ಕಾಡುಬೆಟ್ಟದ ಜನ ಮತ್ತು ಜಾಗದ ರೋಮಾಂಚಕ ದೈವಕಥೆ, ದಂತಕಥೆ…Kantar Cinema Review

ಕಾಂತಾರ ಸಿನಿಮಾ ವಿಮರ್ಶೆ

-ಬಸವರಾಜ ಕರುಗಲ್.
“ಹ್ವೋ…” ಇದು ಕಾಂತಾರ ಸಿನಿಮಾದ ಬಹುತೇಕ ಕಡೆ ಕಿವಿಗಪ್ಪಳಿಸುತ್ತಿದ್ದಂತೆ, “ವಾವ್ಹ್…” ಎನ್ನಿಸುವ ರೋಮಾಂಚನ. ಕೊನೆಯ 18 ನಿಮಿಷಗಳಲ್ಲಿ ರಿಷಬ್ ಅಕ್ಷರಶಃ ದೈವವೇ ಮೈಮೇಲೆ ಬಂದಂತೆ ನಟಿಸಿ ಅಚ್ಚರಿ ಮೂಡಿಸಿದ್ದಾರೆ. ರಿಷಬ್ ಇಲ್ಲಿ ನಿರ್ದೇಶನ, ನಟನೆ ಎರಡರಲ್ಲೂ ಅತ್ಯದ್ಭುತ.

ಕಥೆ ತುಂಬಾ ಸಿಂಪಲ್. 1847ರಲ್ಲಿ ರಾಜನೊಬ್ಬನಿಗೆ ಎಲ್ಲ ಇದ್ದರೂ ನೆಮ್ಮದಿ, ನಿದ್ದೆ ಮಾತ್ರ ಇದ್ದಿಲ್ಲ. ಅವರೆರಡನ್ನೂ ಅರಸುತ್ತಾ ಹೊರಟ ಅರಸನಿಗೆ ಕಾಡುಬೆಟ್ಟದ ದೈವವನ್ನು ಕಂಡೊಡನೆ ನೆಮ್ಮದಿ ಸಿಕ್ಕಂತಾಗಿ, ದೈವವನ್ನು ಮನೆಯಲ್ಲಿರಲು ಕೋರುವ ರಾಜನಿಗೆ, ಊರ ಜನರಿಗೆ ಜಾಗ ಕೊಟ್ಟರೆ ನೆಮ್ಮದಿ ಸಿಗುತ್ತದೆ, ನಾನು ನಿಮ್ಮ ಮನೆ ಪ್ರವೇಶಿಸುತ್ತೇನೆ ಎನ್ನುತ್ತೆ ದೈವ. ರಾಜ ಒಪ್ಪುತ್ತಾನೆ.

1970ರ ಹೊತ್ತಿಗೆ ರಾಜ ಕುಟುಂಬ ಅರಮನೆ, ಜೀವ ತೊರೆದಿರುತ್ತದೆ. ಆದರೆ ರಾಜಮನೆತನದ ಕುಡಿಯೊಂದರ ಕಣ್ಣು ಜನರಿರುವ ಜಾಗದ ಮೇಲೆ ಬೀಳುತ್ತದೆ. ಭೂತಾರಾಧನೆಯಲ್ಲಿ ದೈವ ಬೇಡಿಕೆ‌ ಕೇಳೆಂದಾಗ ರಾಜಮನೆತನದ ಆ ಕುಡಿ ಜಾಗ ಬೇಕು ಎನ್ನುತ್ತಾನೆ, ಆಗ ದೈವ ನೆಮ್ಮದಿ ಬಿಟ್ಟರೆ ಜಾಗ ಸಿಗುತ್ತದೆ ಎನ್ನುತ್ತಿದ್ದಂತೆ ದೈವಕ್ಕೆ ಸವಾಲು ಹಾಕಿ ಸಾವನ್ನಪ್ಪುತ್ತದೆ ಕುಡಿ.

1990ರಲ್ಲಿ‌ ಮತ್ತದೇ ರಾಜಮನೆತನದ ಕುಡಿಯೊಂದರ ಚಿಗುರು ಮತ್ತದೇ ಕಾಡು ಮತ್ತು‌ ಜಾಗದ‌ ಕಣ್ಣು. ಇಲ್ಲಿಂದ ಹೈಜಾಕ್ ಆಗುವ ಕಥೆಯನ್ನು ರಿಷಬ್ ಹೊತ್ತು ಸಾಗಿದ್ದಾರೆ. ಇಡೀ ಸಿನಿಮಾದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಸಖತ್ ಮಿಂಚಿದ್ದಾರೆ.

ಇದರ ಜೊತೆಗೆ ಕಾಡಿನ ಸಂಪತ್ತು, ಪಶು-ಪ್ರಾಣಿಗಳ ಪರ ಇರುವ ಅರಣ್ಯಾಧಿಕಾರಿಯಾಗಿ, ಕಿಶೋರ್ ಮಧ್ಯಂತರದವರೆಗೆ ಖಳನಂತೆ, ಕೊನೆಗೆ ನಾಯಕನಂತೆ ಬದಲಾಗುತ್ತಾರೆ. ಭೂಒತ್ತುವರಿ, ಜಾತಿ ಅನಿಷ್ಠ, ಸಮಾನತೆಯ ಸೂಕ್ಷ್ಮ ಅಂಶಗಳನ್ನು ಅಲ್ಲಲ್ಲಿ‌ ಮನ ಮುಟ್ಟುವಂತೆ ಕಟ್ಟಿ ಕೊಡಲಾಗಿದೆ. ಇಡೀ ಸಿನಿಮಾ ಇದೇ ಅಂಶಗಳ ಸುತ್ತ ಇದ್ದರೂ ನಾಯಕನ ಹಂದಿಬೇಟೆ, ನಾಯಕಿ ಜೊತೆಗಿನ ಪ್ರೀತಿ ಪಾಠ ಬೆರೆತು ಎಲ್ಲೂ, ಯಾವ ವಿಷಯವೂ ಬೋರ್ ಎನಿಸುವುದಿಲ್ಲ. ಚಿತ್ರದ ಇಡೀ ಸಂಭಾಷಣೆ ಕರಾವಳಿ ಭಾಗದ ಘಮ ಹೊಂದಿದೆ. ಈ ಸಂಭಾಷಣೆ ಗಂಭೀರ ಸನ್ನಿವೇಶದಲ್ಲಿ ಗಂಭೀರವಾಗಿ, ಮಿಕ್ಕಂತೆ ಸಹಜ ಮಾತುಗಳಿದ್ದರೂ ನಗೆಯುಕ್ಕಿಸುತ್ತವೆ. ಕಥೆಗೆ ಕರಾವಳಿಯ ಪರಿಸರ ಪೂರಕವಾಗಿದೆ.

ಕಾಡುಬೆಟ್ಟದ‌ ಜನರು ರಾಜನಿಂದ‌ ಪಡೆದ ಜಾಗದಲ್ಲೇ ಉಳಿಯುತ್ತಾರಾ? ರಾಜವಂಶಸ್ಥ ಜಾಗ ಕಬಳಿಸಲು ಏನೇನು ಸಂಚು ರೂಪಿಸಿದ? ದೈವದ ಕಥೆ ಏನಾಯ್ತು? ಎಂಬಿತ್ಯಾದಿ‌ ಕುತೂಹಲ ಸಂಗತಿಗಳನ್ನು ಥೇಟರ್‌ನಲ್ಲೇ ನೋಡಬೇಕು.

ನಾಯಕಿಯಾಗಿ ಸಪ್ತಮಿಗೌಡ ಅಭಿನಯದಂತೆ ಸೌಂದರ್ಯದಲ್ಲೂ ಸಹಜ. ಅಚ್ಯುತ್ ರಾವ್ ನಟನೆ ಬಗ್ಗೆ ಹೇಳುವಂತಿಲ್ಲ. ನಾಯಕನಂತೆ ಇಡೀ ಸಿನಿಮಾದಲ್ಲಿ ಅವರಿಗೂ ಸಾಕಷ್ಟು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಪ್ರಮೋದ ಶೆಟ್ಟಿ ಪಾತ್ರದಲ್ಲಿ ಗಟ್ಟಿತನವಿಲ್ಲದಿದ್ದರೂ ಮನ ಮುಟ್ಟುವಂತೆ ನಟಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಅಲ್ಲಲ್ಲಿ ಪಂಚ್ ಡೈಲಾಗ್‌ಗಳ ಮೂಲಕ ನಗಿಸುತ್ತಾರೆ. ಅರವಿಂದ್ ಕಶ್ಯಪ್ ಕಂಬಳ, ಕತ್ತಲ, ಕಾನನದ ದೃಶ್ಯಗಳನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದ ಹಾಡುಗಳು ಪರವಾಗಿಲ್ಲ, ಆದರೆ ಹಿನ್ನಲೆ ಸಂಗೀತ ಅದ್ಭುತ. ಹೊಂಬಾಳೆ ಪ್ರೊಡಕ್ಷನ್ ಚಿತ್ರದ ಮೇಕಿಂಗ್‌ನಲ್ಲಿ ಎಲ್ಲೂ ರಾಜೀ ಆಗಿಲ್ಲ. ಕೆಲ ದೃಶ್ಯಗಳು ಅಲ್ಲು ಅರ್ಜುನ್‌ರ ಪುಷ್ಪಾ ಚಿತ್ರವನ್ನು ನೆನಪಿಸುತ್ತವೆ, ಆದರೆ ಕಥೆಯಲ್ಲಿ ಎಳ್ಳಷ್ಟೂ ಸಾಮ್ಯತೆ ಇಲ್ಲ.

ಇಂಥ ಕಥೆಗಳು ಕನ್ನಡದಲ್ಲಿ ಹೊಸತೇನಲ್ಲ, ಆದರೆ ಇಲ್ಲಿ ಕಥೆ ಹೇಳಿರುವ ರೀತಿ ವಿಶಿಷ್ಟವಾಗಿದೆ. ದಕ್ಷಿಣ ಕರ್ನಾಟಕದ ಜನರಿಗೆ ಸಿನಿಮಾ ಖಂಡಿತ ಇಷ್ಟವಾಗುತ್ತದೆ. ಉತ್ತರ ಕರ್ನಾಟಕ ಭಾಗದ‌ ಜನರಿಗೆ ದಕ್ಷಿಣ ಭಾಗದ ಕನ್ನಡ ಇಷ್ಟವಾದರೆ ಸಿನಿಮಾ ನೋಟಕ್ಕೆನೂ ಧಕ್ಕೆ ಇಲ್ಲ. ಒಟ್ಟಾರೆ ಮನೆ ಮಂದಿ ಮುಜುಗರ ಇಲ್ಲದೇ ಕಾಂತಾರ ಕಣ್ತುಂಬಿಕೊಳ್ಳಬಹುದು.

ಬಾಕ್ಸ್…
ರೇಟಿಂಗ್: **/ (3.5/5)
ಚಿತ್ರ: ಕಾಂತಾರ
ತಾರಾಗಣ: ರಿಷಬ್ ಶೆಟ್ಟಿ, ಸಪ್ತಮಿಗೌಡ, ಅಚ್ಯುತ್‌ಕುಮಾರ್, ಕಿಶೋರ್, ಪ್ರಮೋದಶೆಟ್ಟಿ
ನಿರ್ದೇಶನ: ರಿಷಬ್ ಶೆಟ್ಟಿ
ಸಂಗೀತ: ಅಜನೀಶ್ ಲೋಕನಾಥ್
ಛಾಯಾಗ್ರಹಣ: ಅರವಿಂದ್ ಕಶ್ಯಪ್
ನಿರ್ಮಾಣ: ಹೊಂಬಾಳೆ ಪ್ರೊಡಕ್ಷನ್.

Please follow and like us: