ವೃತ್ತಿ ಬದ್ಧತೆಯೇ ಪತ್ರಕರ್ತರಿಗೆ ಮುಖ್ಯವಾಗಲಿ: ಮಹಾದೇವಪ್ಪ

ಸರಳ ಸಜ್ಜನಿಕೆಯ ಹಿರಿಯ ಪತ್ರಕರ್ತ ಮಹಾದೇವಪ್ಪ ಅವರಿಗೆ ಕೆಯುಡಬ್ಲ್ಯುಜೆ ಗೌರವ

ಬೆಂಗಳೂರು.
ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ವತಿಯಿಂದ ಮನೆಯಂಗಳದಲ್ಲಿ ಮನ ತುಂಬಿ ನಮನ ಕಾರ್ಯಕ್ರಮದಲ್ಲಿ ಸುದ್ದಿ ಮನೆಯ ಹಿರಿಯ ಪತ್ರಕರ್ತ
ಡಿ.ಮಹಾದೇವಪ್ಪ ಅವರನ್ನು
ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ತಂಡ ಅಭಿನಂದಿಸಿತು.

ಬರಹ ಮೊನಚಾದರೂ ಸರಳ, ಸಜ್ಜನಿಕೆಯನ್ನು ರೂಢಿಸಿಕೊಂಡಿರುವ ಹಿರಿಯ ಪತ್ರಕರ್ತರಾದ ಮಹಾದೇವಪ್ಪ ಅವರು ವಾಸವಿರುವ ನಾಗರಬಾವಿಯಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.

ಮೈಸೂರಿನ ಕೆ.ಆರ್.ನಗರದ ಸೌತನಹಳ್ಳಿಯವರಾದ ಮಹಾದೇವಪ್ಪ ನವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓದಿ ಎಂ.ಎ ಪತ್ರಿಕೋದ್ಯಮ ಮುಗಿಸಿ ಪರೀಕ್ಷೆಯಲ್ಲಿ ಫಲಿತಾಂಶ ಬರುವ ಮೊದಲೇ ಪತ್ರಿಕೆಯಲ್ಲಿ ವರದಿಗಾರಿಕೆ ಮಾಡುವ ಅವಕಾಶ ದೊರೆತಿದ್ದು ವಿಶೇಷ.

ಈ ಸಂದರ್ಭದಲ್ಲಿ ವೃತ್ತಿ ಪ್ರವೇಶ ಬಗ್ಗೆ ಮಾತನಾಡಿದ ಮಹಾದೇವಪ್ಪ ಅವರು
ಲೋಕವಾಣಿ, ವಿಶಾಲ ಕರ್ನಾಟಕ , ಕನ್ನಡಪ್ರಭ ಪತ್ರಿಕೆಗಳಲ್ಲಿ ಕೆಲಸಮಾಡುವ ವೇಳೆ ಖಾದ್ರಿ ಶಾಮಣ್ಣ, ಶ್ಯಾಮರಾವ್, ಆರ್.ಪಿ ಜಗದೀಶ್, ಕೆ.ಸತ್ಯನಾರಾಯಣ, ಗರುಡನಗಿರೆ ನಾಗರಾಜ್, ಮುಂತಾದ ಹಿರಿಯ ಪತ್ರಕರ್ತರ ಸಲಹೆ ಹಾಗೂ ಉತ್ತೇಜನವು ನನ್ನ ಪತ್ರಿಕೋದ್ಯಮದ ಕೃಷಿಗೆ ನೆರವಾಗಿ ಅದರಿಂದ ಹೆಚ್ಚಿನ ಅನುಭವ ಪಡೆಯಲು ಸಾಧ್ಯವಾಯಿತೆಂದು ಹೆಮ್ಮೆಯಿಂದ ಅವರು ಸ್ಮರಿಸಿಕೊಳ್ಳುತ್ತಾರೆ.

ಕನ್ನಡ ಪ್ರಭ ಪತ್ರಿಕೆಯಲ್ಲಿ ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲು ಶಿಕ್ಷೆ ಅನುಭವಿಸಿದವರಿಗೆ ನೀಡುತ್ತಿದ್ದ ಕಿರುಕುಳದ ಅತಿರೇಕ ಘಟನೆಗಳು ನಡೆದಾಗ ನ್ಯಾಯಾಂಗ ತನಿಖೆಗಾಗಿ ಆಗ್ರಹಿಸಿ ವರದಿ ಮಾಡಿದ್ದು ,
ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರ ಪುತ್ರ ಭರತ್ ಹೆಗಡೆ ಮೇಲೆ ಬಂದ ಎಂ.ಡಿ ಸೀಟು ಹಗರಣ, ಕಳ್ಳ ಬಟ್ಟಿ ಸಾರಾಯಿ ಕುಡಿದು ನೂರಾರು ಮಂದಿ ಪ್ರಾಣ ಕಳೆದು ಕೊಂಡಾಗ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ವರದಿ ಮಾಡಿದ್ದನ್ನು ನೆನಪಿಸಿಕೊಂಡರು.

ಕಾಳಿ ಪ್ರಾಜೆಕ್ಟ್, ಅಲಮಟ್ಟಿ ಜಲಾಶಯ ನಿರ್ಮಾಣದಿಂದ ಹಿಡಿದು, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರದ ಕುರಿತು, ಬೆಂಗಳೂರಿನ ಗಂಗಾರಾಂ ಕಟ್ಟಡ ಕುಸಿತದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ವರದಿ ಅಲ್ಲದೆ ಹಲವಾರು ರಾಜಕೀಯ ವಿಶ್ಲೇಷಣೆ, ಸಮಾಜ ಸುಧಾರಣೆ ಕುರಿತು ಚಿಂತನೆ ವರದಿಯಿಂದ ಆದ ಸಮಾಜಮುಖಿ ಬದಲಾವಣೆಯಿಂದ ತಾನು ಸಾರ್ಥಕತೆ ಪಡೆದಿರುವುದಾಗಿ ಅವರು ವಿವರಿಸಿದರು.

ವಿಜಯ ಕರ್ನಾಟಕ, ಸೂರ್ಯೋದಯ ಮುಂತಾದ ಪತ್ರಿಗಳಲ್ಲಿ ಸಂಪಾದಕರಾಗಿದ್ದ ಅವಧಿಯಲ್ಲಿ ಹಲವಾರು ಪತ್ರಕರ್ತರಿಗೆ ಉದ್ಯೋಗ ನೀಡುವ ಅವಕಾಶ ತಮ್ಮದಾಗಿತ್ತು. ಆ ಸಂದರ್ಭದಲ್ಲಿ ಉತ್ತಮ ಪತ್ರಕರ್ತರ ಗುಂಪು ಸುದ್ದಿ ಮನೆಗೆ ಬಂದಿತು ಎಂದರು.

ನಾವೆಲ್ಲಾ ಸುದ್ದಿ ಸಂಗ್ರಹಿಸಲು ಮತ್ತು ಅದನ್ನು ಪತ್ರಿಕಾ ಕಚೇರಿಗೆ ತಲುಪಿಸಲು ಪರದಾಡ ಬೇಕಾಗಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಅಧುನಿಕ ತಂತ್ರಜ್ಞಾನದಿಂದ ಎಲ್ಲವೂ ಅಂಗೈ ಮುಂದೆಯೇ ಲಭಿಸುವಂತಾಗಿದೆ. ಇಷ್ಟೆಲ್ಲಾ ಅನುಕೂಲತೆಗಳನ್ನು ಸದ್ಬಳಕೆ ಮಾಡಿಕೊಂಡು, ಯುವ ಪತ್ರಕರ್ತರು, ಮಾದ್ಯಮ ಪ್ರತಿನಿಧಿಗಳು ಆಸಕ್ತಿ, ನಿಷ್ಥೆ ಹಾಗೂ ಬದ್ದತೆಯಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಅವರಿಗೆ ಉತ್ತಮ ರೀತಿಯ ಸ್ಥಾನ, ಮಾನ ಲಭಿಸಿಲಿದೆ ಎಂದರು.

ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರಲ್ಲಿ ಸ್ವಾಭಿಮಾನ, ಸರಳ, ಸಜ್ಜನಿಕೆಗೆ ಹೆಸರಾದ ಮಹಾದೇವಪ್ಪ ನವರು ನಡೆ, ನುಡಿ ನಮಗೆಲ್ಲಾ ಆದರ್ಶಪ್ರಾಯವಾಗಿದೆ.
ಇವರ ಗರಡಿಯಲ್ಲಿ ಪಳಗಿದ ಅನೇಕ ಪತ್ರಕರ್ತರು ಸುದ್ದಿಮನೆಯಲ್ಲಿ ಈಗಲೂ ಕೆಲಸ ಮಾಡುತ್ತಿದ್ದಾರೆ ಎಂದರು.
ಮಹದೇವಪ್ಪನವರ ವೃತ್ತಿಯಲ್ಲಿನ ಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿ ಗಳು ಅವರನ್ನು ಅರಸಿ ಬಂದಿವೆ
ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೆಯುಡಬ್ಲ್ಯೂಜೆ ಖಾದ್ರಿ ಶಾಮಣ್ಣ ಪ್ರಶಸ್ತಿ, ಇತ್ತೀಚೆಗೆ ವಾರ್ತಾ ಇಲಾಖೆ ಕೊಡ ಮಾಡುವ ಪ್ರತಿಷ್ಠಿತ ಟಿಎಸ್ಸಾರ್‌ ಪ್ರಶಸ್ತಿಗೂ ಭಾಜನರಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಕೆಯುಡಬ್ಲ್ಯೂಜೆ ಹಾಗೂ ಸಮಸ್ತ ಕನ್ನಡಿಗರ ಪರವಾಗಿ ಹಿರಿಯ ಪತ್ರಕರ್ತ ಶ್ರೀ
ಡಿ.ಮಹಾದೇವಪ್ಪ ಅವರನ್ನು ಅಭಿನಂದಿಸುವುದಾಗಿ ಅಧ್ಯಕ್ಷ ಶಿವಾನಂದ ತಗಡೂರು ಅವರು ಹೇಳಿದರು.

ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಕಾರ್ಯಕ್ರಮ ದಲ್ಲಿ ಸ್ವಾಗತಿಸಿದರು. ನಿಯೋಜಿತ ಖಜಾಂಚಿ ವಾಸುದೇವ ಹೊಳ್ಳ.ಎಂ ವಂದಿಸಿದರು.
ರಾಜ್ಯ ಸಮಿತಿ ಸದಸ್ಯರಾದ ಸೋಮಶೇಖರ ಗಾಂಧಿ, ದೇವರಾಜ್ ಕೆ.ಆರ್., ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಸಮಿತಿ ಸದಸ್ಯ ಚಿಕ್ಕಣ್ಣ.ಎಸ್.ಡಿ, ಪತ್ರಿಕಾ ಛಾಯಾಗ್ರಾಹಕ ಶರಣ ಬಸಪ್ಪ ಮತ್ತಿತರರು ಹಾಜರಿದ್ದರು.

Please follow and like us: