ಆರ್‌ಸೆಟಿ ಸಂಸ್ಥೆಯಿಂದ ಹೆಚ್ಚು ಹೆಚ್ಚು ತರಬೇತಿಗಳನ್ನು ನೀಡಿ : ಬಿ.ಫೌಜಿಯಾ ತರನ್ನುಮ್

ಪ್ರಗತಿ ಪರಿಶೀಲನಾ ಸಭೆ


ಕೊಪ್ಪಳ, : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಹೆಚ್ಚು ಹೆಚ್ಚು ತರಬೇತಿಗಳನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಕೃಷಿ ಇಲಾಖೆಯ ಸಭಾಂಗಣದಲ್ಲಿ (ಸೆ.29) ಗುರುವಾರದಂದು ಆಯೋಜಿಸಿದ್ದ ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ (ಆರ್‌ಸೆಟಿ) ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಂಸ್ಥೆಯಲ್ಲಿ ತರಬೇತಿಗಳನ್ನು ಪಡೆದ ಯುವಜನರಿಗೆ ಉದ್ಯೋಗ ಸೌಲಭ್ಯಗಳು ಸಿಗುವಂತಹ ವಾತಾವರಣವನ್ನು ನಿರ್ಮಿಸುವಂತೆ ಮತ್ತು ಅತಿ ಹೆಚ್ಚು ಆರ್ಸೆಟಿ ಬಜಾರಗಳನ್ನು ಮಾಡುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಯುವಜನರ ಅವಶ್ಯಕತೆ ಹಾಗೂ ಸಾರ್ವಜನಿಕರ ಆಸಕ್ತಿಗೆ ಅನುಗುಣವಾಗಿ ತರಬೇತಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತರಬೇತಿಯನ್ನು ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರ್‌ಸೆಟಿ ತರಬೇತಿ ಕೇಂದ್ರದಲ್ಲಿ ವರ್ಷದ 365 ದಿನವೂ ತರಬೇತಿಗಳು ನಿಡಬೇಕು ಎಂಬ ನಿಯಮವಿದೆ. ಅದರಂತೆ ಹೈನುಗಾರಿಕೆ, ಕೋಳಿ ಹಾಗೂ ಕುರಿ ಸಾಗಾಣಿಕೆ, ಜೇನು ಕೃಷಿ, ಅಣಬೆ ಕೃಷಿ, ಟೈಲರಿಂಗ್, ಉಪ್ಪಿನಕಾಯಿ ತಯಾರಿಕೆ, ಮೊಬೈಲ್ ರಿಪೇರಿ ಸೇರಿದಂತೆ ಒಟ್ಟು 65 ವಿಷಯಗಳಲ್ಲಿ ಈಗಾಗಲೇ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಹೊರತಾಗಿಯೂ ಜಿಲ್ಲೆಯ ಜನರ ಬೇಡಿಕೆ, ಆಸಕ್ತಿ ಏನು ಎಂಬುದನ್ನು ಅರಿತು ಅದಕ್ಕೆ ಅನುಗುಣವಾಗಿ ತರಬೇತಿ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
2021-22 ನೇ ಸಾಲಿನಲ್ಲಿ ಎಸ್.ಬಿ.ಆಯ್ ಆರ್ಸೆಟಿ ಕೊಪ್ಪಳದವರು “ಎಎ’’ ಗ್ರೇಡ್ ಪಡೆದಿದ್ದಕ್ಕೆ ಸಿಇಒ ಅವರು ಸಂಸ್ಥೆಯ ಅಧಿಕಾರಿಗಳನ್ನು ಅಭಿನಂದಿಸಿದರು.

ಸಭೆಯಲ್ಲಿ ಜಿ.ಪಂ. ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಆರ್‌ಸೆಟಿ ನಿರ್ದೇಶಕ ಮಧುಸೂಧನ್ ರಾವ್, ಜಂಟಿ ಕೈಗಾರಿಕಾ ನಿರ್ದೇಶಕ ಎಸ್.ಎಂ. ಚೌವ್ಹಾಣ, ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕರಾದ ವಿರೇಂದ್ರ ಕುಮಾರ, ಜಿಲ್ಲಾ ಖಾದಿ ಮತ್ತು ಗ್ರಾಮೋಧ್ಯೋಗಾಧಿಕಾರಿ ಕೆ.ವಿರೇಶ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಭಾರತಿ ಬಿದ್ರಿಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us: