ನು ಮತ್ತೆ ನಮ್ಮೊಳಗೆ ಪ್ರತಿಷ್ಠಾಪಿಸಬೇಕಿದೆ. ಈ ನಿಟ್ಟಿನಲ್ಲಿ ಕಾವ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕವಿ ವಿಜಯ ಅಮೃತರಾಜ್ ಹೇಳಿದರು.

ನಗರದ ಬಹುತ್ವ ಮೀಡಿಯಾ ಹೌಸ್ ನಲ್ಲಿ ಬಹುತ್ವ ಬಳಗ, ಕನ್ನಡನೆಟ್ ಬಳಗ ಹಮ್ಮಿಕೊಂಡಿದ್ದ ೧೯೫ ಕವಿಸಮಯ-ಗಾಂಧಿ ಜಯಂತಿ ವಿಶೇಷ ಕವಿಗೋಷ್ಠಿ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಾಡಿನೆಲ್ಲೆಡೆ ಸಂಚಲನ ಮೂಡಿಸಿದ್ದ ಕವಿಸಮಯ ತನ್ನ ೨ನೇ ಇನ್ನಿಂಗ್ಸ್ ಆರಂಭಿಸಿರುವುದು ನಿಜಕ್ಕೂ ಸ್ವಾಗತಾರ್ಹ. ಹೊಸಬರಿಗೆ ಹಳಬರಿಗೆ ಮತ್ತೆ ವೇದಿಕೆಯಾಗಲಿ . ಕವಿತೆಗಳ ಮೂಲಕ ಗಾಂಧಿ ಮತ್ತೊಮ್ಮೆ ಮೂಡವುಂತಾಗಲಿ, ಕವಿತೆಗಳ ಮೂಲಕ ಸಾತ್ವಿಕವಾಗಿಯೂ ವಿರೋಧವನ್ನು ವ್ಯಕ್ತಪಡಿಸಬಹುದು. ತಾಯ್ತನದ ಕವಿತೆಗಳು ಇಂದು ಬೇಕಾಗಿವೆ. ಹಿರಿಯ ಕವಿಗಳ ಕವಿತೆಗಳಲ್ಲಿರುವ ಪಕ್ವತೆಯನ್ನು ಕಿರಿಯರು ರೂಢಿಸಿಕೊಳ್ಳುವಂತಾಗಲಿ, ಕವಿಸಮಯ ಮತ್ತೆ ಮುಂದುವರೆಯಲಿ ಎಂದು ಹೇಳಿದರು. ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ವೀರಣ್ಣ ಹುರಕಡ್ಲಿ-ಗಾಂಧಿ ಜಯಂತಿ,  ಪುಷ್ಪಲತಾವಿ ಏಳುಬಾವಿ-ಏಕತೆಯ ಧರ್ಮ, ವಿಜಯ ಅಮೃತ್ ರಾಜ್ – ಕಾಲ ಕೆಟ್ಟಿದೆಯೋ,ಕೆಡಿಸಿದಂತೆ ಕಾಣುತ್ತಿದೆಯೋ, ಎ.ಪಿ.ಅಂಗಡಿ- ಗಾಂಧಿ ಟೋಪಿ, ಶಿವಪ್ರಸಾದ ಹಾದಿಮನಿ- ಗಾಂಧಿಜಿ ಮತ್ತು ನಾವು, ಸಿರಾಜ್ ಬಿಸರಳ್ಳಿ-ನನ್ನಜ್ಜನ ಹುಡುಕಿಕೊಡಿ ಕವಿತೆಗಳನ್ನು ವಾಚನ ಮಾಡಿದರು. 

ಸಂಚಾಲಕ ಸಿರಾಜ್ ಬಿಸರಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ 

ಈ ಹಿಂದೆ ಕವಿಸಮಯದಲ್ಲಿ ಸತತವಾಗಿ ಭಾಗವಹಿಸುತ್ತಿದ್ದ ವಿಠ್ಠಪ್ಪ ಗೋರಂಟ್ಲಿ, ಶಾಂತಾದೇವಿ ಹಿರೇಮಠ,  ಶಿವಾನಂದ ಹೊದ್ಲೂರ ಹಾಗೂ ಬಸವರಾಜ್ ಆಕಳವಾಡಿಯವರನ್ನು ಸ್ಮರಿಸಿದರು.   ಹಲವಾರು ವರ್ಷಗಳ ನಂತರ ಪುನಃ ಆರಂಭವಾಗಿರುವ ಕವಿಸಮಯ ಕಾರ್ಯಕ್ರಮವನ್ನು  ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಸಲು ತೀರ್ಮಾನಿಸಲಾಯಿತು. ಹಿರಿಯ ಉಪನ್ಯಾಸಕ ಶಿವಪ್ರಸಾದ ಹಾದಿಮನಿ ವಂದನಾರ್ಪಣೆ ಮಾಡಿದರು‌.

Please follow and like us: